Advertisement

ಈಸ್ಟರ್‌ ಜಾಗರಣೆ, ವಿಶೇಷ ಪ್ರಾರ್ಥನೆ

06:00 AM Apr 01, 2018 | |

ಮಂಗಳೂರು/ಉಡುಪಿ: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ ಅನ್ನು ಕ್ರೈಸ್ತರು ರವಿವಾರ (ಎ. 1) ಆಚರಿಸಲಿದ್ದು, ಅದರ ಪೂರ್ವಭಾವಿಯಾಗಿ ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್‌ ಜಾಗರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮದ ಬಲಿಪೂಜೆ ನೆರವೇರಿತು.  

Advertisement

ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಡಿ’ಸೋಜಾ ಮತ್ತು ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಅವರು ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿ ಈಸ್ಟರ್‌ ಮೊಂಬತ್ತಿಯನ್ನು ಬೆಳಗಿಸಿದರು.  ಕೆಥೆಡ್ರಲ್‌ನ ರೆಕ್ಟರ್‌ ಫಾ| ಜೆ.ಬಿ. ಕ್ರಾಸ್ತಾ ಮತ್ತು ಉಡುಪಿಯಲ್ಲಿ ಪ್ರಧಾನ ಧರ್ಮಗುರು ಫಾ| ವಲೇರಿಯನ್‌ ಮಂಡೋನ್ಸಾ ಉಪಸ್ಥಿತರಿದ್ದರು. 

ಯೇಸು ಕ್ರಿಸ್ತರ ಪುನರುತ್ಥಾನ  ಕ್ರೈಸ್ತ ವಿಶ್ವಾಸದ ಬುನಾದಿ: ಬಿಷಪ್‌  ಅಲೋಶಿಯಸ್‌
ಶಿಲುಬೆಯಲ್ಲಿ ಮರಣವನ್ನಪ್ಪಿದ ಯೇಸು ಕ್ರಿಸ್ತರು ಮೂರನೇ ದಿನ ಪುನರುತ್ಥಾನಗೊಂಡಿದ್ದಾರೆ ಎಂಬ ನಂಬಿಕೆಯೇ ಕ್ರೈಸ್ತ ವಿಶ್ವಾಸದ ಬುನಾದಿ. ಆದ್ದರಿಂದ ಈಸ್ಟರ್‌ ಅಥವಾ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬಕ್ಕೆ ಕ್ರೈಸ್ತ ಧರ್ಮದಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದೆ ಎಂದು ಬಿಷಪ್‌ ಅವರು ತಮ್ಮ ಸಂದೇಶದಲ್ಲಿ ಹೇಳಿದರು. 

ಮರಣವನ್ನಪ್ಪಿದ ವ್ಯಕ್ತಿ ಮರಳಿ ಜೀವಂತಿಕೆ ಪಡೆದ ವಿದ್ಯಮಾನ ಮನುಕುಲದ ಇತಿಹಾಸದಲ್ಲಿಯೇ ಇಲ್ಲ; ಆದರೆ ದೇವ ಪುತ್ರ ಯೇಸು ಕ್ರಿಸ್ತರು ಮಾತ್ರ ಪುನರುತ್ಥಾನಗೊಂಡಿದ್ದಾರೆ ಎನ್ನುವುದು ಕ್ರೈಸ್ತರ ನಂಬಿಕೆ. ಯೇಸು ಕ್ರಿಸ್ತರು ಪುನರುತ್ಥಾನಗೊಂಡದ್ದು  ಮಾತ್ರವಲ್ಲ, ಬಳಿಕ ತನ್ನ ಶಿಷ್ಯರಿಗೆ ಕಾಣಿಸಿಕೊಂಡು ತಾನು ಸದಾ ಕಾಲ ನಿಮ್ಮ ಜತೆಗಿರುತ್ತೇನೆ ಎಂದು ನುಡಿದಿದ್ದರು. ಇದು ಯೇಸು ಪುನರುತ್ಥಾನಗೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಯೇಸು ಕ್ರಿಸ್ತರು ಪುನರುತ್ಥಾನ ಗೊಂಡಿದ್ದರಿಂದ ನಮಗೂ ಮರಣಾನಂತರ ಪುನರು ತ್ಥಾನದ ಭರವಸೆ ಇದೆ. ಈ ಭರವಸೆಯೇ ನಮ್ಮನ್ನು ಸತ್ಪಥದಲ್ಲಿ ಮುನ್ನಡೆಯಲು ಪ್ರೇರಣೆ ಒದಗಿಸುತ್ತದೆ. ಹಾಗಾಗಿ ಈ ಈಸ್ಟರ್‌ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಬಿಷಪ್‌ ಸಂದೇಶದಲ್ಲಿ ಹೇಳಿದರು. 

ಧರ್ಮ ಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಶನಿವಾರ ರಾತ್ರಿ ಈಸ್ಟರ್‌ ಜಾಗರಣೆ ಕಾರ್ಯಕ್ರಮಗಳು ಜರಗಿದ್ದು, ಸಂಬಂಧಪಟ್ಟ ಧರ್ಮಗುರುಗಳು ನೇತೃತ್ವ ವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next