Advertisement

ನಿರಂತರ ಕುಡಿವ ನೀರಿನ ಯೋಜನೆಗೆ ಗ್ರಹಣ

12:25 PM Jun 21, 2019 | Suhan S |

ಕೊಳ್ಳೇಗಾಲ: ಸರ್ಕಾರ ಪಟ್ಟಣದ 31 ವಾರ್ಡುಗಳಿಗೆ 24/7 ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದು, ಕಾಮಗಾರಿ ಆರಂಭವಾಗುತ್ತಿದ್ದಂತೆ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕೆಲಸಕ್ಕೆ ಗ್ರಹಣ ಹಿಡಿದಿದೆ.

Advertisement

ಸರ್ಕಾರ ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಸುಮಾರು 64 ಕೋಟಿ ರೂ. ಅಂದಾಜಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಈಗಾಗಲೇ ಸಂಬಂಧಿಸಿದ ಗುತ್ತಿಗೆದಾರರು ಬೇಕಾದ ಎಲ್ಲಾ ಸಾಮಗ್ರಿಗಳನ್ನು ಖಾಸಗಿ ವ್ಯಕ್ತಿಗಳ ಜಮೀನೊಂದರಲ್ಲಿ ದಾಸ್ತಾನು ಮಾಡುವಲ್ಲಿ ಮುಂದಾಗಿದ್ದಾರೆ.

ತುರ್ತುಸಭೆ: ಪಟ್ಟಣದ 31 ವಾರ್ಡುಗಳಿಗೆ 24/7 ಕುಡಿಯುವ ನೀರು ಪೂರೈಕೆ ಯೋಜನೆಯ ಬಗ್ಗೆ ಶಾಸಕ ಎನ್‌.ಮಹೇಶ್‌ ಕಳೆದ ಜೂ.3ರಂದು ಪಟ್ಟಣದ ಸಿಡಿಎಸ್‌ ಭವನದಲ್ಲಿ ಪ್ರಗತಿಪರ ಸಂಘಟನೆಯ ಮುಖಂಡರ ತುರ್ತು ಸಭೆಯೊಂದನ್ನು ಕರೆದಿದ್ದ ವೇಳೆ ಸಭೆಗೆ ಆಗಮಿಸಿದ್ದ ಎಲ್ಲಾ ಪ್ರಗತಿಪರ ಸಂಘಟನೆಯ ಮುಖಂಡರು 24/7 ಕುಡಿಯುವ ನೀರು ಪೂರೈಕೆಗೆ ಮೀಟರ್‌ ಅಳವಡಿಸುವ ಯೋಜನೆಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಕರಪತ್ರ: ತುರ್ತು ಸಭೆಯ ಬಳಿಕ ಸಂಬಂಧಿಸಿದ ಕಾಮಗಾರಿಯ ಗುತ್ತಿಗೆದಾರರು ಸಾಮಗ್ರಿಗಳನ್ನು ಮತ್ತಷ್ಟು ಸಂಗ್ರಹ ಮಾಡಿ ಟ್ಯಾಂಕ್‌ ನಿರ್ಮಾಣಕ್ಕೆ ಪಟ್ಟಣದ ವಿವಿಧ ಬಡಾವಣೆ ಗಳಲ್ಲಿ ಸ್ಥಳ ನಿಗದಿ ಮಾಡಲು ಹೊರಟಿದ್ದರು. ಇದನ್ನು ಕಂಡ ಸಂಘಟಕರ ಕೆಂಗಣಿಗೆ ಗುರಿಯಾಗಿ ಸಂಘಟಕರು ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಬೃಹತ್‌ ಆಂದೋಲನವನ್ನು ಜೂ.25ರಂದು ನಡೆಸಲು ಉದ್ದೇಶಿಸಿ ಕರಪತ್ರವನ್ನು ಹಂಚುತ್ತಿದ್ದಂತೆ ಶಾಸಕರು ಮತ್ತು ನಗರಸಭೆಯ ಅಧಿಕಾರಿಗಳು ಗಲಿಬಿಲಿಗೊಂಡರು.

ಪ್ರತಿಭಟನೆ: ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕರಾಗಿದ್ದ ಎಸ್‌.ಜಯಣ್ಣ ಅವರ ಅವಧಿಯಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಈ ಯೋಜನೆಯನ್ನು ತಡೆಹಿಡಿಯುವ ಸಲುವಾಗಿ ನೀರಿನ ಹಕ್ಕಿಗಾಗಿ ಆಂದೋಲನ ನೇತೃತ್ವದಲ್ಲಿ ಈಗಿನ ಸ್ಥಳೀಯ ಶಾಸಕ ಎನ್‌.ಮಹೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ವಿರೋಧ ವ್ಯಕ್ತಪಡಿಸಿದ್ದರು.

Advertisement

ವಿಧಾನಸಭಾ ಚುನಾವಣೆಯ ಬಳಿಕ ಹೋರಾಟಗಾರರಾಗಿದ್ದ ಎನ್‌.ಮಹೇಶ್‌ ಅವರು ಶಾಸಕರಾಗಿ ಆಯ್ಕೆಗೊಂಡ ಬಳಿಕ ಕುಡಿಯುವ ನೀರು ಯೋಜನೆಗೆ ಮರು ಜೀವ ಬಂರುತ್ತಿದ್ದಂತೆ ಸಂಘಟಕರ ಕೆಂಗೆಣ್ಣಿಗೆ ಗುರಿಯಾದರು. ನಂತರ ಸಂಘಟಕರು ಈ ಯೋಜನೆಯನ್ನು ಸ್ಥಗಿತಗೊಳಿಸುವವರೆಗೂ ಹೋರಾಟ ಮಾಡುವ ದೃಢವಾದ ನಿಲುವಿಗೆ ಬಂದು ಮತ್ತಷ್ಟು ಸಂಘಟನೆಯನ್ನು ಬಲಗೊಳಿಸಿದ್ದರು.

ಸಾರ್ವಜನಿಕರಿಗೆ ತಿಳಿವಳಿಕೆ: ಸಂಘಟಕರು ತೀವ್ರ ಹೋರಾಟಕ್ಕೆ ಮುಂದಾಗುತ್ತಿದ್ದಂತೆ ಎಚ್ಚೆತ್ತ ಶಾಸಕರು ಈ ಯೋಜನೆಯನ್ನು ಹಿಂದಿನ ಶಾಸಕರು ಜಾರಿಗೆ ತಂದಿದ್ದರು. ಈ ಯೋಜನೆಯನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಬಾರದು ಎಂದು ಹೋರಾಟಕ್ಕೆ ಇಳಿದಿದ್ದು, ಆದರೆ ಕಾಮಗಾರಿಯನ್ನು ಖಾಸಗಿ ವ್ಯಕ್ತಿಗಳು ಪೂರೈಸಿದ ಬಳಿಕ ಇದರ ನಿರ್ವಹಣೆಯನ್ನು ನಗರಸಭೆಯವರು ನಡೆಸುವುದರಿಂದ ಸಾರ್ವಜನಿಕರಿಗೆ ಯೋಜನೆಯಿಂದ ಲಾಭವೇ ಹೊರತು ಇದರಿಂದ ಯಾವುದೇ ತರಹದ ಭಾರ ಜನರ ಮೇಲೆ ಬೀಳುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ನಾಕೊಡೆ, ನಿಬಿಡೆ ಎನ್ನುವ ರೀತಿಯಲ್ಲಿ 24/7 ಯೋಜನೆ ತೀವ್ರ ಶಾಸಕರ ಮತ್ತು ಹೋರಾಟಗಾರರ ನಡುವೆ ತೀವ್ರ ಪೈಪೋಟಿ ಮತ್ತು ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಯೋಜನೆಗೆ ಮತ್ತಷ್ಟು ಗ್ರಹಣ ಹಿಡಿಯವುದೇ ಅಥವಾ ಸಾರ್ವಜನಿಕರಿಗೆ ಯೋಜನೆ ಲಭ್ಯವಾಗಲಿದೆ ಕಾಲ ನಿರ್ಣಯ ಮಾಡಲಿದೆ.

 

● ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next