Advertisement

ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಇ-ಸೇವೆ

06:00 AM Dec 16, 2017 | Team Udayavani |

ಬೆಂಗಳೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮವು “ಬೆರಳ ತುದಿಯಲ್ಲಿ ಆಡಳಿತ: ಕ್ಷಣಮಾತ್ರದಲ್ಲಿ ಪ್ರಗತಿ ವರದಿ’ ಘೋಷ ವಾಕ್ಯದೊಂದಿಗೆ ಇದೀಗ ಸಂಪೂರ್ಣ “ಇ -ಆಡಳಿತ’ಮಯವಾಗಿದೆ.

Advertisement

ಫ‌ಲಾನುಭವಿಗಳು ಸಬ್ಸಿಡಿ, ಸಾಲ, ಸವಲತ್ತು ಪಡೆಯಲು ಜಿಲ್ಲಾ ಅಧಿಕಾರಿಗಳ ಕಚೇರಿ ಹಾಗೂ ಬ್ಯಾಂಕುಗಳಿಗೆ ಅಲೆದಾಡುವುದು ಹಾಗೂ ಕಮೀಷನ್‌ ಹಾವಳಿ ತಪ್ಪಿಸಲು ಹೊಸ ತಂತ್ರಾಂಶದ “ಸರಳ ಸ್ಪಂದನೆ’ ಹೆಸರಿನ ಇ-ಸೇವೆ ಆರಂಭಿಸಲಾಗಿದೆ.

ಇದರಿಂದಾಗಿ ಅರ್ಜಿ ಸಲ್ಲಿಸಿದವರಿಗೆ ಅದರ ಪ್ರಗತಿ ಬಗ್ಗೆ ಕಾಲ ಕಾಲಕ್ಕೆ ಮೊಬೈಲ್‌ ಮೂಲಕ ಎಸ್‌ಎಂಎಸ್‌ ಸಂದೇಶ ರವಾನೆಯಾಗುವುದರ ಜತೆಗೆ, ನಿಗದಿತ ಕಾಲಮಿತಿಯಲ್ಲಿ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಇದೆಲ್ಲರ ಮಾಹಿತಿ “ಕಲ್ಯಾಣ್‌’ ಆ್ಯಪ್‌ನಲ್ಲಿ ಲಭ್ಯವಾಗಲಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ದೊಡ್ಡದಾಗಿ ಕಾರ್ಯವ್ಯಾಪ್ತಿ ಹೊಂದಿದ್ದು, ಈ ವರ್ಷ 1.68 ಲಕ್ಷ ಜನರಿಗೆ ಸವಲತ್ತು ಹಾಗೂ ಸಬ್ಸಿಡಿ , ಸಾಲ ವಿತರಿಸುವ ಕೆಲಸ ಮಾಡುತ್ತಿದೆ. ಫ‌ಲಾನುಭವಿಗಳು ಪ್ರತಿ ಬಾರಿ ಅರ್ಜಿ ಹಿಡಿದು ಪ್ರತಿ ಹಂತದ ಅಧಿಕಾರಿ ಹಾಗೂ ಬ್ಯಾಂಕುಗಳಿಗೆ ಅಲೆದಾಡುವುದು ತಪ್ಪಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಸವಲತ್ತು ಪಡೆಯಲು ಅಲೆದಾಡುವುದಕ್ಕಾಗಿಯೇ ಅಥವಾ ಸಬ್ಸಿಡಿಯ ಶೇ.50 ರಷ್ಟು ಹಣ ವೆಚ್ಚ ಮಾಡಿಕೊಳ್ಳುವುದೆಲ್ಲವೂ ನಡೆಯುತ್ತಿದೆ. ಇದರಿಂದ ನಮ್ಮ ಕಾರ್ಯಕ್ರಮಗಳೂ ಪೂರ್ಣಪ್ರಮಾಣದಲ್ಲಿ ಅವರಿಗೆ ತಲುಪದಂತಾಗಿದೆ. ಹೀಗಾಗಿ, ಮಾಹಿತಿ ತಂತ್ರಜ್ಞಾನವನ್ನು ಎಲ್ಲ ಹಂತಗಳಲ್ಲಿಯೂ ಅಳವಡಿಸಿಕೊಂಡು ಆಡಳಿತ ಸುಧಾರಣೆಗೆ ಮಹತ್ವದ ಹೆಜ್ಜೆಯನ್ನು ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಇಟ್ಟಿದೆ. ಇದರಿಂದ ಬೆರಳ ತುದಿಯಲ್ಲಿ ಆಡಳಿತ ಪರಿಕಲ್ಪನೆ ಅಕ್ಷರಶಃ ಜಾರಿಗೆ ಬರಲಿದೆ ಎಂದು ತಿಳಿಸಿದರು.

Advertisement

ಸ್ವಯಂ ಉದ್ಯೋಗದಡಿ ಪರಿಶಿಷ್ಟ ಜಾತಿಯ 83474 ಫ‌ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ 733.24 ಕೋಟಿ ರೂ. ವೆಚ್ಚ ಮಾಡಲಾಗಿದೆ. ಭೂ ಒಡೆತನ ಯೋಜನೆಯಡಿ 4125 ಭೂ ರಹಿತ ಕೃಷಿ ಕಾರ್ಮಿಕರಿಗೆ 5544.27 ಎಕರೆ ಜಮೀನು ವಿತರಿಸಲಾಗಿದೆ. ಗಂಗ ಕಲ್ಯಾಣ ಯೋಜನೆಯಡಿ 35272 ಕೊಳವೆ ಬಾವಿ ಕೊರೆದು 26949 ಕೊಳವೆ ಬಾವಿಗಳಿಗೆ ಪಂಪ್‌ಸೆಟ್‌ ಅಳವಡಿಸಿ 31204 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಾಲಗಿದೆ ಎಂದು ವಿವರಿಸಿದರು.

ಏನಿದರ ಉಪಯೋಗ?
ನಿಗಮದ ವತಿಯಿಂದ ಸಾಲ ಸೌಲಭ್ಯ, ಸಬ್ಸಿಡಿ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸುವುದು ಸೇರಿದಂತೆ ಎಲ್ಲ ಯೋಜನೆಗಳಿಗೂ ಇ-ಸೇವಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ಫ‌ಲಾನುಭವಿಗಳಿಗೆ ತ್ವರಿತ ಸೇವೆ ಕಲ್ಪಿಸುವುದಷ್ಟೇ ಅಲ್ಲದೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪ್ರಗತಿಯಾಗಿದೆ, ಅರ್ಜಿಗಳ ವಿಲೇವಾರಿ ಹಂತ ಏನು ? ಎಂಬುದು ಗೊತ್ತಾಗಲಿದೆ.

ಏನೇನು ಸೌಲಭ್ಯ?
ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಪರಿಶಿಷ್ಟ ಜಾತಿಯವರ ಅಭವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಸರ್ಕಾರವು ಬಜೆಟ್‌ನಲ್ಲಿ 2643.90 ಕೋಟಿ ರೂ. ನಿಗದಿಪಡಿಸಿದ್ದು 334709 ಫ‌ಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಗುರಿ ಹಮ್ಮಿಕೊಳ್ಳಲಾಗಿತ್ತು. 2017 ನವೆಂಬರ್‌ ಅಂತ್ಯಕ್ಕೆ 2185.85 ಕೋಟಿ ರೂ. ವೆಚ್ಚ ಮಾಡಿ 198281 ಫ‌ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next