Advertisement

ಒಂದು ಏರ್‌ಬ್ಯಾಗ್‌ಗೆ 800 ರೂ. ಅಷ್ಟೇ ಕಣ್ರೀ..! ಕಾರು ಕಂಪನಿಗಳಿಗೆ ಸಚಿವ ಗಡ್ಕರಿ ಗುದ್ದು

09:36 PM Aug 05, 2022 | Team Udayavani |

ನವದೆಹಲಿ: “ಕಾರುಗಳಲ್ಲಿನ ಒಂದು ಏರ್‌ಬ್ಯಾಗ್‌ಗೆ 800 ರೂ. ಆಗುತ್ತೆ. ಆರು ಏರ್‌ಬ್ಯಾಗ್‌ ಹಾಕಿದ ಕೂಡಲೇ ಕಾರಿನ ಬೆಲೆ ಲಕ್ಷಾಂತರ ರೂ.ವರೆಗೆ ಹೆಚ್ಚಾಗೋಲ್ಲ…’ ಹೀಗೆಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ದೇಶೀಯ ಕಾರು ಉತ್ಪಾದನಾ ಕಂಪನಿಗಳಿಗೆ ಟಾಂಗ್‌ ನೀಡಿದ್ದಾರೆ. ಆ ಮೂಲಕ, ಏರ್‌ಬ್ಯಾಗ್‌ಗಳ ನೆಪದಲ್ಲಿ ಗ್ರಾಹಕರಿಂದ ಸುಲಿಗೆ ಮಾಡಬಾರದೆಂದು ಕಂಪನಿಗಳಿಗೆ ಪರೋಕ್ಷವಾಗಿ ತಿಳಿಹೇಳಿದ್ದಾರೆ.

Advertisement

ಶುಕ್ರವಾರದಂದು, ದೇಶದಲ್ಲಿ ಅಪಘಾತದಿಂದಾಗಿಯೇ ವರ್ಷಕ್ಕೆ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದು, ಆ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ಕಾರಿಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡಲಾಗುವುದು ಎಂದು ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ಈಗ ದೇಶದಲ್ಲಿ ಕಾರುಗಳಲ್ಲಿ ಎರಡು ಏರ್‌ಬ್ಯಾಗ್‌ಗಳು ಕಡ್ಡಾಯವಾಗಿವೆ. ಇನ್ನು ಮುಂದೆ 6 ಏರ್‌ಬ್ಯಾಗ್‌ ಕಡ್ಡಾಯಗೊಳಿಸಲಾಗುವುದು. ಈ ವಿಚಾರವಾಗಿ ಶೀಘ್ರವೇ ಪ್ರಕಟಣೆ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಕಾರು ಕಂಪನಿಗಳ ಪ್ರತಿಕ್ರಿಯೆ
ಸಚಿವರ ಹೇಳಿಕೆಗೆ ಒಡನೆಯೇ ಪ್ರತಿಕ್ರಿಯಿಸಿದ ದೇಶೀಯ ಕಾರು ಉತ್ಪಾದನಾ ಕಂಪನಿಗಳು, ಸಚಿವರ ಸಲಹೆಯನ್ನು ಪರಿಶೀಲಿಸಲಾಗುವುದು. ಬೇಸಿಕ್‌ ಮಾಡೆಲ್‌ ಕಾರುಗಳಿಗೂ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದರೆ ಕಾರುಗಳ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತದೆ ಎಂದವು.

ಸಚಿವರ ಪ್ರತ್ಯುತ್ತರ
ಕಂಪನಿಗಳ ನಿಲುವು ಮಾಧ್ಯಮಗಳಲ್ಲಿ ಚರ್ಚೆಗೂ ಗ್ರಾಸವಾಯಿತು. “ಪ್ರತಿ ಒಂದು ಏರ್‌ಬ್ಯಾಗ್‌ಗೆ 800 ರೂ. ಖರ್ಚಾಗುತ್ತಿದೆ. ಸುರಕ್ಷತೆಯ ದೃಷ್ಟಿಯಲ್ಲಿ ಇದು ಅವಶ್ಯ’ ಎಂದರು. ಹಾಗೆಯೇ ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಭಾರೀ ಬೇಡಿಕೆಯಿದ್ದು, 2030ರೊಳಗೆ ಭಾರತದಲ್ಲಿ ಕೋಟಿಗೂ ಅಧಿಕ ಎಲೆಕ್ಟ್ರಿಕ್‌ ವಾಹನ ನೋಂದಣಿ ಆಗಲಿದೆ. ಶೀಘ್ರವೇ 50,000 ಎಲೆಕ್ಟ್ರಿಕ್‌ ಬಸ್ಸುಗಳು ರಸ್ತೆಗಿಳಿಯಲಿವೆ’ ಎಂದು ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next