Advertisement

ಹಿರಿಯಡಕ ಜೈಲಿನಲ್ಲಿ ಇಸಿಜಿ ಟೆಲಿಮೆಡಿಸಿನ್‌: ರಾಜ್ಯದಲ್ಲೇ ಪ್ರಥಮ

05:21 PM Jan 11, 2022 | Team Udayavani |

ಉಡುಪಿ: ಕೈದಿಗಳ ಆರೋಗ್ಯ ದೃಷ್ಟಿಯಿಂದ, ಹೃದ್ರೋಗ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲೆಯ ಕಾರಾಗೃಹದಲ್ಲಿ ಇಸಿಜಿ ಟೆಲಿಮೆಡಿಸಿನ್‌ ಯೋಜನೆ ಜಾರಿಗೆ ಬಂದಿದೆ. ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮೇರೆಗೆ “ಕ್ಯಾಡ್‌’ (ಕಾರ್ಡಿಯಾಲಜಿ ಎಟ್‌ ಡೋರ್‌ ಸ್ಟೆಪ್‌) ಫೌಂಡೇಶನ್‌ ಹಿರಿಯಡಕ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಟೆಲಿಮೆಡಿಸನ್‌ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಕಾರಾಗೃಹದಲ್ಲಿ ನೂರಕ್ಕೂ ಅಧಿಕ ಕೈದಿಗಳಿದ್ದು, ಇದರಲ್ಲಿ ಮಧ್ಯ ವಯಸ್ಕರು, ವೃದ್ಧರು ಇರುತ್ತಾರೆ. ಜೈಲಿನ ವಾತಾವರಣದಲ್ಲಿ ಕೆಲವರಿಗೆ ಮಾನಸಿಕ ಒತ್ತಡ ಕಾರಣದಿಂದ ಎದೆ ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ ಹೃದ್ರೋಗ ಸಮಸ್ಯೆ ಇಲ್ಲದಿದ್ದರೂ ಗ್ಯಾಸ್ಟಿಕ್‌ ಸಮಸ್ಯೆ ಮೊದಲಾದ ಕಾರಣದಿಂದ ಎದೆ ಹುರಿ, ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವು ಕೈದಿಗಳಿಗೆ ಎದೆನೋವು ಆರಂಭಗೊಂಡಾಗ ಹೃದ್ರೋಗ ದೃಢಪಡಿಸಲು ತತ್‌ಕ್ಷಣ ಇಸಿಜಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದಕ್ಕಾಗಿ ಕೈದಿಗಳನ್ನು ಜೈಲಿನಿಂದ ದೂರದ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಬೇಕು. ಜೈಲಿನಲ್ಲಿ ಮೊದಲೇ ಕೈದಿಗೆ ಇಸಿಜಿ ಒಳಪಡಿಸಿ ಪರೀಕ್ಷೆ ಅನಂತರ ಹೃದಯದ ಬಡಿತ ಸಮಸ್ಯೆ ಕಂಡುಬಂದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಹೆಚ್ಚು ಅನುಕೂಲ. ಈ ಯೋಜನೆಯಡಿಯಲ್ಲಿ ಜೈಲಿನಲ್ಲಿ ಇಸಿಜಿ ಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿತ್ತು. ಈ ಬಗ್ಗೆ ಕ್ಯಾಡ್‌ನ‌ ಪ್ರವರ್ತಕ ಡಾ| ಪದ್ಮನಾಭ ಕಾಮತ್‌ ಅವರೊಂದಿಗೆ ಚರ್ಚಿಸಿ ಅವರ ಫೌಂಡೇಶನ್‌ ವತಿಯಿಂದ ಇಸಿಜಿ ಟೆಲಿಮೆಡಿಸಿನ್‌ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಡಿಎಚ್‌ಒ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜೈಲು ಸಿಬಂದಿಗೆ ತರಬೇತಿ
ಕಾರಾಗೃಹದ ಐದು ಸಿಬಂದಿಗೆ ಇಸಿಜಿ ಪರೀಕ್ಷೆ ನಡೆಸುವ ತರಬೇತಿಯನ್ನು ಕ್ಯಾಡ್‌ ಫೌಂಡೇಶನ್‌ ನೀಡಿದೆ. ಕೈದಿಗೆ ಎದೆನೋವು ಸಮಸ್ಯೆ ಕಾಣಿಸಿಕೊಂಡಲ್ಲಿ ಸಿಬಂದಿ ಪರೀಕ್ಷೆ ನಡೆಸಿ ಕ್ಯಾಡ್‌ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ರಿಪೋರ್ಟ್‌ ಪ್ರತಿಯನ್ನು ಅಪ್‌ಲೋಡ್‌ ಮಾಡಬೇಕು. ಈ ಗ್ರೂಪ್‌ನಲ್ಲಿ ತಜ್ಞ ವೈದ್ಯರು ವರದಿ ಆಧಾರದಲ್ಲಿ ರೋಗಿಯ ಹೃದ್ರೋಗ ಪರಿಸ್ಥಿತಿ ಅವಲೋಕಿಸಿ ಸಲಹೆ, ಸೂಚನೆ ನೀಡುತ್ತಾರೆ. ವರದಿಯಲ್ಲಿ ಹೃದ್ರೋಗ ಸಮಸ್ಯೆ ಇರುವುದು ಕಂಡು ಬಂದರೆ ತತ್‌ಕ್ಷಣ ಆಸ್ಪತ್ರೆ ಕರೆದೊಯ್ಯಲು ಸೂಚಿಸುತ್ತಾರೆ. ಪೆರ್ಣಂಕಿಲ, ಹಿರಿಯಡಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ವಾರಕ್ಕೆ ಎರಡು ದಿನ ವೈದ್ಯರು, ನರ್ಸ್‌ ಸಿಬಂದಿ ಕೈದಿಗಳ ಆರೋಗ್ಯ ತಪಾಸಣೆಗೆ ಕಾರಾಗೃಹಕ್ಕೆ ಬರುತ್ತಾರೆ.

ಸಂದರ್ಶಕರ ಭೇಟಿಗಿಲ್ಲ ಅವಕಾಶ
ಕೋವಿಡ್‌ ಮುಂಜಾಗ್ರತೆಯಿಂದ ಸರಕಾರದ ಆದೇಶದ ಮೇರೆಗೆ ಜೈಲಿನಲ್ಲಿ ಸಂದರ್ಶಕರ ಭೇಟಿಗೆ ಅವಕಾಶ ನಿರ್ಬಂಧಿಸಲಾಗಿದೆ. ವಕೀಲರ ಸಹಿತ, ಕೈದಿಗಳ ಕುಟುಂಬಸ್ಥರಿಗೂ ಭೇಟಿಗೆ ಅವಕಾಶವಿಲ್ಲ. ಇ-ಮುಲಾಖತ್‌ ಆ್ಯಪ್‌ ಮೂಲಕ ಮುಂಚಿತವಾಗಿ ನೋಂದಾಯಿಸಿ ವೀಡಿಯೋ ಕರೆಯಲ್ಲಿ ಮಾತನಾಡಬಹುದು. ದೂರವಾಣಿ (ಎಸಿಎಸ್‌) ವ್ಯವಸ್ಥೆ ಮೂಲಕ ಮನೆಯವರ ಜತೆಗೆ ಮಾತನಾಡಬಹುದು. ಜೈಲಿನ ಎಲ್ಲ ಕೈದಿಗಳಿಗೆ ಈ ಹಿಂದೇ ಶೇ. 100 ಕೋವಿಡ್‌ ಲಸಿಕೆ ಪೂರ್ಣಗೊಂಡಿದೆ. ಇತ್ತೀಚೆಗೆ ಬಂದ ಲಸಿಕೆ ಹಾಕಿಕೊಳ್ಳದ ಕೈದಿಗಳನ್ನು ಪಟ್ಟಿ ಮಾಡಿ ಆರೋಗ್ಯ ಇಲಾಖೆಗೆ ನೀಡಲಿದ್ದು, ಸಮೀಪದ ಪ್ರಾಥಮಿಕ ಆರೋಗ್ಯದ ಸಿಬಂದಿ ಲಸಿಕೆ ನೀಡುತ್ತಾರೆ.

ತುರ್ತು ಸೇವೆಗೆ ಅನುಕೂಲ
ರಾಜ್ಯದಲ್ಲೇ ಪ್ರಥಮವಾಗಿ ಹಿರಿಯಡಕ ಜೈಲು ಇಸಿಜಿ ಟೆಲಿಮೆಡಿಸಿನ್‌ ಸೌಕರ್ಯ ವ್ಯವಸ್ಥೆ ಹೊಂದಿದೆ. ಡಿಎಚ್‌ಒ ಅವರ ಮನವಿ ಮೇರೆಗೆ ಕ್ಯಾಡ್‌ ಫೌಂಡೇಶನ್‌ ಈ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಕೈದಿಗಳಿಗೆ ಎದೆನೋವು, ಹೃದಯ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಾಗ ಇಸಿಜಿ ಪರೀಕ್ಷೆ ನಡೆಸಿ ತಜ್ಞ ವೈದ್ಯರಿಂದ ತತ್‌ಕ್ಷಣ ಸಲಹೆ ಪಡೆಯಲು ಅನುಕೂಲವಾಗುತ್ತದೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ.
ಶ್ರೀನಿವಾಸ್‌, ಅಧೀಕ್ಷಕರು,
ಹಿರಿಯಡಕ ಜೈಲು

Advertisement

ಸಿಬಂದಿಗೆ ತರಬೇತಿ
ಫೌಂಡೇಶನ್‌ ವತಿಯಿಂದ 525ನೇ ಇಸಿಜಿ ಯಂತ್ರವನ್ನು ಟೆಲಿಮೆಡಿಸಿನ್‌ ಸೌಕರ್ಯ ದೊಂದಿಗೆ ಹಿರಿಯಡಕ ಜೈಲಿಗೆ ನೀಡಲಾಗಿದೆ. ಈ ಸೌಕರ್ಯವನ್ನು ಹೊಂದಿರುವ ಮೊತ್ತಮೊದಲ ಜೈಲು ಉಡುಪಿ ಜಿಲ್ಲೆಯದ್ದಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಮನವಿ, ಜೈಲು ಅಧೀಕ್ಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಜೈಲಿನ ಐದು ಸಿಬಂದಿಗೆ ಇಸಿಜಿ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿದೆ.
-ಡಾ| ಪದ್ಮನಾಭ ಕಾಮತ್‌, ಎಚ್‌ಒಡಿ ಕಾರ್ಡಿಯಾಲಜಿ, ಕೆಎಂಸಿ ಮಂಗಳೂರು, ಸಂಸ್ಥಾಪಕ ಅಧ್ಯಕ್ಷ, ಕ್ಯಾಡ್‌ ಫೌಂಡೇಶನ್‌

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next