Advertisement

ಆಲಯಗಳನ್ನೂ ಆವರಿಸಿದ ಗ್ರಹಣ

10:54 AM Dec 27, 2019 | Suhan S |

ಬೆಂಗಳೂರು: “ಕಂಕಣ ಸೂರ್ಯಗ್ರಹಣ’ದ ಹಿನ್ನೆಲೆಯಲ್ಲಿ ಗುರುವಾರ ನಗರದ ಬಹುತೇಕ ದೇವಾಲಯಗಳು ಬೆಳಗ್ಗೆ 7.30ರಿಂದಲೇ ಬಾಗಿಲು ಮುಚ್ಚಿದ್ದವು. ಸೂರ್ಯಗ್ರಹಣದ ಅಂಗವಾಗಿ ದೇವಸ್ಥಾನದ ಗರ್ಭಗುಡಿಯೊಳಗಿನ ಮೂಲ ಮೂರ್ತಿ ಹಾಗೂ ಎಲ್ಲ ಆಹಾರ ಸಾಮಗ್ರಿಗೂ ದರ್ಬೆ ಹಾಕಿ ಮುಚ್ಚಿಡಲಾಗಿತ್ತು.

Advertisement

ಕಂಕಣ ಸೂರ್ಯ ಗ್ರಹಣ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆ ವೇಳೆ ಹಲವು ದೇವಾಲಯಗಳಲ್ಲಿ ಮೂರ್ತಿ, ಗೋಪುರ ಸೇರಿದಂತೆ ದೇವಸ್ಥಾನದ ಶುದ್ಧೀಕರಣ ನಡೆಯಿತು. ಐತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಮೃತ್ಯುಂಜಯ ಹೋಮ, ಆದಿತ್ಯ ಹೃದಯ ಹೋಮ ಸೇರಿ ಹಲವು ರೀತಿಯ ಹೋಮ ಹವನಗಳು ನಡೆದವು.

ದನುರ್ಮಾಸದ ಹಿನ್ನೆಲೆಯಲ್ಲಿ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ, ಮಲ್ಲೇಶ್ವರ ಕಾಡು ಮಲ್ಲೇಶ್ವರ ದೇವಸ್ಥಾನ, ಚಾಮರಾಜ ಪೇಟೆಯ ಶ್ರೀ ಕೋಟೆ ನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಬೆಳಗ್ಗೆ 7.30ರ ವರೆಗೆ ಭಕ್ತರ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಗೆ ದೇವಾಲಯ ತೆರೆಯಲಾಗಿತ್ತು.

 ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ಹೋಮ-ಹವನ: ಕೆಂಪೇಗೌಡ ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಬೆಳಗ್ಗೆ 11.30ರವರೆಗೆ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಗ್ರಹಣ ಮುಗಿದ ಬಳಿಕ ದೇವಾಲಯದ ಶುಚಿತ್ವ ಕಾರ್ಯ ನಡೆಯಿತು. ನಂತರ ಆದಿತ್ಯ ಹೃದಯ ಹೋಮ, ಆದಿತ್ಯ ನವಗ್ರಹ ಹೋಮ, ಸೂರ್ಯಕೇತು ಮೃತ್ಯುಂಜಯ ಹೋಮ ಸೇರಿದಂತೆ ಇನ್ನಿತರು ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು ಎಂದು ಗವಿಗಂಗಾ ಧರೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಸೋಮಶೇಖರ್‌ ದೀಕ್ಷಿತ್‌ ಅವರು ಮಾಹಿತಿ ನೀಡಿದರು.

ಬನಶಂಕರಿ ದೇವಾಲಯದಲ್ಲೂ ಪೂಜೆ: ಗ್ರಹಣದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 8 ಗಂಟೆ ಬನಶಂಕರಿ ದೇವಾಲಯದ ಬಾಗಿಲುಗಳನ್ನು ಮಚ್ಚಲಾಗಿತ್ತು. ಗ್ರಹಣದ ನಂತರ ದೇವಾಲಯಗಳಲ್ಲಿ ಶುಚಿತ್ವದ ಕಾರ್ಯಗಳು ನಡೆದವು. ಗ್ರಹಣಕ್ಕೆ ಸಂಬಂಧಿಸಿದಂತೆ ಸೂಚನಾ ಫ‌ಲಕದಲ್ಲಿ ಮಾಹಿತಿ ನೀಡಲಾಗಿತ್ತು. ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಹೋಮ, ಹವನ ಇತ್ಯಾದಿಗಳನ್ನು ಮಾಡುವ ಸಂಪ್ರದಾಯವಿಲ್ಲ. ಗ್ರಹಣದ ಬಳಿಕ ದೇವಾಲಯದಲ್ಲಿ ವಿವಿಧ ರೀತಿಯ ಪೂಜೆಗಳು ಮತ್ತು ಧಾರ್ಮಿಕ ಕಂಕೈರ್ಯಗಳು ನಡೆದವು ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ ತಿಳಿಸಿದ್ದಾರೆ.

Advertisement

ದೇವಾಲಯಗಳಲ್ಲಿ ಭಕ್ತರ ಸಾಲು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಗರದ ಹಲವು ದೇವಾಲಯಗಳಲ್ಲಿ ಭಕ್ತರ ದಂಡು ನೆರೆದಿತ್ತು. ಮಲ್ಲೇಶ್ವರದ ಕಾಡುಮಲ್ಲೇಶ್ವರ, ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರದ ಗಾಯತ್ರಿ ದೇವಸ್ಥಾನ, ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನ, ಜೆ.ಪಿ.ನಗರದ ಸತ್ಯಸಾಯಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರು ಸರದಿಯ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದರು. ಸೂರ್ಯ ಗ್ರಹಣ ನಂತರ ವಿವಿಧ ರೀತಿಯ ಪೂಜಾ ಕಂಕೈರ್ಯಗಳು ನಡೆದ ಹಿನ್ನೆಲೆಯಲ್ಲಿ ಭಕ್ತರಿಗೆ ತೀರ್ಥ, ಪ್ರಸಾದಗಳ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next