Advertisement

ಶಾಲೆಗೆ ಹೋಗಲು ಇ-ಬಸ್‌

12:49 PM Feb 18, 2018 | Team Udayavani |

ಬೆಂಗಳೂರು: ಶಾಲಾ ಮಕ್ಕಳ ಸಂಚಾರಕ್ಕೆ ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

Advertisement

ವಿಧಾನಸೌಧ ಮುಂಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಇ-ಮೊಬಿಲಿಟಿ ಜಾಗೃತಿ ಅಭಿಯಾನ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯುತ್‌ ಚಾಲಿತ ವಾಹನಗಳ ಬಗ್ಗೆ ಜನರಲ್ಲಿ ಇತ್ತೀಚೆಗೆ ಜಾಗೃತಿ ಮೂಡುತ್ತಿದೆ. ಕೆಲವು ಶಾಲಾ ಆಡಳಿತ ಮಂಡಳಿಗಳು ಕೂಡ ವಿದ್ಯುತ್‌ ಚಾಲಿತ ಬಸ್‌ಗಳನ್ನು ಪೂರೈಸುವಂತೆ ಬೇಡಿಕೆ ಇಟ್ಟಿವೆ.

ಇದೊಂದು ಪೂರಕ ಬೆಳವಣಿಗೆಯಾಗಿದ್ದು, ಅಗತ್ಯ ಎಲೆಕ್ಟ್ರಿಕ್‌ ಬಸ್‌ಗಳನ್ನು ಸರ್ಕಾರ ಪೂರೈಸಲು ಬದ್ಧವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿ ಸ್ವಲ್ಪ ದುಬಾರಿಯಾಗಿದೆ. ಹಾಗೊಂದು ವೇಳೆ ಈ ಹೊರೆ ತಗ್ಗಿಸುವಲ್ಲಿ ಯಶಸ್ವಿಯಾದರೆ, ಬಳಕೆ ಪ್ರಮಾಣ ಸಾಕಷ್ಟು ಏರಿಕೆ ಆಗಲಿದೆ. ಈಗಾಗಲೇ ನಗರದಲ್ಲಿ ಸಾವಿರಾರು ಪರಿಸರ ಸ್ನೇಹಿ ವಾಹನಗಳು ರಸ್ತೆಗಿಳಿದಿವೆ ಎಂದರು.

ದೇಶದಲ್ಲೇ ಮೊದಲ ಬಾರಿಗೆ “ಎಲೆಕ್ಟ್ರಿಕ್‌ ವಾಹನಗಳ ನೀತಿ’ ರೂಪಿಸಲಾಗಿದ್ದು, ಇದು ಜಾರಿಗೊಂಡ ಕೆಲವೇ ತಿಂಗಳಲ್ಲಿ ಅನೇಕ ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ಮುಂದೆ ಬಂದಿವೆ. ಮಹೀಂದ್ರ ಕಂಪನಿ ಸಂಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದ್ದು, ಬೀದರ್‌ನಲ್ಲಿ ಬಸ್‌ ತಯಾರಿಕಾ ಘಟಕ ಸ್ಥಾಪನೆಗೆ ಗೋಲ್ಡ್‌ ಸ್ಟೋರ್‌ ಇನ್‌ಫ್ರಾ ಮುಂದಾಗಿದೆ.

ಇದರೊಂದಿಗೆ ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಬ್ಯಾಟರಿ ತಯಾರಿಕೆ ಘಟಕ ಸ್ಥಾಪನೆಗೆ ಮತ್ತೂಂದು ಕಂಪನಿ ಆಸಕ್ತಿ ತೋರಿಸಿದೆ. ಈ ಕುರಿತ ಪ್ರಸ್ತಾವನೆ ಮುಖ್ಯಮಂತ್ರಿಗಳ ಮುಂದಿದೆ ಎಂದು ಮಾಹಿತಿ ನೀಡಿದರು.

Advertisement

ಎಲೆಕ್ಟ್ರಿಕ್‌ ಕಾರಿನಲ್ಲಿ ಸಿಎಂ ಸವಾರಿ: ಇದಕ್ಕೂ ಮೊದಲು ಮಹೀಂದ್ರ ಎಲೆಕ್ಟ್ರಿಕ್‌ ಮತ್ತು ಭಾಗೀರಥಿ ಗ್ರೂಪ್‌ ಸಹಯೋಗದಲ್ಲಿ ಬಿಡುಗಡೆ ಮಾಡಿದ 50 ಎಲೆಕ್ಟ್ರಿಕ್‌ ವಾಹನಗಳ ಸಂಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ನಂತರ ಎಲೆಕ್ಟ್ರಿಕ್‌ ಕಾರಿನಲ್ಲಿ ವಿಧಾನಸೌಧವನ್ನು ಒಂದು ಸುತ್ತು ಹಾಕಿದರು. 

ಮಹೀಂದ್ರ ಎಲೆಕ್ಟ್ರಿಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್‌ಬಾಬು ಮಾತನಾಡಿ, ಮಹೀಂದ್ರ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 400 ಕೋಟಿ ರೂ. ಹೂಡಿಕೆ ಮಾಡಲಿದೆ. ಎಲೆಕ್ಟ್ರಿಕ್‌ ತಂತ್ರಜ್ಞಾನ ಅನ್ವೇಷಣಾ ಕೇಂದ್ರ ಸ್ಥಾಪನೆ ಮತ್ತು ಕೌಶಲ್ಯಾಭಿವೃದ್ಧಿ ತಂಡದ ಬಲವರ್ಧನೆಗೆ ಈ ಹಣ ಬಳಸಲಿದೆ ಎಂದು ತಿಳಿಸಿದರು. 

ಇದೇ ವೇಳೆ ಭಾಗೀರಥಿ ಗ್ರೂಪ್‌ “rydS’ ಬ್ರ್ಯಾಂಡ್‌ ಘೋಷಿಸಿತು. ಇದು ಕಡಿಮೆ ಪ್ರಮಾಣದ ಕಾರ್ಬನ್‌, ಹೊಗೆರಹಿತ ಮತ್ತು ಸುಸ್ಥಿರಾಭಿವೃದ್ಧಿ ಸಂಚಾರ ಪರಿಕ್ರಮಗಳನ್ನು ಒಳಗೊಂಡಿದೆ ಎಂದು ಕಂಪನಿ ಪದಾಧಿಕಾರಿಗಳು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next