ಬೈಲಹೊಂಗಲ: ಬಂದೋಬಸ್ತ್, ರೌಂಡ್ಸ್, ಸ್ಟೇಷನ್ ಡ್ನೂಟಿ, ವಿಐಪಿ ಭದ್ರತೆ ಹೀಗೆ ವರ್ಷವಿಡೀ ಪೊಲೀಸ್ ಸಿಬ್ಬಂದಿಗೆ ಒತ್ತಡದ ಕೆಲಸ ಸಹಜ. ಇಷ್ಟೆಲ್ಲ ಒತ್ತಡದ ಕೆಲಸದ ನಡುವೆ ಅಧಿಕಾರಿಯೊಬ್ಬರು ಸಮಯ ಮಾಡಿಕೊಂಡು ಪೊಲೀಸ್ ವಸತಿ ಗೃಹದಲ್ಲಿ ಹಣ್ಣಿನ ತೋಟ ಮಾಡಿದ್ದಾರೆ.
ಹೌದು, ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಪಕ್ಕದ ವಸತಿ ಗೃಹದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ ಅವರೇ ಈ ಪರಿಸರ ಕಾಳಜಿ ತೋರಿದ ಅಧಿಕಾರಿ.
ಅಲ್ಲಿ ವಿವಿಧ ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿದ್ದಾರೆ. ಹಲವಾರು ಹಣ್ಣಿನ ಗಿಡ ಬೆಳೆಯುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಅಧಿಕಾರಿಯ ಈ ಉತ್ಸಾಹಕ್ಕೆ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಪಾಳು ಬಿದ್ದಿದ್ದ ಜಾಗದಲ್ಲಿ ಹಣ್ಣಿನ ತೋಟ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಯಾವುದೇ ರಾಸಾಯನಿಕ ವಸ್ತು ಬಳಸದೇ ಹಣ್ಣಿನ ಗಿಡ ಬೆಳೆಸಲಾಗುತ್ತಿದೆ.
ಪಾಳು ಬಿದ್ದಿದ್ದ ಜಾಗದಲ್ಲಿ ಜೆಸಿಬಿ ಮೂಲಕ ಭೂಮಿ ಹದಗೊಳಿಸಿ ಹಣ್ಣಿನ ತೋಟದ ಕೆಲಸ ಆರಂಭಿಸಿದ್ದಾರೆ. ಕಲ್ಲು, ಮಣ್ಣು, ಗೊಬ್ಬರ ಹಾಕಿ ಜಮೀನಿನ ರೂಪ ನೀಡಿದ್ದಾರೆ. ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರು ತೋಟದ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದಾರೆ.
15ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಬೆಳವಣಿಗೆ: ಕಳೆದೊಂದು ವರ್ಷದಿಂದ ಹಣ್ಣಿನ ತೋಟ ಮಾಡಿ 30 ಗುಂಟೆ ಜಾಗದಲ್ಲಿ ಮಾವು, ಸೇಬು, ಪಪ್ಪಾಯಿ, ಹಲಸು, ಪೇರಲ, ಚಿಕ್ಕು, ದಾಳಿಂಬೆ, ಲಿಂಬೆ, ಗುಡ್ಡನ್ನೆಲ್ಲಿ, ಟೆಂಗು, ಸೀತಾಫಲ, ನೇರಳೆ, ಗೋಡಂಬೆ, ವಾಟರ್ ಆ್ಯಪಲ್ ಸೇರಿದಂತೆ ಇನ್ನೂ ಹಲವಾರು ಹಣ್ಣಿನ ಸಸಿ ನೆಟ್ಟು ಗಿಡವಾಗಿಸಿ ಉತ್ತಮ ಫಲ ಬೆಳೆಯಲಾಗುತ್ತಿದೆ. ಬೆಳೆದ ಹಣ್ಣುಗಳನ್ನು ತಾವು ಸವಿದು, ಸಿಬ್ಬಂದಿ, ಕುಟುಂಬಕ್ಕೂ ನೀಡುತ್ತಿದ್ದಾರೆ.
ಖಾಲಿ ಜಾಗೆಯಲ್ಲಿ ಫಸಲು: ಪೊಲೀಸ್ ವಸತಿ ಗೃಹ ಸುತ್ತಮುತ್ತ ಸಾಕಷ್ಟು ಜಾಗೆ ಇದೆ. ಆ ಜಾಗದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಸದ್ಬಳಕೆ ಮಾಡಿಕೊಳ್ಳಬೇಕೆನ್ನುವ ದೃಷ್ಟಿಯಿಂದ ಹಣ್ಣಿನ ತೋಟ ನಿರ್ಮಾಣಕ್ಕೆ ಕೈ ಹಾಕಿ ತಾಜಾ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಸಿಬ್ಬಂದಿ ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು ಎಂದು ಡಿವೈಎಸ್ಪಿ ಶಿವಾನಂದ ಕಟಗಿ ತಿಳಿಸುತ್ತಾರೆ.
ಪೊಲೀಸ್ ಎಂದರೆ ಭಯ ಅಲ್ಲ, ಗೌರವ ಮನೋಭಾವ ಎಲ್ಲರಲ್ಲಿ ಮೂಡಬೇಕು. ಕರ್ತವ್ಯದೊಂದಿಗೆ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು.
ಶಿವಾನಂದ ಕಟಗಿ, ಡಿವೈಎಸ್ಪಿ, ಬೈಲಹೊಂಗಲ
ಸಿ.ವೈ. ಮೆಣಶಿನಕಾಯಿ