Advertisement

ಸ್ತನ ಕ್ಯಾನ್ಸರ್‌ ಬೇಗನೆ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು

09:58 AM Nov 27, 2022 | Team Udayavani |

ಕಾಲೇಜು ಪ್ರಾಂಶುಪಾಲೆಯೊಬ್ಬರು ಸ್ತನ ಕ್ಯಾನ್ಸರ್‌ನ ಮುಂದುವರಿದ ಹಂತದಲ್ಲಿರುವಾಗ ನನ್ನ ಬಳಿಗೆ ಬಂದಿದ್ದರು. ಈ ಮಾರಕ ಕಾಯಿಲೆಯ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷಿಸಿದ ಬಗ್ಗೆ ಅವರಲ್ಲಿ ಅಪಾರ ಪಶ್ಚಾತ್ತಾಪವಿತ್ತು. ಆರಂಭಿಕ ಒಂದನೇ ಹಂತದಲ್ಲಿದ್ದ ಕ್ಯಾನ್ಸರ್‌ ಈಗ ನಾಲ್ಕನೇ ಹಂತವನ್ನು ತಲುಪಿತ್ತು. ಐವತ್ತರ ವಯೋಮಾನದ ಉತ್ತರಾರ್ಧದಲ್ಲಿದ್ದ ಇನ್ನೋರ್ವ ಮಹಿಳೆ ಸ್ತನದಲ್ಲಿ ಉಂಟಾಗಿದ್ದ ಗಡ್ಡೆಯನ್ನು ನಿರ್ಲಕ್ಷಿಸಿದ್ದರು. ಆ ಬಳಿಕ ಆಕೆಗೆ ಬೆನ್ನುನೋವು ಕಾಣಿಸಿಕೊಂಡು ವೈದ್ಯರಲ್ಲಿಗೆ ಹೋದಾಗ ನಾಲ್ಕನೆಯ ಮುಂದುವರಿದ ಹಂತದಲ್ಲಿದ್ದ ಸ್ತನದ ಕ್ಯಾನ್ಸರ್‌ ಪತ್ತೆಯಾಯಿತು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಆಕೆ ಸ್ವಲ್ಪ ಕಾಲ ದಿಗ್ಭ್ರಮೆಗೀಡಾದರು.

Advertisement

ಇನ್ನೋರ್ವ ಸಣ್ಣ ಪ್ರಾಯದ ಯುವತಿ ಬೆನ್ನುಮೂಳೆಯ ಮುರಿತಕ್ಕೆ ಒಳಗಾಗಿ ಪಕ್ಷವಾತಕ್ಕೆ ಈಡಾಗಿದ್ದರು. ತನ್ನ ಬೆನ್ನುನೋವಿಗಾಗಿ ಆಕೆ ಬೆನ್ನಿಗೆ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದರು. ಆಕೆಯ ಬೆನ್ನುಮೂಳೆಯಲ್ಲಿ ಗಡ್ಡೆಯೊಂದು ಇರುವುದನ್ನು ನಾವು ಪತ್ತೆಹಚ್ಚಿದಾಗ ಆಕೆ ಗಾಬರಿಗೀಡಾದರು. ಸ್ತನದಲ್ಲಿದ್ದ ಸಣ್ಣ ಗಡ್ಡೆಯೊಂದನ್ನು ನಿರ್ಲಕ್ಷಿಸಿದ್ದನ್ನು ಆಕೆ ಆ ಬಳಿಕ ಒಪ್ಪಿಕೊಂಡರು.

ನಮ್ಮದೇ ತಪ್ಪುಗಳಿಂದ ಪಾಠ ಕಲಿಯುವುದು ಬುದ್ಧಿವಂತಿಕೆ; ಇತರರ ತಪ್ಪುಗಳಿಂದ ಪಾಠ ಕಲಿಯುವುದು ಸುಲಭ ಮತ್ತು ಕ್ಷಿಪ್ರ.

ನಮ್ಮ ದೇಶದಲ್ಲಿ ಪ್ರತೀ ಮೂವರು ಸ್ತನ ಕ್ಯಾನ್ಸರ್‌ ರೋಗಿಗಳಲ್ಲಿ ಒಬ್ಬರು ಸಾವಿಗೀಡಾಗುತ್ತಾರೆ. ಇದರಿಂದ ನಾವು ಕಲಿಯಬಹುದಾದ ಪಾಠವೇನೆಂದರೆ, ಎಲ್ಲರೂ ಸಾಯುವುದಿಲ್ಲ! ಆದರೆ ಈ ಮೂವರಲ್ಲೊಬ್ಬರು ಸಾಯುವುದೇಕೆ? ನಮ್ಮ ಸ್ತನ ಕ್ಯಾನ್ಸರ್‌ ಬೇಗನೆ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು. ದೇಶದಲ್ಲಿ ಹಂತ 3 ಅಥವಾ ಹಂತ 4ರಂತಹ ಮುಂದುವರಿದ ಸ್ಥಿತಿಗಳಲ್ಲಿ ಸ್ತನದ ಕ್ಯಾನ್ಸರ್‌ ಪತ್ತೆ ಹಚ್ಚಲಾಗುತ್ತದೆ. ಈ ಸ್ಥಿತಿಗತಿಯನ್ನು ನಾವು ಬದಲಾಯಿಸಬೇಕಾಗಿದೆ. ಪಶ್ಚಿಮದ ದೇಶಗಳಂತೆ ಹಂತ 1 ಅಥವಾ ಹಂತ 2ರಂತಹ ಸ್ತನದ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿಯೇ ಅದನ್ನು ಪತ್ತೆಹಚ್ಚಬೇಕಾಗಿದೆ. ಅಮೆರಿಕದಲ್ಲಿ ಈ ಅನುಪಾತ ಇನ್ನಷ್ಟು ಚೆನ್ನಾಗಿದೆ.

ಸ್ತನ ಕ್ಯಾನ್ಸರ್‌ನ ಪ್ರತೀ 8 ಪ್ರಕರಣಗಳಲ್ಲಿ ಒಬ್ಬರು ಮಾತ್ರ ಸಾವಿಗೀಡಾಗುತ್ತಾರೆ. ಅಲ್ಲಿ ಜನರು ಇದರ ಬಗ್ಗೆ ಹೆಚ್ಚು ಅರಿವನ್ನು ಹೊಂದಿದ್ದಾರೆ. ತಪಾಸಣೆ ಹೆಚ್ಚು ಹೆಚ್ಚು ನಡೆಯುತ್ತದೆ. ಇದರರ್ಥವೇನೆಂದರೆ, ಬೇಗನೆ ತಪಾಸಣೆ ನಡೆಸಿ ರೋಗಪತ್ತೆ ಆಗುವುದು ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಂತ 1ರಲ್ಲಿಯೇ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚಿದರೆ ಬದುಕುಳಿಯುವ ಪ್ರಮಾಣ ಶೇ. 95ರಷ್ಟಿರುತ್ತದೆ. ನಾಲ್ಕನೇ ಹಂತದಲ್ಲಿರುವ ರೋಗಿಯಲ್ಲಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.

Advertisement

ಕ್ಯಾನ್ಸರ್‌ ಬಗ್ಗೆ ಇರುವ ಅಸಡ್ಡೆ, ನಿರ್ಲಕ್ಷ್ಯ ಭಾವಗಳನ್ನು ಜನಸಾಮಾನ್ಯರು ತ್ಯಜಿಸಬೇಕು. ಜನರು ತಮ್ಮ ಅಜ್ಞಾನವನ್ನು ಬದಿಗೆ ಸರಿಸಿ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಸ್ತನ ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ನೋವಿನಿಂದ ಕೂಡಿರುವುದಿಲ್ಲ; ಹೀಗಾಗಿ ಅದು ನೋವಿನಿಂದ ಕೂಡಿರುವ ಹಂತಕ್ಕೆ ಬೆಳೆಯುವವರೆಗೆ ಕಾಯಬೇಡಿ.

ಹಾಗಾದರೆ, ಸ್ತನ ಕ್ಯಾನ್ಸರ್‌ ಅದರ ಆರಂಭಿಕ ಹಂತದಲ್ಲಿ ಯಾವ ಲಕ್ಷಣಗಳನ್ನು ಹೊಂದಿರುತ್ತದೆ? ಸ್ತನಗಳಲ್ಲಿ ನೋವಿಲ್ಲದ ಗಡ್ಡೆ ಕಂಡುಬರುವುದೇ ಸರ್ವೇಸಾಮಾನ್ಯ ಲಕ್ಷಣ. ಕೆಲವೊಮ್ಮೆ ಇಂತಹ ಲಕ್ಷಣಗಳನ್ನು ಹೊಂದಿರುವ ಮಹಿಳೆಯರು ಆತಂಕ, ಭಯ, ಗಾಬರಿಗಳೊಂದಿಗೆ ವೈದ್ಯರಲ್ಲಿಗೆ ಧಾವಿಸುತ್ತಾರೆ. ಸ್ತನದ ತೊಟ್ಟಿನಿಂದ ರಕ್ತದ ತೊಟ್ಟು ಸ್ರಾವವಾಗುವುದು ಗಾಬರಿ, ಭಯವನ್ನುಂಟು ಮಾಡಬಹುದು. ಆದರೆ ಇದು ಸ್ತನದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು. ಇತ್ತೀಚೆಗೆ ಸ್ತನದ ತೊಟ್ಟು ಒಳಸರಿದಿದ್ದರೆ ಅದು ಇನ್ನೊಂದು ಆರಂಭಿಕ ಲಕ್ಷಣವಾಗಿರಬಹುದು. ಆದರೆ ಇಲ್ಲಿ “ಇತ್ತೀಚೆಗೆ’ ಎಂಬುದು ಬಹಳ ಮುಖ್ಯ.

ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರನ್ನು ಪತ್ತೆಹಚ್ಚಿ ನಿಭಾಯಿಸುವುದು ಹೇಗೆ? ಬೇಗನೆ ಪರೀಕ್ಷೆ, ತಪಾಸಣೆ ಮತ್ತು ಚಿಕಿತ್ಸೆ ಇದಕ್ಕೆ ಅಗತ್ಯ. ಮ್ಯಾಮೊಗ್ರಾಮ್‌ ಸಂಕೇತಗಳ ಮೂಲಕ ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದಕ್ಕಾಗಿ ಮಹಿಳೆಯರು ವಾರ್ಷಿಕವಾಗಿ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು. ಸ್ತನದ ಸ್ವಯಂ ಪರೀಕ್ಷಣೆಯನ್ನು ಮಾಡಿಕೊಳ್ಳಬೇಕು. ಸ್ತನವು ದೇಹದ ಹೊರಭಾಗದಲ್ಲಿಯೇ ಇರುವ ಅಂಗವಾಗಿದ್ದು, ಇದರಲ್ಲಿ ಉಂಟಾಗಿರಬಹುದಾದ ಗಡ್ಡೆಯನ್ನು ಪತ್ತೆ ಹಚ್ಚಲು ವೈದ್ಯರೇ ಬೇಕಾಗಿಲ್ಲ. ಶಂಕಾಸ್ಪದ ಬೆಳವಣಿಗೆ, ಗಡ್ಡೆಗಳು ಇರುವುದು ಅನುಭವಕ್ಕೆ ಬಂದಲ್ಲಿ ತಜ್ಞ ವೈದ್ಯರ ಬಳಿ ಸಮಾಲೋಚಿಸಬೇಕು. ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿದಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚು, ನೋವಿನಿಂದ ನರಳುವ ಪ್ರಮಾಣವೂ ಕಡಿಮೆ.

ಎಲ್ಲ ಸ್ತನ ಕ್ಯಾನ್ಸರ್‌ ರೋಗಿಗಳಿಗೂ ಮಾಸ್ಟೆಕ್ಟಮಿ (ರೋಗಗ್ರಸ್ತ ಸ್ತನವನ್ನು ಪೂರ್ಣವಾಗಿ ತೆಗೆದುಹಾಕುವುದು)ಯ ಅಗತ್ಯ ಉಂಟಾಗುವುದಿಲ್ಲ. ಪ್ರಸ್ತುತ ವೈದ್ಯರು ವಿಶೇಷವಾಗಿ ಸ್ತನ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಅತೀ ಕಡಿಮೆ ವಿಕಿರಣಶೀಲತೆಯನ್ನು ಉಪಯೋಗಿಸಿ ಚಿಕಿತ್ಸೆ ನಡೆಸುತ್ತಾರೆ. ಉತ್ತಮ ಓಂಕೋಪ್ಲಾಸ್ಟಿಕ್‌ ತಂತ್ರಗಳ ಸಹಾಯದಿಂದ ಸ್ತನದ ಗಾತ್ರ, ಆಕಾರ ಮತ್ತು ಸೌಂದರ್ಯವನ್ನು ಕೂಡ ಪುನರ್‌ಸ್ಥಾಪಿಸಿಕೊಳ್ಳಬಹುದಾಗಿದೆ.

ನಾಗರಿಕ ಸಮಾಜದ ಅಂಗವಾಗಿ ನಾವು ಕ್ಯಾನ್ಸರ್‌ ರೋಗಿಗಳ ಜತೆಗೆ ಸಹಾನುಭೂತಿ ಹೊಂದಿರಬೇಕು. ಅವರ ಕ್ಷೇಮ, ಕಲ್ಯಾಣಕ್ಕಾಗಿ ನಾವು ಶ್ರಮಿಸಬೇಕು. ಸರಿಯಾದ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಾವು ಅವರಿಗೆ ಸಹಾಯ ಮಾಡಬೇಕು. ಕ್ಯಾನ್ಸರ್‌ ಪ್ರಸ್ತುತ ಕಾಲದ ಹೊಸ ಸರ್ವವ್ಯಾಪಿ ರೋಗ. ನಾವೆಲ್ಲರೂ ಜತೆಗೂಡಿ ಕೆಲಸ ಮಾಡಿದರೆ ಕ್ಯಾನ್ಸರ್‌ ವಿರುದ್ಧ ಹೋರಾಡಿ ಅದನ್ನು ತಡೆಯಬಹುದು. “ಕ್ಯಾನ್ಸರ್‌’ ಎಂಬುದು ಒಂದು ಪದ, ಭರತವಾಕ್ಯವಲ್ಲ.

-ಡಾ| ಕಾರ್ತಿಕ್‌ ಕೆ.ಎಸ್‌., ಸರ್ಜಿಕಲ್‌ ಓಂಕಾಲಜಿ, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜಿಕಲ್‌ ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next