Advertisement

ಏರಿ ದುರಸ್ತಿಗಾಗಿ ಕೆರೆ ಕೋಡಿ ಒಡೆದ್ರು

03:06 PM Nov 02, 2020 | Suhan S |

ಹಳೇಬೀಡು: 12 ವರ್ಷಗಳ ನಂತರ ತುಂಬಿದ ಗ್ರಾಮದ ಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕೆರೆ ಏರಿ ದುರಸ್ತಿ ನೆಪದಲ್ಲಿ ಕೋಡಿಯನ್ನು ಒಡೆಯಲಾಗಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ರೈತರು, ಸ್ಥಳೀಯರು ಭಾನುವಾರ ತೀವ್ರ ಪ್ರತಿಭಟನೆ ನಡೆಸಿದರು.

Advertisement

ಕೆರೆ ಏರಿ ಮೇಲಿನ ರಸ್ತೆ ಬಿರುಕು ಬಿಟ್ಟಿದ್ದನ್ನು ದುರಸ್ತಿ ಮಾಡುವ ಸಲುವಾಗಿ ಜಿಲ್ಲಾಡಳಿತ, ಉಸ್ತುವಾರಿ ಸಚಿವ ಗೋಪಾಲಯ್ಯ ಮತ್ತು ಈ ಭಾಗದ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸದೇ, ದಿಢೀರ್‌ ಎಂದು ಕೋಡಿ ಒಡೆದು ನೀರು ಹೊರಬಿಡಲಾಗಿದೆ. ಇದು ಇಲ್ಲಿನ ರೈತರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಮುಂಜಾನೆಯಿಂದ ಸಂಜೆಯವರೆಗೂ ರಸ್ತೆಯಲ್ಲಿ ಅಡುಗೆ ಮಾಡಿ, ಬೃಹತ್‌ ಪ್ರತಿಭಟನೆ ನಡೆಸಿದ ರೈತರು, ಸರ್ಕಾರ ಮತ್ತು ಸಚಿವರ ಗಮನ  ಸೆಳೆಯುವ ಪ್ರಯತ್ನ ಮಾಡಿದರು.

ಉಗ್ರ ಹೋರಾಟದ ಎಚ್ಚರಿಕೆ: ಮಾಹಿತಿ ತಿಳಿದು ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಪೊಲೀಸ್‌ ವರಿಷ್ಠಾಧಿ ಕಾರಿ ಆರ್‌.ಶ್ರೀನಿವಾಸಗೌಡ ಸ್ಥಳಕ್ಕೆ ಆಗಮಿಸಿ ಪ್ರತಿ ಭಟನಾಕಾರರ ಮನವೊಲಿಸುವ ಪ್ರಯತ್ನ ನಡೆದರು. ಆದರೂ, ಸಫ‌ಲತೆ ಕಾಣಲಿಲ್ಲ. ಉಸ್ತುವಾರಿ ಸಚಿವರು ಖುದ್ದು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿ ಸಬೇಕು. ಬಿರುಕು ಬಿಟ್ಟಿರುವ ಕೆರೆ ಏರಿ ವಾರದೊಳಗೆ ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನೂ ರೈತರು ನೀಡಿದರು.

ದೊಡ್ಡ ವಿಷಯ ಮಾಡಬೇಡಿ: ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರಿಂದ, ತಮ್ಮ ಮನವೊಲಿಕೆ ಕಾರ್ಯ ಮುಂದುವರಿಸಿದ ಜಿಲ್ಲಾಧಿಕಾರಿ ಆರ್‌. ಗಿರೀಶ್‌, ನಿಮ್ಮ ಸಮಸ್ಯೆಯನ್ನು ಈಗಾಗಲೇ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಸಣ್ಣ ನೀರಾವರಿ ಇಲಾಖೆಯವರು ಕೆರೆ ಕೋಡಿ ಒಡೆ ಯುವ ಮುನ್ನ, ನನ್ನ ಗಮನಕ್ಕೆ ತಂದಿದ್ದಾರೆ. ನೀರನ್ನು ಹೊರ ಬಿಟ್ಟಿರುವುದು ಏರಿ ಕುಸಿತ ಕಡಿಮೆಯಾ ಗುವುದಕ್ಕೆ. ದಯವಿಟ್ಟು ಇದನ್ನು ರಾಜಕೀಯಕ್ಕೆ, ದೊಡ್ಡಮಟ್ಟದ ವಿಷಯ ಮಾಡುವುದು ಬೇಡ ಎಂದು ಹೇಳಿದರು.

ತಪ್ಪಿತಸ್ಥರ ಅಮಾನತು ಮಾಡಿ: ಅಧಿಕಾರಿಗಳು ಯಾವುದೇ ಕೆಲಸ ಮಾಡಬೇಕಾದರೆ ಸ್ಥಳೀಯ ಮುಖಂಡರು, ರೈತರ ಗಮನಕ್ಕೆ ತರಬೇಕು, ಕೆರೆಗೆ ನೀರು ತುಂಬಿಸಲು ತಾವು ಅನುಭವಿಸಿದ ತೊಂದರೆಗಳು ಅಷ್ಟಿಷ್ಟಲ್ಲ. ಈಗ ಏಕಾಏಕಿ ಕೆರೆ ಕೋಡಿ ಒಡೆದು ಜೀವ ಜಲವನ್ನು ಹೊರಗೆ ಬಿಟ್ಟಿರುವುದು ಬೇಸರದ ಸಂಗತಿ. ಕೂಡಲೇ ತಪ್ಪಿತಸ್ಥ ಅಧಿಕಾರಿ ಗಳನ್ನು ಅಮಾನತು ಮಾಡಬೇಕು ಎಂದು ಪ್ರತಿ ಭಟನಾಕಾರರು ಆಗ್ರಹಿಸಿದರು.

Advertisement

ಕೆರೆ ನೀರನ್ನೇ ನಂಬಿಕೊಂಡು ನಾವು ಬದು ಕುತ್ತಿದ್ದೇವೆ, ತಕ್ಷಣ ಬಿರುಕು ಬಿಟ್ಟಿರುವ ಕೆರೆ ಏರಿ ದುರಸ್ತಿ ಪಡಿಸದೇ ಹೋದಲ್ಲಿ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ದಯವಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಲೇಬೇಕು ಎಂದು ಬೆಳಗ್ಗೆಯಿಂದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದರು.

ಶಾಸಕ ಕೆ.ಎಸ್‌.ಲಿಂಗೇಶ್‌, ಡೀಸಿ ಗಿರೀಶ್‌, ತಹ ಶೀಲ್ದಾರ್‌ ನಟೇಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ಸುರೇಶ್‌, ತಾಲೂಕು ಅಧ್ಯಕ್ಷ ಅಡಗೂರು ಆನಂದ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗೂರು ಶಿವ ಕುಮಾರ್‌, ರೈತ ಮುಖಂಡ ಕೆ.ಪಿ.ಕುಮಾರ್‌ ಹಾಜರಿದ್ದರು.

 

ಕೆರೆ ನೀರು ಉಳಿಸಲು ಪ್ರಯತ್ನ :  ಸಂಜೆ 6ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ, ದ್ವಾರಸಮುದ್ರ ಕೆರೆ ಏರಿ ಒಡೆಯುವ ಅಪಾಯ ಇರುವ ಕಾರಣ, ಒಂದು ಅಡಿ ನೀರು ಹೊರಗೆ ಬಿಡಲೇಬೇಕಾಗಿದೆ. ಅದನ್ನು ರೈತರ ಗಮನಕ್ಕೆ ತಂದು ಕೋಡಿ ಒಡೆಯಬೇಕಿತ್ತು. ಅಧಿಕಾರಿಗಳು ಆ ಕೆಲಸ ಮಾಡಿಲ್ಲ, ಕೆರೆ ನೀರು ಅತ್ಯಮೂಲ್ಯ. ಅದನ್ನು ರಕ್ಷಿಸಿ ಈ ಭಾಗದ ಹೋಬಳಿಯ ರೈತರ ಹಿತ ಕಾಯುತ್ತೇನೆ. ಕಾಮಗಾರಿ ಪ್ರಾರಂಭಿಸಿರುವುದರಿಂದ ಶೀಘ್ರದಲ್ಲಿ ಕೆರೆ ನೀರನ್ನು ಉಳಿಸಿಕೊಂಡು ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next