ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆ ಬಳಿ ರೆಡ್‌ಕ್ರಾಸ್ ಸಂಸ್ಥೆ ಮೂಲಕ ಕೇಂದ್ರ ಸರಕಾರದ ವತಿಯಿಂದ ನಡೆಸಲ್ಪಡುತ್ತಿರುವ ಜನರಿಕ್ ಔಷಧ ಕೇಂದ್ರಕ್ಕೆ ಕೆಎಂಸಿ ಆಸ್ಪತ್ರೆಯ ಹೃದ್ರೋಗ ಚಿಕಿತ್ಸೆ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್ ಅವರ ‘ಮನೆ ಬಾಗಿಲಿಗೆ ಹೃದಯ ಚಿಕಿತ್ಸೆ’ ಯೋಜನೆಯ ಇಸಿಜಿ ಯಂತ್ರವನ್ನು ಶುಕ್ರವಾರ ನೀಡಲಾಯಿತು. ಈ ಮೂಲಕ ಇಸಿಜಿ ಯಂತ್ರದ ಸೌಲಭ್ಯವನ್ನೂ ಹೊಂದಿದ ಉಡುಪಿ ಜಿಲ್ಲೆಯ ಮೊದಲ ಜನೌಷಧ ಕೇಂದ್ರ ಎಂಬ ಹೆಗ್ಗಳಿಕೆಗೆ ಕುಂದಾಪುರ ಜನೌಷಧ ಕೇಂದ್ರ ಪಾತ್ರವಾಗಿದೆ.
ಇಸಿಜಿ ಯಂತ್ರವನ್ನು ಉಚಿತವಾಗಿ ನೀಡಲಾಗಿದ್ದು ಇಲ್ಲಿ ಹೃದ್ರೋಗಿಗಳು ಇಸಿಜಿ ತೆಗೆಸಿ ಅನಂತರದ ಚಿಕಿತ್ಸೆಗೆ ಯಾವುದೇ ವೈದ್ಯರ ಬಳಿ ತೆರಳಬಹುದು. ಅದೇ ಕೆಎಂಸಿಯ ಡಾ| ಪದ್ಮನಾಭ ಕಾಮತರ ಬಳಿ ತೆರಳಿದರೆ ಅವರ ವೈದ್ಯಕೀಯ ಸಲಹಾ ಶುಲ್ಕ ಇಲ್ಲದೇ ಚಿಕಿತ್ಸಾ ಸಲಹೆ ಉಚಿತವಾಗಿರುತ್ತದೆ.
ಈಗಾಗಲೇ ಉಡುಪಿ, ಕಾಸರಗೋಡು, ದ.ಕ., ಉತ್ತರ ಕನ್ನಡ, ಶಿವಮೊಗ್ಗ ಮೊದಲಾದ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಿಗೆ ದಾನಿಗಳ ಮೂಲಕ 100ರಷ್ಟು ಯಂತ್ರಗಳನ್ನು ವಿತರಿಸಲಾಗುತ್ತಿದೆ. ಇದರಿಂದಾಗಿ ಹೃದಯ ರೋಗಿಗಳು ತುರ್ತು ತಪಾಸಣೆಗೆ ದೂರದೂರದ ದೊಡ್ಡ ಆಸ್ಪತ್ರೆಗಳಿಗೆ ಹೋಗುವುದು, ಚಿಕಿತ್ಸೆಯಿಂದ ವಂಚಿತರಾಗಿ ಆಘಾತಕ್ಕೆ ಒಳಗಾಗುವುದು ತಪ್ಪಲಿದೆ. ಮಂಗಳೂರು ಹಾಗೂ ಕುಂದಾಪುರದ ಕೇವಲ 2 ಜನೌಷಧ ಕೇಂದ್ರಗಳಿಗೆ ಈ ಯಂತ್ರ ನೀಡಿದ್ದು ಹೃದ್ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲಿದೆ. ಮುಂದಿನ ವಾರ ಕಾರ್ಕಳದ ಜನೌಷಧ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ದಾನಿಯೊಬ್ಬರು ನೀಡುತ್ತಿದ್ದು ಇದನ್ನು ಶಾಸಕ ವಿ. ಸುನಿಲ್ ಕುಮಾರ್ ಅವರು ಹಸ್ತಾಂತರಿಸಲಿದ್ದಾರೆ.
ಜನೌಷಧ ಕೇಂದ್ರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕೇಂದ್ರದಲ್ಲಿ ಡಿ.ವಿ. ಸದಾನಂದ ಗೌಡರು ಸಚಿವರಾಗಿದ್ದು ದೇಶದೆಲ್ಲೆಡೆ ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರ ಇಡುವ ಮೂಲಕ ಬಡ ಹೃದ್ರೋಗಿಗಳಿಗೆ ತತ್‌ಕ್ಷಣದ ಚಿಕಿತ್ಸಾ ಸಹಾಯ ದೊರೆಯುವಂತೆ ಮಾಡಬೇಕು. ಈ ಮೂಲಕ ಜನೌಷಧ ಮಳಿಗೆಗೂ ಸಾರ್ವಜನಿಕರ ಭೇಟಿ ಹೆಚ್ಚಾದಂತಾಗುತ್ತದೆ ಎಂದು ಡಾ| ಕಾಮತ್ ಅವರು ಸಚಿವರ ಬಳಿ ಮನವಿ ಮಾಡಿದ್ದಾರೆ.
ಕೊಡುಗೆ ಸಂದರ್ಭ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಕಾರ್ಯಕ್ರಮಾಧಿಕಾರಿ ಮುತ್ತಯ್ಯ ಶೆಟ್ಟಿ, ಸದಸ್ಯ ಗಣೇಶ್ ಆಚಾರ್ ಇಸಿಜಿ ಸರಬರಾಜು ಹಾಗೂ ನಿರ್ವಹಣೆ ಮಾಡುವ ಸಂಸ್ಥೆಯ ವಿಜಯ್ ಅವರು ಉಪಸ್ಥಿತರಿದ್ದರು.