ಹೊಸದಿಲ್ಲಿ: ಗಡಿ ಭಾಗದಲ್ಲಿ ಚೀನಾಗೆ ಪ್ರಧಾನಿ ಮೋದಿಯವರು ಭೂಮಿ ಬಿಟ್ಟುಕೊಟ್ಟಿದ್ದಾರೆಂಬ ರಾಹುಲ್ ಗಾಂಧಿ ಮಾತಿಗೆ ತಿರುಗೇಟು ನೀಡಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೈಶಂಕರ್, “ ಆ ಭೂಮಿಯನ್ನು 1962ರಲ್ಲೇ ಚೀನಾ ಕಬಳಿಸಿತ್ತು” ಎಂದಿದ್ದಾರೆ.
“ಕೆಲವರು ಕೇವಲ ರಾಜಕೀಯ ಕಾರಣಗಳಿಗೋಸ್ಕರ ಚೀನಾ ವಿಚಾರದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಆರಂಭವಾಗಿದ್ದು ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಜೈಶಂಕರ್ ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರು 100 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಹೋರಾಟವಿಲ್ಲದೆ ನೀಡಿದ್ದಾರೆ ಮತ್ತು ಅದನ್ನು ಹೇಗೆ ಹಿಂಪಡೆಯುತ್ತಾರೆ ಎಂದು ಕಳೆದ ವರ್ಷ ರಾಹುಲ್ ಗಾಂಧಿ ಸರ್ಕಾರವನ್ನು ಕೇಳಿದರು. ಅಲ್ಲದೆ ಇತ್ತೀಚೆಗೆ ನಟ – ರಾಜಕಾರಣಿ ಕಮಲ್ ಹಾಸನ್ ಅವರೊಂದಿಗಿನ ಸಂವಾದದಲ್ಲಿಯೂ ರಾಹುಲ್ ಮತ್ತೊಮ್ಮೆ “ಚೀನಾವು 2,000 ಚದರ ಮೀಟರ್ ತೆಗೆದುಕೊಂಡಿದೆ, ಆದರೆ ನಮ್ಮ ಪ್ರಧಾನಿ ಮೋದಿ ಏನನ್ನೂ ಹೇಳಲಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಂಡರ್-19 ವನಿತಾ ಟಿ20 ವಿಶ್ವಕಪ್ ಫೈನಲ್: ಗೆದ್ದು ಬನ್ನಿ ಹುಡುಗಿಯರೇ…
Related Articles
ಇದಕ್ಕೆ ಜೈಶಂಕರ್ ತಿರುಗೇಟು ನೀಡಿದ್ದು, “ಕೆಲವೊಮ್ಮೆ ಅವರು 1962ರಲ್ಲಿ ಚೀನಾ ಆಕ್ರಮಿಸಿದ ಜಾಗದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಸತ್ಯ ಹೇಳುವುದಿಲ್ಲ. ಆ ಘಟನೆ ನಿನ್ನೆ ಆದಂತೆ ಭಾವನೆ ಬರುವಂತೆ ಅವರು ಮಾತನಾಡುತ್ತಾರೆ” ಎಂದಿದ್ದಾರೆ.
ಕೆಲವೊಮ್ಮೆ ಅಂತಹ ಜನರು (ರಾಜಕೀಯ ಪಕ್ಷಗಳ ನಾಯಕರು) ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ತಪ್ಪು ಸುದ್ದಿ ಅಥವಾ ಮಾಹಿತಿಯನ್ನು ಹರಡುತ್ತಾರೆ ಎಂದು ಜೈಶಂಕರ್ ಹೇಳಿದರು.