Advertisement

ಇನ್ನು ಭೂಮಿಗಿಲ್ಲ ಕ್ಷುದ್ರಗ್ರಹ ಅಪ್ಪಳಿಸುವಿಕೆ ಭೀತಿ!

10:24 PM Sep 29, 2022 | Team Udayavani |

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಿರೀಟಕ್ಕೆ ಮತ್ತೂಂದು ಗರಿ ಸೇರ್ಪಡೆಗೊಂಡಿದೆ. ಕಳೆದ ವರ್ಷ ನವೆಂಬರ್‌ 24ರಂದು ನಾಸಾ ಕ್ಯಾಲಿಫೋರ್ನಿಯಾ ದಲ್ಲಿರುವ ತನ್ನ ಉಡಾವಣ ಕೇಂದ್ರದಿಂದ ಕಳುಹಿಸಿದ್ದ ಬಾಹ್ಯಾಕಾಶ ನೌಕೆ ಡಾರ್ಟ್‌ (ಡಬಲ್‌ ಆ್ಯಸ್ಟರಾಯ್ಡ ರೀಡೈರೆಕ್ಷನ್‌ ಟೆಸ್ಟ್‌) ಸುಮಾರು 11 ಮಿಲಿಯ ಕಿ.ಮೀ.ಗಳಷ್ಟು ದೂರ ಕ್ರಮಿಸಿ ಸೆ.27 ರಂದು ನಿರೀಕ್ಷಿತ ಸಮಯಕ್ಕೆ ಸರಿಯಾಗಿ ಮುಂಜಾನೆ 4:44 ಗಂಟೆಗೆ (ಭಾರತೀಯ ಕಾಲಮಾನ) ಅವಳಿ ಕ್ಷುದ್ರಗ್ರಹ (ಆ್ಯಸ್ಟರಾಯ್ಡ್)ಗಳಲ್ಲಿ ಒಂದಾದ, ಸುಮಾರು ಫ‌ುಟ್ಬಾಲ್‌ ಆಟದ ಮೈದಾನದಷ್ಟು ಗಾತ್ರ ಹೊಂದಿದ್ದ ಡೈಮಾಫ‌ìಸ್‌ಗೆ ಗಂಟೆಗೆ 22,530 ಕಿ.ಮೀ. ವೇಗದಲ್ಲಿ ಅದರ ಮುಖಕ್ಕೆ ನೇರವಾಗಿ ಅಪ್ಪಳಿಸಿ 17 ಮೀ. ಆಳದ ಕುಳಿಯೊಂದನ್ನು ಇದರ ಮೇಲೆ ಸೃಷ್ಟಿಸುವ ಮೂಲಕ ಭವಿಷ್ಯದಲ್ಲಿ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದೆ.

Advertisement

ಈ ಹಿಂದೆ ಭೂಮಿಗೆ ಆಕಾಶದಿಂದ ಧೂಮಕೇತು ಗಳು, ಕ್ಷುದ್ರಗ್ರಹಗಳು ಬಂದು ಅಪ್ಪಳಿಸಿದ ಪರಿಣಾಮ ಡೈನೋಸಾರ್‌ನಂತಹ ದೈತ್ಯಜೀವಿಗಳ ನಿರ್ನಾಮ, ಅದೆಷ್ಟೋ ವಿನಾಶಗಳು, ಸಾವು ನೋವುಗಳು ಸಂಭವಿಸಿದ ಘಟನೆಗಳ ಬಗ್ಗೆ ನಾವು-ನೀವೆಲ್ಲರೂ ಓದಿರ ಬಹುದು, ಇಲ್ಲವೇ ಕೇಳಿರಬಹುದು. ಸದ್ಯೋ ಭವಿಷ್ಯದಲ್ಲಿ ಮಾತ್ರವಲ್ಲ ಇನ್ನು ಕೆಲವು ಮಿಲಿಯ ವರ್ಷಗಳವರೆಗೂ ಭೂಮಿಗೆ ವಿಪ್ಲವಕಾರಿಯಾಗಿ ಹಾನಿ ಮಾಡುವ ಯಾವುದೇ ಬೃಹತ್‌ ಗಾತ್ರದ ಕ್ಷುದ್ರಗ್ರಹ ಬಂದು ಅಪ್ಪಳಿಸಲಾರವು ಎಂದು ಈಗ ನಾಸಾ ವಿಜ್ಞಾನಿಗಳು ದೃಢೀಕರಿಸಿದ್ದಾರೆ. ಆದರೂ ಆಕಸ್ಮಿಕವಾಗಿ ಬಾಹ್ಯಾಕಾಶದ ಯಾವುದಾದರೊಂದು ಕಾಯದ ಭಗ್ನಾವಶೇಷವೊಂದು ನಿರಂತರವಾಗಿ ಚಲಿಸುತ್ತಿರುವ ಕ್ಷುದ್ರಗ್ರಹಕ್ಕೇನಾದರೂ ಬಡಿದು ಅದು ಅಥವಾ ಧೂಮಕೇತು ಪೃಥ್ವಿಯತ್ತ ಚಲಿಸ ಲಾರಂಭಿಸಿದರೆ ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗೇನಾದರೂ ಆದರೆ ಅದರ ಗತಿಯನ್ನು ಒಂದಿಷ್ಟು ಕಾಲದ ಮೊದಲೇ ಅರಿತು, ಡಾರ್ಟ್‌ನಂತಹ ನೌಕೆಯನ್ನು ಅದರತ್ತ ಕಳುಹಿಸಿ, ಅದು ನೇರವಾಗಿ ಅದಕ್ಕೆ ಅಪ್ಪಳಿಸುವ ಮೂಲಕ ಅದರ ಪಥವನ್ನೇ ಬದಲಾಯಿಸಿ, ಆಗಲಿರುವ ಮಹಾ ವಿಪ್ಲವವನ್ನು ತಡೆಯಲು ಸಾಧ್ಯವಾಗಲಿದೆ. ಡಾರ್ಟ್‌ ನೌಕೆಯನ್ನು ಕಳುಹಿಸಿದ್ದುದರ ಉದ್ದೇಶವೇ ಇಂಥದ್ದೊಂದು ಪರೀಕ್ಷೆಗಾಗಿತ್ತು. ಅದರಲ್ಲಿ ನಾಸಾ ಅದ್ಭುತ ಯಶಸ್ಸು ಕಂಡಿದೆ.
ನಾಸಾ ಸಂಸ್ಥೆ ಇಂಥ ಪ್ರಯೋಗಕ್ಕೆ ಆಯ್ಕೆ ಮಾಡಿದುದು ಭೂಮಿಗೆ ಸನಿಹದಲ್ಲಿರುವ ಡಿಡಿಮೋಸ್‌ ಮತ್ತು ಡೈಮಾಫ‌ìಸ್‌ ಹೆಸರಿನ ಜೋಡಿ ಕ್ಷುದ್ರಗ್ರಹಗಳನ್ನು. ನಾಸಾ ಸಂಸ್ಥೆ ಕೇವಲ ಪ್ರಯೋಗದ ಉದ್ದೇಶಕ್ಕಾಗಿ ಇವೆರಡು ಕ್ಷುದ್ರಗ್ರಹಗಳನ್ನು ಆಯ್ಕೆ ಮಾಡಿತೇ ವಿನಾ ಇವುಗಳಿಂದ ಮುಂದಿನ ದಿನಗಳಲ್ಲಿ ಪೃಥ್ವಿಗೆ ಏನಾದರೊಂದು ಅಪಾಯ ಉಂಟಾಗಲಿದೆ ಎಂಬ ಭೀತಿಯಿಂದಲ್ಲ. ಡಿಡಿಮೋಸ್‌ ಅಂದರೆ ಗ್ರೀಕ್‌ ಭಾಷೆಯಲ್ಲಿ ಜೋಡಿ ಎಂದರ್ಥ. ಒಂದು ಕಾಲಕ್ಕೆ ಇವೆರಡೂ ಕ್ಷುದ್ರಗ್ರಹಗಳು ಒಂದೇ ಆಗಿದ್ದವು. ಕಾಲಾಂತರದಲ್ಲಿ ಇವು ಬೇರ್ಪಟ್ಟವು.
ಡಿಡಿಮೋಸ್‌ನ ಅಗಲ 780 ಮೀ. (2,560 ಅಡಿ)ಗಳಾಗಿದ್ದರೆ ಡೈಮಾಫ‌ìಸ್‌ನದ್ದು 160 ಮೀ. (525 ಅಡಿಗಳು). ಭೂಮಿಯ ಸುತ್ತ ಚಂದ್ರ ಸುತ್ತುವ ಮಾದರಿಯಲ್ಲಿ ಡಿಡಿಮೋಸ್‌ ಸುತ್ತ ಡೈಮಾಫ‌ìಸ್‌ 11 ಗಂಟೆ 55 ನಿಮಿಷ ಅವಧಿಯಲ್ಲಿ ಒಂದು ಪ್ರದಕ್ಷಿಣೆ ಹಾಕುತ್ತದೆ.

ನಾಸಾ ವಿಜ್ಞಾನಿಗಳು ಗುರಿಯಿರಿಸಿದ್ದು ಡಿಡಿಮೋಸ್‌ ಸುತ್ತ ಸುತ್ತುತ್ತಿರುವ ಡೈಮಾಫ‌ìಸ್‌ನ ಮೇಲೆ ಮಾತ್ರ. ನಾಸಾ ಸಂಶೋಧನಕಾರರು ಇದಕ್ಕೆ ಅನುಸರಿಸಿದ ತಂತ್ರ ಬಿಲಿಯರ್ಡ್ಸ್‌ ಆಡುವ ಕ್ರಮದಂತೆ. ನಾವು ಗುರಿಯಿಟ್ಟಿರುವ ಚೆಂಡಿಗೆ ನೇರವಾಗಿ ಹೊಡೆಯಲಿಕ್ಕಾಗದೆ ಪರೋಕ್ಷವಾಗಿ ಮತ್ಯಾವುದೋ ಚೆಂಡನ್ನು ತಾಡಿಸಿ, ಚಲಿಸುವಂತೆ ಮಾಡಿ ತಾವು ಗುರಿಯಿಟ್ಟಿರುವ ಚೆಂಡನ್ನು ಗುರಿ ತಲುಪುವಂತೆ ಮಾಡುತ್ತಾರಲ್ಲ ಅದೇ ತರಹದ ತಂತ್ರ.
ಡಾರ್ಟ್ಸ್ ನೌಕೆಯ ಒಟ್ಟು ತೂಕ ಸುಮಾರು 570 ಕೆ.ಜಿ.ಗಳು. ಇದು ನೇರವಾಗಿ ಹೋಗಿ ಡೈಮಾರ್ಫಸ್‌ ಕ್ಷುದ್ರಗ್ರಹದ ಮುಖಕ್ಕೇ ಅಪ್ಪಳಿಸಿದೆ. ಡಾರ್ಟ್‌ ನೌಕೆಯು ಅಪ್ಪಳಿಸುವ ಮೊದಲು ಒಂದಿಷ್ಟು ಛಾಯಾ ಚಿತ್ರಗಳನ್ನು ತೆಗೆದು ತನ್ನ ಭೂಕೇಂದ್ರಕ್ಕೆ ರವಾನಿಸಿದೆ. ಇದು ಅಪ್ಪಳಿಸಿದ ವೇಗದ ಪ್ರಮಾಣಕ್ಕೆ ಅದರ ಚಲನೆಯ ಪಥದಲ್ಲಿ ಕೆಲವೇ ಕೆಲವು ಸೆಕೆಂಡ್‌ಗಳಷ್ಟು ವ್ಯತ್ಯಯವಾದರೆ ದೀರ್ಘ‌ ಕಾಲಕ್ಕೆ ಈ ಜೋಡಿ ಕ್ಷುದ್ರಗ್ರಹಗಳ ಚಲನೆಯಲ್ಲಿ ಹೇಗೆಲ್ಲ ವ್ಯತ್ಯಾಸ ವಾಗುತ್ತದೆ ಎಂಬ ಅಂಶವನ್ನು ನಿಖರವಾಗಿ ಕಂಡು ಕೊಳ್ಳುವುದೇ ನಾಸಾದ ಈ ಪ್ರಯೋಗದ ಉದ್ದೇಶ ವಾಗಿದೆ. ಈ ಎಲ್ಲ ಅಂಶಗಳನ್ನು ಇನ್ನು ಮುಂದಿನ ದಿನಗಳಲ್ಲಿ ನಾಸಾ ವಿವಿಧ ರೇಡಿಯೋ ಟೆಲಿಸ್ಕೋಪ್‌ಗ್ಳ ಮೂಲಕ ಗ್ರಹಿಸಿ ಪರೀಕ್ಷೆಗೊಳಪಡಿಸಲಿದೆ.

ಡಾರ್ಟ್‌ ನೌಕೆ ತನ್ನ ಜತೆ ಇಟಲಿಯ ಆಕಾಶಯಾನ ಸಂಸ್ಥೆ ತಯಾರಿಸಿದ್ದ ಲಿಸಿಯಾ ಕ್ಯೂಬ್‌ ಹೆಸರಿನ 14 ಕೆ.ಜಿ. ತೂಕದ ಪುಟ್ಟ ಉಪಗ್ರಹವೊಂದನ್ನು ಜತೆಯಲ್ಲೇ ಒಯ್ದಿತ್ತು. ಈ ಉಪಗ್ರಹ ಡಾರ್ಟ್‌ ನೌಕೆ ಯಿಂದ ಇದೇ ಸೆಪ್ಟಂಬರ್‌ 11ರಂದು ಬೇರ್ಪಟ್ಟು ಸ್ವತಂತ್ರವಾಗಿ ಇದರೊಂದಿಗೆ ಆಕಾಶದಲ್ಲಿ ಚಲಿಸುತ್ತಾ, ಡಾರ್ಟ್‌ ನೌಕೆ ಡೈಮಾರ್ಫಸ್‌ನತ್ತ ಹೋಗಿ ಅದಕ್ಕೆ ಮುಖಾಮುಖೀ ಅಪ್ಪಳಿಸುವಾಗ ಸುಮಾರು ಸಾವಿರ ಕಿ.ಮೀ. ದೂರದಿಂದ ಚಿತ್ರ ತೆಗೆಯುತ್ತಾ ಸಾಗಿತು. ಮುಂದಿನ ಮೂರು ನಿಮಿಷಗಳೊಳಗೆ 40-50 ಕಿ.ಮೀ.ನಷ್ಟು ಹತ್ತಿರಕ್ಕೆ ಬಂದು ಪ್ರಹಾರದ ಅನಂತರದ ಕೆಲವಾರು ಚಿತ್ರಗಳನ್ನು ಕ್ಲಿಕ್ಕಿಸಿ ಕಳುಹಿತು. ನಾಸಾ ಸಂಸ್ಥೆ ಎಲ್ಲ ಭೂಖಂಡಗಳಲ್ಲಿ ಅಳವಡಿಸಿರುವ ಬೃಹತ್‌ ಗಾತ್ರದ ದೂರದರ್ಶಕಗಳು ಇಲ್ಲಿ ನಡೆದ ಪ್ರತಿಯೊಂದು ಕ್ಷಣದ ಚಿತ್ರಗಳನ್ನು ಸೆರೆ ಹಿಡಿದಿವೆ. ಇವು ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಶೋ ಧನೆಗೆ ಅದರಲ್ಲೂ ಮುಖ್ಯವಾಗಿ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳ ಅಧ್ಯಯನಕ್ಕೆ ಸಹಕಾರಿಯಾಗಲಿವೆ.

ಆ್ಯಸ್ಟರಾಯ್ಡ್ ಬೆಲ್ಟ್ 
ಕ್ಷುದ್ರಗ್ರಹಗಳು ಇರುವುದು ಗುರು ಮತ್ತು ಅಂಗಾರಕ ಗ್ರಹಗಳ ನಡುವೆ. ಈ ಭಾಗಕ್ಕೆ ಆ್ಯಸ್ಟರಾಯ್ಡ ಬೆಲ್ಟ್ ಎಂದು ಹೇಳುತ್ತಾರೆ. ಈ ಭಾಗ ದಲ್ಲಿ ಒಂದು ಕಿ.ಮೀ. ಮತ್ತು ಅದಕ್ಕಿಂತ ಹೆಚ್ಚು ವ್ಯಾಸವುಳ್ಳಂತಹ ಕ್ಷುದ್ರ ಗ್ರಹಗಳು ಸುಮಾರು 1.1 ಮಿಲಿಯದಿಂದ 1.9 ಮಿಲಿಯದಷ್ಟು ಇರಬಹು ದೆಂದು ಅಂದಾಜಿಸಲಾಗಿದೆ. ಇನ್ನು ಇದಕ್ಕಿಂತ ಸಣ್ಣ ಗಾತ್ರದ ಕ್ಷುದ್ರಗ್ರಹಗಳು ಎಷ್ಟಿವೆಯೆಂದು ಲೆಕ್ಕ ಮಾಡಲು ಅಸಾಧ್ಯ! :
ಇದೇ ಪ್ರಕಾರ ಒಂದಿಷ್ಟು ಕ್ಷುದ್ರಗ್ರಹಗಳು ಭೂಮಿ ಯಿಂದ 45 ಮಿಲಿಯ ಕಿ.ಮೀ. ಒಳಗೆ ಚಲಿಸುತ್ತಲೇ ಇವೆ. ಇವಕ್ಕೆ ನಿಯರ್‌ ಅರ್ಥ್ ಆ್ಯಸ್ಟರಾಯ್ಡ್ಸ್(ಎನ್‌.ಇ.ಎ.), ಭೂಮಿಯ ಸಮೀಪದ ಕ್ಷುದ್ರಗ್ರಹಗಳು ಎಂದು ಕರೆಯಲಾಗುತ್ತದೆ. ನಾಸಾ ವಿಜ್ಞಾನಿಗಳು ಸದಾ ಇಂತಹ ಕ್ಷುದ್ರಗ್ರಹಗಳ ಮೇಲೆಯೇ ಗಮನ ವಿಟ್ಟಿದ್ದಾರೆ. ಒಟ್ಟು 29.8 ಸಾವಿರ ಕ್ಷುದ್ರಗ್ರಹಗಳು ಈ ವ್ಯಾಪ್ತಿಯೊಳಗೆ ಚಲಿಸುತ್ತಿರುವುದನ್ನು ಪತ್ತೆ ಮಾಡಿದ್ದು, ಇದರಲ್ಲಿ 855ರಷ್ಟು ಕ್ಷುದ್ರಗ್ರಹಗಳು ಒಂದು ಕಿ.ಮೀ.ಗಿಂತ ಹೆಚ್ಚು ವ್ಯಾಸ ಹೊಂದಿವೆ. 140 ಮೀ. (460 ಅಡಿ) ಯಷ್ಟು ವ್ಯಾಸ ಹೊಂದಿರುವಂಥವು ಸುಮಾರು ಹತ್ತು ಸಾವಿರದಷ್ಟಿವೆ ಎಂದು ಕಂಡುಕೊಂಡಿದ್ದಾರೆ.

Advertisement

-ಸುನಿಲ್‌ ಕುಲಾಸೊ, ಕೊಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next