ವರ್ಷಗಳ ಕಾಲ ನಿದ್ರಿಸುತ್ತಲೇ ಇರುವ ಶಾಪಗ್ರಸ್ತ ಸ್ಲೀಪಿಂಗ್ ಬ್ಯೂಟಿ’ಯ ಕಥೆ ನಿಮಗೆ ಗೊತ್ತಿರಬಹುದು. ಆದರೆ, ತಿನ್ನದೇ ಉಪವಾಸ ಕೂರುವ ಶಾಪವೂ ಹಲವು ಮಹಿಳೆಯರನ್ನು ಕಾಡುವ ವಿಷಯ ಗೊತ್ತಿದೆಯಾ? ಅದುವೇ ‘ಈಟಿಂಗ್ ಡಿಸಾರ್ಡರ್’ ಎಂಬ ಸಮಸ್ಯೆ. ಅಂದರೆ, ಜೀರೋ ಫಿಗರ್, ಆರ್ ಗ್ಲಾಸ್ ಶೇಪ್ ಅಥವಾ ಇನ್ನಿತರ ನಿರ್ದಿಷ್ಟ ದೇಹ ಅಳತೆಯ ಗುರಿಗಳನ್ನು ತಲುಪಲು ಉಪವಾಸ ಮಾಡುವುದು ಅಥವಾ ವಿಚಿತ್ರ ಬಗೆಯ ಡಯಟ್ ಪಾಲಿಸುವುದು.
ತಿನ್ನದಿದ್ದರೆ ಸಮಸ್ಯೆ ಏನು? : ಗ್ಲಾಮರ್ ಕ್ಷೇತ್ರದ ಸೆಲೆಬ್ರಿಟಿಗಳಷ್ಟೇ ಅಲ್ಲ, ತೆಳ್ಳಗೆ ಕಾಣಿಸುವುದೇ ಸೌಂದರ್ಯ ಎಂದು ನಂಬಿರುವ ಅನೇಕ ಮಹಿಳೆಯರು ಈಟಿಂಗ್ ಡಿಸಾರ್ಡರ್‌ಗೆ ಒಳಗಾಗಿದ್ದಾರೆ. ದೇಹದಾಡ್ಯದಲ್ಲಿ ಆಸಕ್ತಿಯುಳ್ಳ ಯುವಕರು ಸ್ಟೀರಾಯ್ಡ್ ನ ಮೊರೆ ಹೋಗಿ ಸಾವನ್ನಪ್ಪುತ್ತಾರಲ್ಲ; ಈಟಿಂಗ್ ಡಿಸಾರ್ಡರ್ ಕೂಡ ಅಷ್ಟೇ ಅಪಾಯಕಾರಿ. ಈ ಸಮಸ್ಯೆ ಸ್ಲೋ ಪಾಯಿಸನ್ ಇದ್ದಂತೆ. ವರ್ಷಗಳ ಕಾಲ ದೇಹಕ್ಕೆ ಶಿಕ್ಷೆ ನೀಡುತ್ತಾ ಬಂದರೆ, ನಂತರ ಬೇಕೆಂದರೂ ಹೊಟ್ಟೆ ತುಂಬಾ ಉಣ್ಣಲು ಸಾಧ್ಯವಾಗುವುದಿಲ್ಲ. ಅದು ಖನ್ನತೆ, ಆತ್ಮವಿಶ್ವಾಸ ಕುಗ್ಗುವುದು ಇತ್ಯಾದಿ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಸಿವಾದರೂ ತಿನ್ನೋದಿಲ್ಲ!
ಕೆಲವು ಶಾಲಾ- ಕಾಲೇಜು ಹುಡುಗಿ ಯರು, ನಾನು ದಪ್ಪಗಿದ್ದೇನೆ, ಎಲ್ಲರೂ ನನ್ನನ್ನು “ದಪ್ಪ’, “ಡುಮ್ಮಿ’, “ಆನೆ’ ಅಂತ ಹೀಯಾಳಿಸ್ತಾರೆ, ನಾನೂ ಸಣ್ಣಗಾಗಬೇಕು ಅಂತ ಪಣ ತೊಡುತ್ತಾರೆ. ಹಸಿವಾದರೂ ಮೂರು ದೋಸೆ ತಿನ್ನುವಲ್ಲಿ ಒಂದು ದೋಸೆ ತಿನ್ನುವುದು, ರಾತ್ರಿ ಊಟ ಮಾಡದೇ ಮಲಗುವುದು, ಅನಗತ್ಯವಾಗಿ ಉಪವಾಸ ಮಾಡುವ ಅಭ್ಯಾಸಗಳನ್ನು ಶುರುಮಾಡಿಕೊಳ್ಳು ತ್ತಾರೆ. ಬೆಳೆಯುವ ವಯಸ್ಸಿನಲ್ಲಿ ಸರಿಯಾದ ಪೌಷ್ಟಿಕಾಂಶಗಳು ದೇಹಕ್ಕೆ ಸಿಗದೇ ಇರುವ ಕಾರಣ, ಇತರ ಅಂಗಗಳಿಗೆ ಪೆಟ್ಟಾಗುತ್ತದೆ! ದೃಷ್ಟಿಯ ಸಮಸ್ಯೆ,ದೇಹ ಎತ್ತರವಾಗಿ ಬೆಳೆಯದೇ ಇರುವುದು, ಮೊಡವೆ, ಬಾಯಿ ತುಂಬಾ ಹುಣ್ಣಾಗುವುದು, ಬಿಳಿ ಕೂದಲು, ಇತ್ಯಾದಿ ಸಮಸ್ಯೆಗಳು ಜೊತೆಯಾಗುವುದೇ ಆಗ.
ದೇಹ ದಂಡನೆ ಬೇಕೇ? : ಹಸಿವಾದಾಗಲೆಲ್ಲಾ ಬರೀ ನೀರು ಕುಡಿದರೆ ಸಾಕೆ? ಕಾರ್ ಓಡಬೇಕು ಎಂದರೆ ಪೆಟ್ರೋಲ್ ತುಂಬಿಸಲೇಬೇಕು ತಾನೇ? ಅಂತೆಯೇ ದೇಹದ ತ್ರಾಣ- ಪ್ರಾಣಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ. ಇದೆಲ್ಲಾ ಗೊತ್ತಿದ್ದರೂ ಇತರರ ಕಣ್ಣಿಗೆ ಸುಂದರವಾಗಿ ಕಾಣುವ ಸಲುವಾಗಿ ದೇಹಕ್ಕೆ ಶಿಕ್ಷೆ ನೀಡುತ್ತಾ, ಸಾವಿನ ಜೊತೆ ಜೂಜಾಡುವುದು ಅದೆಷ್ಟು ಸರಿ? ಇಂದೇನೋ ಜೀರೋ ಫಿಗರ್‌ನಿಂದ ಕೈ ತುಂಬಾ ಸಂಬಳ ಗಿಟ್ಟಿಸಿಕೊಂಡರೂ, ಈ ಈಟಿಂಗ್ ಡಿಸಾರ್ಡರ್ ನಿಂದಾಗಿ ನಾಳೆ ಹಾಸಿಗೆ ಹಿಡಿದರೆ ಕಥೆ ಏನು? ಶಾರ್ಟ್ ಕಟ್‌ಗಳು ಬೇಗನೆ ಗುರಿ ತಲುಪುವಲ್ಲಿ ನೆರವಾಗುತ್ತವೆ ನಿಜ. ಆದರೆ ಅವುಗಳ ಸೈಡ್ ಎಫೆಕ್ಟ್ ಪ್ರಾಣ ತೆಗೆಯುವಷ್ಟು ಅಪಾಯಕಾರಿಯಾಗಿ ರುತ್ತದೆ. ಇರುವುದು ಒಂದೇ ಜೀವ!
ಸರಿಯಾದ ರೀತಿಯಲ್ಲಿ ಬದುಕಬಹುದಲ್ಲವೇ? ನಿಯಮಿತ ವ್ಯಾಯಾಮ, ಕಸರತ್ತು ಮತ್ತು ಉತ್ತಮ ಆಹಾರ ಸೇವನೆಯಿಂದ ಫಿಟ್ ಆಗಿರಬಹುದು, ಆರೋಗ್ಯ ಕಾಪಾಡಬಹುದು, ಅಂದವಾಗಿಯೂ ಕಾಣಬಹುದು. ಹಾಗಿದ್ದಾಗ ಉಪವಾಸದಂಥ ಶಾರ್ಟ್ ಕಟ್ ಅಗತ್ಯವೇ? ಯೋಚಿಸಿ.
-ಅದಿತಿಮಾನಸ ಟಿ.ಎಸ್.