ಭೋಪಾಲ್ : ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಸಾಧುಗಳು ನಡೆಸಿರುವ ‘ಹಠಯೋಗ’ದ ಕುರಿತು ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ.
ಮಂಗಳವಾರ ಕಂಪ್ಯೂಟರ್ ಬಾಬಾ ಅವರು ದಿಗ್ವಿಜಯ್ ಸಿಂಗ್ ಅವರ ಸಮ್ಮುಖದಲ್ಲಿ ಹಠಯೋಗ ಪೂಜಾ ವಿಧಿಗಳನ್ನು ಇತರ ಸಾವಿರಾರು ಸಾಧುಗಳೊಂದಿಗೆ ಆರಂಭಿಸಿದ್ದರು.
ಬಿಜೆಪಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಜಿಲ್ಲಾ ಚುನಾವಣಾ ಅಧಿಕಾರಿ ಸುಧಾಮ ಖಡೆ ಅವರು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.
ಮೂರು ವಿಚಾರಗಳಿಗೆ ಸಂಬಂಧಿಸಿ ಆಯೋಗ ತನಿಖೆ ನಡೆಸುತ್ತಿದ್ದು, ಯಾರ ಅನುಮತಿ ಪಡೆದು ಕಂಪ್ಯೂಟರ್ ಬಾಬಾ ಹಠಯೋಗ ಆರಂಭಿಸಿದರು. 2.ದಿಗ್ವಿಜಯ್ ಸಿಂಗ್ ಅವರು ಸಾಧುಗಳಿಗೆ ಆಹ್ವಾನ ನೀಡಿದ್ದರೇ 3. ಕಂಪ್ಯೂಟರ್ ಬಾಬಾ ಯಾವ ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಮತ್ತು ಅವರ ಕಾರ್ಯಕ್ರಮಗಳಿಗಾಗಿ ಎಷ್ಟು ಹಣ ವ್ಯಯಿಸಲಾಗಿದೆ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ.
ಕಂಪ್ಯೂಟರ್ ಬಾಬಾ ಈ ಹಿಂದೆ ಬಿಜೆಪಿ ಬೆಂಬಲಿಸುತ್ತಿದ್ದು, ‘ರಾಮ ಮಂದಿರ ಕಟ್ಟಿಲ್ಲ ಹಾಗಾಗಿ ನಾನು ನರೇಂದ್ರ ಮೋದಿಯನ್ನು ಬೆಂಬಲಿಸುವುದಿಲ್ಲ’ ಎಂದಿದ್ದರು.
ಬಾಬಾಗೆ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವ ದರ್ಜೆಯ ಸ್ಥಾನ ಮಾನಗಳನ್ನು ನೀಡಲಾಗಿತ್ತು.