Advertisement

ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಯೊಂದೇ ಉತ್ತರ: ಸಂಡೂರಿನಲ್ಲಿ ಅಮಿತ್ ಶಾ

04:29 PM Feb 23, 2023 | Team Udayavani |

ಬೆಂಗಳೂರು: ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಯೊಂದೇ ಉತ್ತರ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ತಿಳಿಸಿದರು.

Advertisement

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇಂದು ವಿಜಯ ಸಂಕಲ್ಪ ಸಮಾವೇಶದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಆಯ್ಕೆಗೆ ಮೊದಲೇ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ- ಶಿವಕುಮಾರ್ ನಡುವೆ ಕಿತ್ತಾಟ ನಡೆದಿದೆ ಎಂಬುದನ್ನು ಮತದಾರರು ನೆನಪಿನಲ್ಲಿ ಇಡಬೇಕು ಎಂದು ಮನವಿ ಮಾಡಿದರು.

ಟುಕ್ಡೇ ಟುಕ್ಡೇ ಗ್ಯಾಂಗ್‍ಗೆ ಮತ ಕೊಡದಿರಿ ಎಂದು ತಿಳಿಸಿದ ಅವರು, ದೇಶದ ಸುರಕ್ಷತೆಗಾಗಿ ಮೋದಿಜಿ ಪಿಎಫ್‍ಐ ನಿಷೇಧಿಸಿದರು. ಆದರೆ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪಿಎಫ್‍ಐ ನಾಯಕರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿತ್ತು ಎಂದು ಟೀಕಿಸಿದರು.

ಅಯೋಧ್ಯೆ ರಾಮಮಂದಿರ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಮೋದಿಜಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ ಎಂದ ಅವರು, ಮೋದಿಜಿ ಸರಕಾರವು ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟವರು ಎಂದರು. ದೇಶದ ಸಮೃದ್ಧತೆ, ಸುರಕ್ಷತೆಗಾಗಿ ಮೋದಿಜಿ ನಾಯಕತ್ವವನ್ನೇ ಆಯ್ಕೆ ಮಾಡಿ ಎಂದು ವಿನಂತಿಸಿದರು.

ಗ್ಯಾಸ್, ಶೌಚಾಲಯ, ವಿದ್ಯುತ್, ಬ್ಯಾಂಕ್ ಖಾತೆ, 5 ಲಕ್ಷದ ಆರೋಗ್ಯ ವಿಮೆ, ಉಚಿತ ಕೋವಿಡ್ ಲಸಿಕೆ- ಇವೆಲ್ಲವೂ ಮೋದಿಜಿ ಅವರ ಕೊಡುಗೆ. ಬಳ್ಳಾರಿ ಮಾತ್ರವಲ್ಲದೆ, ರಾಜ್ಯಕ್ಕೆ ಗರಿಷ್ಠ ಅನುದಾನವನ್ನು ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿಯಡಿ 6 ಸಾವಿರ ಕೊಡಲಾಗಿದೆ. ಯಡಿಯೂರಪ್ಪ- ಬೊಮ್ಮಾಯಿ ಸರಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.

Advertisement

ಕಾಶ್ಮೀರ ನಮ್ಮದಲ್ಲವೇ? 370 ನೇ ವಿಧಿ ರದ್ದು ಮಾಡಿದ್ದು ಸರಿಯಲ್ಲವೇ ಎಂದು ಕೇಳಿದ ಅವರು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು 370ನೇ ವಿಧಿ ರದ್ದು ಮಾಡುವುದಕ್ಕೆ ವಿರೋಧ ಸೂಚಿಸಿದ್ದವು. ರಕ್ತದ ಹೊಳೆ ಹರಿದೀತೆಂದು ಎಚ್ಚರಿಸಿದ್ದವು. ಆದರೆ, ಮೋದಿಜಿ ಅವರು 370ನೇ ವಿಧಿ ರದ್ದು ಮಾಡಿ ಕಾಶ್ಮೀರವನ್ನು ನಮ್ಮದಾಗಿ ಪ್ರಕಟಿಸಿದರು ಎಂದು ವಿವರಿಸಿದರು.

ಮೋದಿಜಿ, ಯಡಿಯೂರಪ್ಪ ಅವರ ಮೇಲೆ ಭರವಸೆ ಇಡಿ. ಭ್ರಷ್ಟಾಚಾರ ಮುಕ್ತ, ದಕ್ಷಿಣ ಭಾರತದ ನಂಬರ್ ಒನ್ ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಕರ್ನಾಟಕವನ್ನು ಮಾಡಲಿದ್ದೇವೆ ಎಂದು ತಿಳಿಸಿದರು. ಬಿಜೆಪಿ ಅಪಾರ ಜನಬೆಂಬಲ ಪಡೆದಿದೆ ಎಂಬುದಕ್ಕೆ ಇಲ್ಲಿ ಸೇರಿದ ಜನರೇ ಸಾಕ್ಷಿ ಎಂದ ಅವರು, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಆಡಳಿತದಲ್ಲಿ ಭ್ರಷ್ಟಾಚಾರ ಗರಿಷ್ಠ ಪ್ರಮಾಣದಲ್ಲಿತ್ತು. ಇವರೆಡೂ ಕುಟುಂಬವಾದದ ಪಕ್ಷಗಳು. ಅವು ಜನರ ಅಭಿವೃದ್ಧಿ ಮಾಡುವುದಿಲ್ಲ ಎಂದು ಟೀಕಿಸಿದರು.

ಜೆಡಿಎಸ್‍ಗೆ ನೀಡಿದ ಪ್ರತಿ ಮತವೂ ಕಾಂಗ್ರೆಸ್‍ಗೆ ಹೋಗಲಿದೆ. ಕಾಂಗ್ರೆಸ್‍ಗೆ ಮತ ಕೊಟ್ಟರೆ ಅದು ಪಕ್ಷ, ಸರಕಾರವನ್ನು ಹೈಕಮಾಂಡಿನ ಎಟಿಎಂ ಮಾಡುವ ಸಿದ್ದರಾಮಯ್ಯರಿಗೆ ಹೋಗಲಿದೆ. ಆದ್ದರಿಂದ ದೇಶದ ಒಳಿತಿಗೆ ಮತ್ತು ಅಭಿವೃದ್ಧಿಗೆ ಕೆಲಸ ಮಾಡುವ ಬಿಜೆಪಿಯನ್ನೇ ಬೆಂಬಲಿಸಿ ಎಂದು ವಿನಂತಿಸಿದರು.

ಹಿರಿಯ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಈ ಪರಿಸರದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಜನಪರ ಯೋಜನೆಗಳನ್ನು ಗಮನಿಸಿ ಮತ ಕೊಡಿ. ಪಕ್ಷವು 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಬಿ.ಶ್ರೀರಾಮುಲು ಅವರು ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು ಬಿಜೆಪಿಗೆ ಅಧಿಕಾರ ಕೊಡಿ ಎಂದು ವಿನಂತಿಸಿದರು.

ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಸಂಸದರಾದ ದೇವೇಂದ್ರಪ್ಪ, ಕರಡಿ ಸಂಗಣ್ಣ, ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next