Advertisement

ದಶಕದ ಬಳಿಕ ದ್ವಾರಸಮುದ್ರ ಕೆರೆ ಭರ್ತಿ

03:58 PM Jan 04, 2020 | Suhan S |

ಹಳೇಬೀಡು: ದಶಕಗಳಿಂದ ಭರ್ತಿಯಾಗದೇ ಬರಡಾಗಿದ್ದ ವಿಶ್ವ ಪ್ರಸಿದ್ಧ ದ್ವಾರಸಮುದ್ರ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಜೀವಕಳೆ ಬಂದಿದೆ. ಜತೆಗೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ, ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisement

ಬರಪೀಡಿತ ಪ್ರದೇಶವಾಗಿದ್ದ ಹಳೇಬೀಡು, ಜಾವಗಲ್‌, ಮಾದಿಹಳ್ಳಿ ಹೋಬಳಿಗಳ ಕೆರೆಗಳಿಗೆ ಯಗಚಿ ನದಿಯಿಂದ ರಣಘಟ್ಟ ಯೋಜನೆ ಮುಖಾಂತರ ನೀರು ಹರಿಸಲು ದೊಡ್ಡ ಮಟ್ಟದ ಹೋರಾಟವನ್ನು ರೈತ ಮುಖಂಡರು ದಶಕಗಳಿಂದ ಮಾಡಿಕೊಂಡು ಬಂದಿದ್ದರು. ಅಂದಿನ ಹೋರಾಟಕ್ಕೆ ಇಂದು ಫ‌ಲ ಸಿಕ್ಕಿದ್ದು, ಏತ ನೀರಾವರಿ ಯೋಜನೆ ಮತ್ತು ವರುಣನ ಕೃಪೆಗೆ ದ್ವಾರ ಸಮುದ್ರ ಕೆರೆ ಮೈದುಂಬಿಕೊಂಡಿದೆ.

750 ಹೆಕ್ಟೇರ್‌ ಪ್ರದೇಶದಲ್ಲಿ ಕೆರೆ: 9ನೇ ಶತಮಾನದಲ್ಲಿ ರಾಷ್ಟ್ರ ಕೂಟ ದೊರೆ ಧ್ರುವ ಅರಸನಿಂದ ನಿರ್ಮಿಸಲಾದ ದ್ವಾರಸಮುದ್ರ ಕೆರೆ, ಈ ಭಾಗದ ರೈತರ ಜೀವನಾಡಿಯಾಗಿದೆ. ಕೆರೆ ಸುಮಾರು 12 ವರ್ಷಗಳಿಂದ ನೀರಿಲ್ಲದೇ ಭಣಗುಡುತ್ತಿತ್ತು. ಈ ಭಾಗದ ಸುತ್ತ ಮುತ್ತ ಪ್ರದೇಶಗಳಲ್ಲಿ ಅಂತರ್ಜಲ ಕುಸಿದು ಸಾವಿರ ಅಡಿಗಳಷ್ಟು ಬೋರವೆಲ್‌ ಕೊರೆಸಿದರೂ ನೀರು ಬಾರದೇ ರೈತರು ಮಳೆಯನ್ನಾಧರಿಸಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸಬೇಕಾದ ದುಸ್ಥಿತಿ ಒದಗಿ ಬಂದು ರೈತರು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಶೇ.75ರಷ್ಟು ಮಳೆಯಿಂದ ಮತ್ತು ಶೇ.25ರಷ್ಟು ಏತ ನೀರಾವರಿ ಯೋಜನೆ ಫ‌ಲದಿಂದ ನದಿಯಂತಿರುವ, ಇಷ್ಟೊಂದು ದೊಡ್ಡ ದ್ವಾರಸಮುದ್ರ ಕೆರೆ ತುಂಬುವ ಹಂತಕ್ಕೆ ತಲುಪಿದೆ.

85 ಮಂದಿ ವಿರುದ್ಧ ಪ್ರಕರಣ ದಾಖಲು: ಸುಮಾರು 4 ವರ್ಷಗಳ ಹಿಂದೆ ಹಳೇಬೀಡಿನ ಪುಷ್ಪಗಿರಿ ಡಾ.ಶ್ರೀ ಸೋಮಶೇಖರ ಸ್ವಾಮೀಜಿ ಹಾಗೂ 7 ಮಂದಿ ಸ್ವಾಮೀಜಿಯವರು ಸೇರಿ ಒಟ್ಟು 85 ಮಂದಿ ನೀರಾವರಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಇಂದಿಗೂ ಕೂಡ ಇತ್ಯರ್ಥವಾಗಿಲ್ಲ. ಆದರೆ ಅವರೆಲ್ಲರ ಹೋರಾಟದ ಫ‌ಲವಾಗಿ ಇಂದು ರಣಘಟ್ಟ ಯೋಜನೆ ಮುಖಾಂತರ ಹಳೇಬೀಡಿನ ಕೆರೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ಆಶಾಭಾವನೆ ಜನರಲ್ಲಿ ಮೂಡಿದೆ.

ಪ್ರವಾಸಿಗರ ಆಕರ್ಷಣೆ: ದಿನಂಪ್ರತಿ ವಿಶ್ವ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯ ವೀಕ್ಷಣೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಹೊಯ್ಸಳೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವಂತಹ ದ್ವಾರಸಮುದ್ರ ಕೆರೆ ತುಂಬಿರುವುದರಿಂದ ಕೆರೆಗೆ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಪಾದಯಾತ್ರೆ ಮಾಡಿದ್ದ ಯಡಿಯೂರಪ್ಪ  : ಹಳೇಬೀಡು, ಜಾವಗಲ್‌ ಕೆರೆಗಳಿಗೆ ನೀರು ತುಂಬಿಸುವ ಹೋರಾಟದಲ್ಲಿ ಸುಮಾರು 15 ವರ್ಷಗಳ ಹಿಂದೆ ಬಿಜೆಪಿ ಪ್ರತಿ ಪಕ್ಷ ಮುಖಂಡ ಯಡಿಯೂರಪ್ಪ ಹೋರಾಟ ನಡೆಸಿದ್ದರು. ನೀರಾವರಿ ಹೋರಾಟದಲ್ಲಿ ಪಾಲ್ಗೊಂಡು ಹಳೇಬೀಡಿನಲ್ಲಿ ಪಾದಯಾತ್ರೆ ಮಾಡಿದ್ದರು. ನಂತರ ಅವರೇ ಮುಖ್ಯಮಂತ್ರಿಯಾದ ನಂತರ ಮೊಟ್ಟ ಮೊದಲಿಗೆ ಏತ ನೀರಾವರಿಗೆ ಅಡಿಗಲ್ಲನ್ನು ಹಾಕಿ, ಮೊದಲ ಹಂತದಲ್ಲಿ 10 ಕೋಟಿ ರೂ. ಮತ್ತು ನಂತರದಲ್ಲಿ 4.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಏತ ನೀರಾವರಿ ಯೋಜನೆ ಮುಖಾಂತರ ಯಗಚಿ ನದಿಯಿಂದ ಹಳೇಬೀಡು, ಅಡಗೂರು ಕೆರೆಗಳಿಗೆ ನೀರು ಹರಿಸುವ ಕಾರ್ಯ ಯಶಸ್ವಿಗೊಳಿಸಿದರು. ಈ ಮಹತ್ತರ ಕಾರ್ಯದಿಂದ ಈ ಭಾಗದ ರೈತರಿಗೆ ಮರುಭೂಮಿಯಲ್ಲಿ ಓಯಸಿಸ್‌ ದೊರೆತಂತಾಯಿತು ಎನ್ನುತ್ತಾರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುಲ್ಲಳ್ಳಿ ಸುರೇಶ್‌.

100 ಕೋಟಿ ರೂ. ಅನುದಾನ : ನೀರಾವರಿ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದ ಜೆಡಿಎಸ್‌ ಮುಖಂಡ ಕೆ.ಎಸ್‌. ಲಿಂಗೇಶ್‌ ಅವರು ಬೇಲೂರು ಕ್ಷೇತ್ರದ ಶಾಸಕ ರಾದ ಮೇಲೆ ಅವರ ಇಚ್ಛಾಶಕ್ತಿ ಮತ್ತು ನಿರಂತರ ಪರಿಶ್ರಮದಿಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ ಅವರ ಮನವೊಲಿಸಿ 100 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಬಿಡುಗಡೆ ಮಾಡಿಸಿಕೊಂಡು ಬಂದು ಈ ಭಾಗಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆಗೆ ಅಡಿಗಲ್ಲು ಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ಸುಮಾರು ಹಳೇಬೀಡಿನ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಕೆರೆಗೆಳಿಗೆ ನೀರಾವರಿ ಸೌಲಭ್ಯ ದೊರೆಯುವಂತಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next