Advertisement

ಹತ್ಯೆ ಬಳಿಕ ಡಿವೈಎಸ್ಪಿ ತಲೆ ಕಡಿದರು!

03:14 AM Jul 06, 2020 | Hari Prasad |

ಕಾನ್ಪುರ/ನೋಯ್ಡಾ: ಕಾನ್ಪುರದಲ್ಲಿ ಕಳೆದ ಶುಕ್ರವಾರ ಡಿವೈಎಸ್ಪಿ ಸೇರಿದಂತೆ 8 ಪೊಲೀಸರ ಹತ್ಯೆ ಪ್ರಕರಣದಲ್ಲಿ ಇನ್ನಷ್ಟು ಅಘಾತಕಾರಿ ಸಂಗತಿಗಳು ಬಯಲಿಗೆ ಬಂದಿವೆ.

Advertisement

ಡಿವೈಎಸ್ಪಿ ದೇವೇಂದ್ರ ಮಿಶ್ರಾಗೆ ಗುಂಡು ಹಾರಿಸಿ ಕೊಂದ ಬಳಿಕ ಅವರ ತಲೆ ಹಾಗೂ ಬೆರಳುಗಳನ್ನು ಕಡಿದು ಗಾಯಗೊಳಿಸಲಾಗಿದೆ.

ಅವರ ದೇಹಕ್ಕೆ ಸಾಕಷ್ಟು ಹಾನಿಯಾಗಿರುವುದು ಕಂಡು ಬಂದಿದೆ. ಅಲ್ಲದೇ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರನ್ನು ತುಂಬಾ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವುದು, ಕೆಲ ಪೊಲೀಸರ ತಲೆ, ಎದೆ, ಭುಜಕ್ಕೆ ಗುಂಡು ತಾಗಿರುವುದು ವರದಿಯಿಂದ ತಿಳಿದು ಬಂದಿದೆ.

ಕನಿಷ್ಠ 60 ಮಂದಿ ದುಷ್ಕರ್ಮಿಗಳ ತಂಡ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ನಕ್ಸಲ್‌ ಮಾದರಿಯಲ್ಲಿ ಹೊಂಚು ಹಾಕಿ ಬರ್ಬರವಾಗಿ ಪೊಲೀಸರನ್ನು ಹತ್ಯೆಗೈದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮಾಹಿತಿ ರವಾನೆ
ಇದೇ ವೇಳೆ, ರೌಡಿ ವಿಕಾಸ್‌ ದುಬೆಗೆ ಬಂಧನಕ್ಕೆ ತೆರಳುವ ಪೊಲೀಸ್‌ ತಂಡದ ಬಗ್ಗೆ ಮೊದಲೇ ಮಾಹಿತಿ ರವಾನೆಯಾಗಿತ್ತು. ಅದೂ ಕೂಡ ಪೊಲೀಸರ ವತಿಯಿಂದಲೇ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಗುಂಡಿನ ಚಕಮಕಿಯೊಂ­ದರಲ್ಲಿ ದುಬೆಯ ನಿಕಟವರ್ತಿ ದಯಾಶಂಕರ ಅಗ್ನಿಹೋತ್ರಿ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಸಂದರ್ಭ­ದಲ್ಲಿ ಆತ ಈ ಅಂಶ ಬಾಯಿಬಿಟ್ಟಿದ್ದಾನೆ. ಆತನ ಬಳಿ ಇದ್ದ ದೇಶಿ ನಿರ್ಮಿತ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ.

Advertisement

ರೌಡಿ ಜತೆಗೆ ಕನಿಷ್ಠ 24 ಮಂದಿ ಪೊಲೀಸರು ನಿಕಟ ಸಂಪರ್ಕದಲ್ಲಿ ಇದ್ದರು. ಹೀಗಾಗಿಯೇ ಕಾನ್ಪುರ ಜಿಲ್ಲಾ ಮೋಸ್ಟ್‌ ವಾಂಟೆಡ್‌ ಅಪರಾಧಿಗಳ ಪಟ್ಟಿಯಲ್ಲಿ ವಿಕಾಸ್‌ ದುಬೇ ಹೆಸರೇ ಇರಲಿಲ್ಲ. ಇದರಿಂದಾಗಿ ಪೊಲೀಸ್‌ ಅಧಿಕಾರಿಗಳೇ ತಮ್ಮವರ ವಿರುದ್ಧವೇ ತನಿಖೆ ಮಾಡುವ ಸ್ಥಿತಿ ಬಂದಂತಾಗಿದೆ.

ಠಾಣೆಯಿಂದ ಮಾಹಿತಿ ರವಾನೆಯಾದ ಕೂಡಲೇ ಪೂರ್ವ ನಿಯೋಜಿತರಾಗಿದ್ದ ದುಬೆ ಗ್ಯಾಂಗ್‌, ರಸ್ತೆಯನ್ನು ಬ್ಲಾಕ್‌ ಮಾಡಿ ಕಟ್ಟಡವೊಂದರಲ್ಲಿ ಅವಿತು­ಕೊಂಡಿತ್ತು. ಇಷ್ಟು ಮಾತ್ರವಲ್ಲ ವಿದ್ಯುತ್‌ ಪೂರೈಕೆಯ ಸಬ್‌ಸ್ಟೇಷನ್‌ ಒಂದಕ್ಕೆ ಕರೆ ಮಾಡಿ ಬಿಕರು ಗ್ರಾಮಕ್ಕೆ ವಿದ್ಯುತ್‌ ಪೂರೈಕೆ ಕೆಲ ಕಾಲ ಸ್ಥಗಿತಗೊಳಿಸುವಂತೆ ಚೌಬೇಪುರ ವಿದ್ಯುತ್‌ ವಿತರಣಾ ಕೇಂದ್ರದಿಂದ ಫೋನ್‌ ಬಂದಿತ್ತು ಎಂದು ಅಲ್ಲಿನ ನಿರ್ವಾಹಕ ಹೇಳಿದ್ದಾನೆ.

ಅನಂತರ ಡಿವೈಎಸ್ಪಿ ನೇತೃತ್ವದ ಪೊಲೀಸ್‌ ತಂಡ ಬರುತ್ತಿದ್ದಂತೆ ಅವರ ಮೇಲೆ ದುಷ್ಕರ್ಮಿ­ಗಳು ನಿರಂತರವಾಗಿ ಗುಂಡು ಹಾರಿಸಿ ಎಂಟು ಮಂದಿ ಪೊಲೀಸರನ್ನು ಕೊಲ್ಲಲಾಗಿತ್ತು. ಹೀಗಾಗಿ ವಿದ್ಯುತ್‌ ಸ್ಥಗಿತಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next