ಬೆಂಗಳೂರು: ಇಂದಿನ ವೇಗದ ಜಗತ್ತಿನಲ್ಲಿ ಆರೋಗ್ಯವೇ ಸಂಪತ್ತಾಗಿದೆ. ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶವಿರುವ ಸೂಪರ್ ಫುಡ್ ಗಳನ್ನು ಸೇರಿಸುವುದು ಅತ್ಯಗತ್ಯವಾಗಿದೆ. ಇಂತಹ ಪೌಷ್ಟಿಕಾಂಶವನ್ನು ನೀಡುವ ಉತ್ಪನ್ನವೆಂದರೆ ಬಾದಾಮಿ.
ಇಂತಹ ಬಾದಾಮಿಯಿಂದ ನಮ್ಮ ಆರೋಗ್ಯದ ಮೇಲೆ ಉಂಟಾಗುವ ಅತ್ಯುತ್ತಮ ಪರಿಣಾಮದ ಬಗ್ಗೆ ಆಯುರ್ವೇದ ತಜ್ಞರಾಗಿರುವ ಡಾ.ಮಧುಮಿತ ಕೃಷ್ಣನ್ ಅವರು ಇಲ್ಲಿ ಬೆಳಕು ಚೆಲ್ಲಿದ್ದಾರೆ.
ದಿನಕ್ಕೆ ಒಂದು ಹಿಡಿಯಷ್ಟು ಅಂದರೆ ಸುಮಾರು 22-23 ಬಾದಾಮಿಯನ್ನು ತಿಂದರೆ ಆರೋಗ್ಯ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಅವರು.
ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಾದಾಮಿಯನ್ನು ಬಳಸುವುದು ಆರೋಗ್ಯಕರ ಜೀವನಕ್ಕೆ ಸೋಪಾನವಾಗುತ್ತದೆ. ಇದೇ ಮಾರ್ಗವನ್ನು ಆಯುರ್ವೇದವೂ ಹೇಳುತ್ತದೆ. ಸಾಮಾನ್ಯವಾಗಿ ಬಾದಾಮಿಯು ಎಲ್ಲಾ ಋತುಗಳಲ್ಲೂ ಸೂಪರ್ ಫುಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾದಾಮಿಯು ಕೇವಲ ಮಧುಮೇಹ, ಹೃದ್ರೋಗಗಳು, ಅಧಿಕ ರಕ್ತದೊತ್ತಡ ಮತ್ತು ಇನ್ನೂ ಅನೇಕ ದೀರ್ಘಕಾಲೀನ ಕಾಯಿಲೆಗಳಿಗೆ ಉತ್ತಮ ಮದ್ದಾಗಿದೆಯಲ್ಲದೇ, ವಿಟಮಿನ್ ಇ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಪ್ರೋಟೀನ್, ಫೈಬರ್, ಕಾಪರ್ ಮತ್ತು ರೈಬೋಫ್ಲಾವಿನ್ ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಬಾದಾಮಿ ತಿನ್ನುವುದರಿಂದ ಹೃದ್ರೋಗಗಳು ಸಂಭವಿಸುವ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ ಎಂದು ಅವರು ತಿಳಿಸಿದ್ದಾರೆ.
ಆಯುರ್ವೇದದ ಪ್ರಕಾರ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಾದಾಮಿಯಲ್ಲಿರುವ ಗುಣಲಕ್ಷಣಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿರುವ ಡಾ.ಮಧುಮಿತ ಅವರು, ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು? ಎಂಬುದರ ಬಗ್ಗೆ ಕೆಲವು ಗೊಂದಲಗಳಿವೆ. ಅಮೇರಿಕಾದ ಆಹಾರ ಮಾರ್ಗಸೂಚಿಗಳು ದಿನಕ್ಕೆ ಸುಮಾರು 23 ಬಾದಾಮಿ ತಿನ್ನುವುದು ಉತ್ತಮ ಎಂದು ಸಲಹೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಬಾದಾಮಿಯನ್ನು ಅಡಕ ಮಾಡಿಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.
ಬಾದಾಮಿ ಸೇವನೆ ಆರಂಭಿಸುವವರು ಮೊದಲು ಎರಡು ಬಾದಾಮಿಗಳನ್ನು ನೆನಸಿ ಸಿಪ್ಪೆ ತೆಗೆದು ತಿನ್ನಬೇಕು. ಈ ಮೂಲಕ ನಿಧಾನವಾಗಿ ಬಾದಾಮಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ನಾವು ಏನನ್ನು ತಿನ್ನುತ್ತೇವೆ ಎನ್ನುವುದಕ್ಕಿಂತ ನಾವು ಏನನ್ನು ಜೀರ್ಣಿಸಿಕೊಳ್ಳುತ್ತೇವೆ ಎಂಬ ಮಂತ್ರವನ್ನು ಅಳವಡಿಸಿಕೊಳ್ಳುವುದು ಉತ್ತಮ. ಈ ಹಿನ್ನೆಲೆಯಲ್ಲಿ ಸೂಪರ್ ಫುಡ್ ಸೇವನೆ ಮಾಡುವಾಗ ಎಚ್ಚರಿಕೆ ವಹಿಸುವುದೂ ಅಷ್ಟೇ ಪ್ರಮುಖವಾಗಿರುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.