Advertisement

ಬಸ್‌ ನಿಲ್ದಾಣ ಅರ್ಧಂಬರ್ಧ ಮುಕ್ತ

05:05 PM Feb 11, 2021 | Team Udayavani |

ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗದ ಉಪನಗರ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣವು ಸತತ ಐದು ವರ್ಷದ ಕಾಮಗಾರಿಯ ಬಳಿಕ ಅಧಿಕೃತವಾಗಿ ಉದ್ಘಾಟನೆಗೊಂಡು ಬರೋಬ್ಬರಿ 1ವರ್ಷ ಗತಿಸಿದರೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ವಲಯಕ್ಕೆ ಮುಕ್ತವಾಗುವ ಭಾಗ್ಯ ಮಾತ್ರ ದೊರೆತಿಲ್ಲ.

Advertisement

2020ರ ಫೆಬ್ರುವರಿ ತಿಂಗಳಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರಿಂದ ಬಿಆರ್‌ಟಿಎಸ್‌ ಯೋಜನೆ ಅಧಿಕೃತ ಉದ್ಘಾಟನೆಗೊಂಡಿದ್ದು, ಅದರ ಜತೆಗೆ ಈ ನಿಲ್ದಾಣವೂ ಉದ್ಘಾಟನೆಗೊಂಡಿದೆ. ಆದರೆ ಈವರೆಗೂ ಸಾರ್ವಜನಿಕರಿಗೆ ಈ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗುವ ಲಕ್ಷಣಗಳೇ ಕಾಣುತ್ತಿಲ್ಲ.

ಉಪನಗರ ಹಾಗೂ ಗ್ರಾಮಾಂತರ ಬಸ್‌ಗಳ ಸಂಚಾರ ಆರಂಭಗೊಂಡು ಒಂದು ವರ್ಷ ಕಳೆದ ಬಳಿಕ ಉದ್ಘಾಟನೆ ಆಗಿರುವ ಈ ನಿಲ್ದಾಣದಲ್ಲಿ ಸ್ವತ್ಛತೆ ಕೊರತೆ ಜತೆಗೆ ವಾಣಿಜ್ಯ ಮಳಿಗೆಗಳು ಹಾಗೂ ಉಪಹಾರ ಗೃಹ ನಿರ್ಮಿಸಿದ್ದರೂ ಅವುಗಳ ಕಾರ್ಯಾರಂಭಕ್ಕೆ ಇನ್ನೂ ಚಾಲನೆ ಲಭಿಸಿಲ್ಲ. ಅದರಲ್ಲೂ ನಿಲ್ದಾಣದ ಕೆಳ ಮಹಡಿಯಲ್ಲಿ ನಿರ್ಮಿಸಿರುವ ಪಾರ್ಕಿಂಗ್‌ ಜಾಗವಂತೂ ಹಾಗೇ ಇದ್ದು, ಅದರ ಸೌಲಭ್ಯವೂ ಸಾರ್ವಜನಿಕರಿಗೆ ಸಿಗದಂತಾಗಿದೆ.

ಕಾರ್ಯಾರಂಭವಿಲ್ಲ: ನಿಲ್ದಾಣದ ಮುಖ್ಯ ಕಟ್ಟಡದಲ್ಲಿ ಉಪಹಾರ ಗೃಹ ನಿರ್ಮಿಸಿದ್ದರೆ ಕಟ್ಟಡದ ಪಕ್ಕದಲ್ಲೇ 8 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಸಿದ್ಧಗೊಂಡಿವೆ. ಕಟ್ಟಡದ ಮೊದಲ ಮಹಡಿಯಲ್ಲಿರುವ ಉಪಹಾರ ಗೃಹಕ್ಕೆ ಬೀಗ ಜಡಿಯಲಾಗಿದೆ.ಅದರ ಪಕ್ಕದಲ್ಲೇ ಅಧಿಕಾರಿಗಳ ಕೊಠಡಿ ನಿರ್ಮಿಸಲಾಗಿದ್ದು, ಅವುಗಳಿಗೂ ಬೀಗ ಜಡಿಯಲಾಗಿದೆ.

ಇನ್ನು ಮಳಿಗೆಗಳ ಕಾರ್ಯಾರಂಭವೂ ಆಗಿಲ್ಲ. ಈ ನಿಲ್ದಾಣದ ನೆಲ ಮಹಡಿಯಲ್ಲಿ ಸುಸಜ್ಜಿತ ಪಾರ್ಕಿಂಗ್‌ ಜಾಗ ನಿರ್ಮಿಸಲಾಗಿದೆ. ನಿಲ್ದಾಣದ ಪಕ್ಕದಲ್ಲೇ ಸೂಪರ್‌ ಮಾರುಕಟ್ಟೆ ಸೇರಿದಂತೆ ಇಡೀ ಮಾರುಕಟ್ಟೆ ಇರುವ ಕಾರಣ ಈ ಭಾಗದಲ್ಲಿ ಪಾರ್ಕಿಂಗ್‌ ಸಮಸ್ಯೆ ಸಾಕಷ್ಟಿದೆ. ಈ ಕಾರಣದಿಂದಲೇ ಪ್ರಯಾಣಿಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಿಲ್ದಾಣದ ನೆಲ ಮಹಡಿಯಲ್ಲಿ ವಿಶಾಲವಾಗಿ ಸುಸಜ್ಜಿತ ಪಾರ್ಕಿಂಗ್‌ ಜಾಗ ನಿರ್ಮಿಸಲಾಗಿದೆ. ಆದರೆ ನಿಲ್ದಾಣ ಉದ್ಘಾಟನೆಗೊಂಡರೂ ಈ ಪಾರ್ಕಿಂಗ್‌ ಜಾಗ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿಲ್ಲ.

Advertisement

ಟೆಂಡರ್‌ಗೆ ಅರ್ಜಿಯೇ ಬರಲಿಲ್ಲ : ದ್ವಿಚಕ್ರ ವಾಹನಕ್ಕೆ 12ರಿಂದ 24 ತಾಸಿಗೆ 50ರೂ, ನಾಲ್ಕು ಚಕ್ರ ವಾಹನಗಳಿಗೆ 100 ರೂ. ನಿಗದಿಗೊಳಿಸುವುದರ ಜತೆಗೆ ಕೆಲ ತಾಸುಗಳಿಗೆ ಇಂತಿಷ್ಟು ರೂ.ಗಳನ್ನು ನಿಗದಿ ಮಾಡಿ ಪಾರ್ಕಿಂಗ್‌ ಜಾಗ ಬಳಸಿಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿತ್ತು. ಅದರಂತೆ ಕೆಲ ಸಿಬ್ಬಂದಿಯನ್ನು ನಿಯೋಜಿಸಿ ಕೆಲ ದಿನಗಳ ಕಾಲ ಈ ಸೇವೆ ಆರಂಭಿಸಲಾಗಿತ್ತು. ಅಷ್ಟರೊಳಗೆ ಮಾರ್ಚ್‌ ನಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿಯಿಂದ ಸ್ಥಗಿತ ಮಾಡಲಾಗಿದ್ದು, ಆ ಬಳಿಕ ಮತ್ತೆ ಆರಂಭವಾಗಿಲ್ಲ. ಸದ್ಯ ಪಾರ್ಕಿಂಗ್‌ ಬಳಸದಂತೆ ಬೀಗ ಜಡಿಯಲಾಗಿದೆ.

ಇನ್ನು ಲಾಕ್‌ಡೌನ್‌ ನಂತರ ಕೆಲ ದಿನಗಳ ಹಿಂದೆಯಷ್ಟೇ ಪಾರ್ಕಿಂಗ್‌ ಜಾಗ ನಿರ್ವಹಣೆ, ಉಪಹಾರ ಗೃಹ ಹಾಗೂ ವಾಣಿಜ್ಯ ಮಳಿಗೆಗಳ ನಿರ್ವಹಣೆಗಾಗಿ ಮಾಸಿಕವಾಗಿ 7 ರಿಂದ 10 ಲಕ್ಷ ರೂ. ಗಳಿಗಾಗಿ ಏಕರೂಪದಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ ಈ ಟೆಂಡರ್‌ ಮೊತ್ತ ಅಧಿಕವಾಗಿರುವ ಕಾರಣ ಯಾರೂ ಅರ್ಜಿಯೇ ಹಾಕಿಲ್ಲ. ಇದರಲ್ಲಿ ಮತ್ತೆ ಸ್ವಲ್ಪ ಬದಲಾವಣೆ ಮಾಡಿ ಈವರೆಗೆ ಮೂರು ಸಲ ಟೆಂಡರ್‌ ಕರೆದಿದ್ದರೂ ಯಾರೂ ಅರ್ಜಿಯೇ ಹಾಕುತ್ತಿಲ್ಲ. ಹೀಗಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಇದು ಉಳಿದಿರುವ ಕಾರಣ ಈ ಸೇವೆಗಳಿಂದ ಸಾರ್ವಜನಿಕರು ವಂಚಿತರಾಗುವಂತಾಗಿದೆ.

ಇದನ್ನೂ ಓದಿ :ಗುಜರಾತ್‌ಗೆ ಸಾಗಿಸುತ್ತಿದ್ದ 420 ಕ್ವಿಂಟಲ್ ಪಡಿತರ ಅಕ್ಕಿ ವಶ

ಸದ್ಯ ಹಳೇ ಬಸ್‌ ನಿಲ್ದಾಣಕ್ಕೆ ಹೊಸ ರೂಪ ಸಿಕ್ಕಿದ್ದರೂ ವಾಣಿಜ್ಯ ಮಳಿಗೆಗಳು, ಪಾರ್ಕಿಂಗ್‌ ಹಾಗೂ ಉಪಹಾರ ಗೃಹ ಕಾರ್ಯಾರಂಭ ಮಾಡದೇ ಹಾಗೇ ನಿಂತಿವೆ. ಇದಕ್ಕೆ ಸಂಬಂಧಪಟ್ಟವರು ಇತ್ತ ಲಕ್ಷ ವಹಿಸಿ ಇವುಗಳ ಕಾರ್ಯಾರಂಭಕ್ಕೆ ಚಾಲನೆ ಸಿಗುವಂತೆ ಮಾಡಬೇಕು. ಇದಲ್ಲದೇ ನಿಲ್ದಾಣದ ಆವರಣದಲ್ಲಿ ಸ್ವತ್ಛತೆಗೆ ಆದ್ಯತೆ ನೀಡುವುದರ ಜತೆಗೆ ಗ್ರಾಮೀಣ ಭಾಗಕ್ಕೂ ಹೊಸ ಬಸ್‌ಗಳ ಸಂಚಾರ ಆಗುವಂತೆ ಮಾಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next