Advertisement

Dwarakish: ಕರ್ನಾಟಕದ ಕುಳ್ಳನ ಯುಗಾಂತ್ಯ

04:50 PM May 08, 2024 | Team Udayavani |

ಭಾರತ ದೇಶದ ನಕ್ಷೆ ಅದರಲ್ಲಿ ಕರ್ನಾಟಕ ರಾಜ್ಯ ಅದರ ಮೂಲಕ ಸಿಂಹದಂತೆ ಘರ್ಜನೆ ಮಾಡುತ್ತಾ, ಹಾಲಿವುಡ್‌ನ‌ ಎಂಜಿಎಂ ಲಾಂಛನದ ರೀತಿಯಲ್ಲಿ ಕನ್ನಡ ಚಲನಚಿತ್ರಗಳ ರಂಗದಲ್ಲಿ ಪ್ರವೇಶ ಮಾಡಿದ ದ್ವಾರಕೀಶ್‌ ಅಥವಾ ಬಂಗಲೆ ಶಾಮರಾವ್‌ ದ್ವಾರಕನಾಥ್‌ರ ಚಿತ್ರಜೀವನ ಬಹುರೋಚಕ.

Advertisement

ನಾಯಕ ನಟ, ಹಾಸ್ಯ ನಟ, ಪೋಷಕ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಚಿತ್ರರಂಗದಲ್ಲಿನ ಎಲ್ಲ ಪಾತ್ರಗಳನ್ನು ನಿರ್ವಹಿಸಿದ ಕೆಲವೇ ಕೆಲವು ಜನರಲ್ಲಿ ದ್ವಾರಕೀಶ್‌ ಕೂಡ ಒಬ್ಬರು.

ಡಾ| ರಾಜ್‌ಕುಮಾರ್‌, ವಿಷ್ಣುವರ್ದನ್‌, ಅಂಬರೀಶ್‌, ರಜನಿಕಾಂತ್‌, ಶಂಕರನಾಗ್‌ ಮುಂತಾದ ಕಲಾವಿದರೊಂದಿಗೆ ನಟನೆ ಮತ್ತು ಅವರ ಚಿತ್ರಗಳನ್ನು ನಿರ್ಮಿಸಿದ ಕೀರ್ತಿ ದ್ವಾರಕೀಶ್‌ಗೆ ಸಲ್ಲುತ್ತದೆ.

ದ್ವಾರಕೀಶ್‌ ಅವರು 1942ರ ಆಗಸ್ಟ್‌ 19ರಂದು ಹುಣಸೂರುನಲ್ಲಿ ಶಾಮರಾವ್‌ ಮತ್ತು ಜಯಮ್ಮಾ ಎಂಬ ಮಾಧ್ವ ಬ್ರಾಹ್ಮಣ ದಂಪತಿಯ ಮಗನಾಗಿ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಅನಂತರ ಸಿಪಿಸಿ ಪಾಲಿಟೆಕ್ನಿಕ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ ಮುಗಿಸಿದರು. ಅನಂತರ ಅವರ ಸೋದರನ ಜತೆ ಸೇರಿ ಭಾರತ್‌ ಆಟೋ ಸ್ಪೇರ್‌ಸ್ಟೋರ್‌ ಶುರುಮಾಡಿದರು.

ದ್ವಾರಕೀಶ್‌ ಅವರ ಸಿನೆಮಾ ಜೀವನಕ್ಕೆ ಸ್ಪೂರ್ತಿ. ಅವರ ಮಾವ ಹುಣಸೂರು ಕೃಷ್ಣಮೂರ್ತಿ ಮತ್ತು ಇವರು ಸೇರಿ ನಿರ್ದೇಶಿಸಿದ ವೀರ ಸಂಕಲ್ಪ ಚಿತ್ರದಲ್ಲಿನ ರಾಜನ ಪಾತ್ರದ ಮೂಲಕ ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದರು. 1966ರಲ್ಲಿ ತುಂಗಾ ಬ್ಯಾನರ್ಸ್‌ನಡಿ ಮಮತೆಯ ಬಂಧನ ಎಂಬ ಸಿನೆಮಾದ ಸಹ ನಿರ್ಮಾಪಕರಾದರು. 1969ರಲ್ಲಿ ಮೇಯರ್‌ ಮುತ್ತಣ್ಣ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ಮಾಪಕರಾದರು. ಇದು ಡಾ| ರಾಜ್‌ಕುಮಾರ್‌ ಮತ್ತು ಭಾರತಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸೂಪರ್‌ಹಿಟ್‌ ಸಿನೆಮಾ.

Advertisement

ಅನಂತರದಲ್ಲಿ ರಾಜ್‌ಕುಮಾರ್‌ ಅವರ ಭಾಗ್ಯವಂತರು, ಸ್ವತಃ ತಾನೇ ನಾಯಕನಾಗಿ ನಟಿಸಿದ ಕುಳ್ಳ ಏಜೆಂಟ್‌ 000, ಕೌವ್‌ ಬಾಯ್‌ ಕುಳ್ಳ ಚಿತ್ರಗಳನ್ನು ನಿರ್ಮಿಸಿದರು. ಕುಳ್ಳ ಏಜೆಂಟ್‌ 000 ಚಿತ್ರದಲ್ಲಿನ “ಆಡು ಆಟ ಆಡು’ ಹಾಡಿಗೆ ಹಿಂದಿಯ ಖಾತ್ಯ ಗಾಯಕ ಕಿಶೋರ್‌ಕುಮಾರ್‌ ಅವರನ್ನು ಕರೆತಂದಿದ್ದು ಅವರ ಸಾಧನೆ ಮತ್ತು ಅಂದಿನ 70ರ ದಶಕದಲ್ಲಿ ಒಂದು ಹಾಡಿಗೆ ಕಿಶೋರ್‌ಕುಮಾರ್‌ಗೆ ದೊಡ್ಡ ಮೊತ್ತದ ಸಂಭಾವನೆ ನೀಡಿದ್ದರು.

ಅನಂತರದಲ್ಲಿ ದ್ವಾರಕೀಶ್‌ ವಿಷ್ಣುವರ್ಧನ್‌ರ ಕಳ್ಳ ಕುಳ್ಳ , ಕಿಟ್ಟು ಪುಟ್ಟು , ರಾಯರು ಬಂದರು ಮಾವನ ಮನೆಗೆ, ಇಂದಿನ ರಾಮಾಯಣ, ಗಲಾಟೆ ಸಂಸಾರ, ಪ್ರೀತಿ ಮಾಡು ತಮಾಷೆ ನೋಡು ಸಹಿತ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯ ಜೋಡಿಯಾಗಿದ್ದರು ಮತ್ತು ಗುರು ಶಿಷ್ಯರು, ಪ್ರಚಂಡ ಕುಳ್ಳ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಪೋಲಿಸ್‌ ಪಾಪಣ್ಣ , ಮನೆ ಮನೆ ಕಥೆ, ಕಲಾವಿದ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು.

ದ್ವಾರಕೀಶ್‌ ತಮ್ಮ ನಿರ್ದೇಶನದ ನೀ ಬರೆದ ಕಾದಂಬರಿ, ಡ್ಯಾನ್ಸ್‌ ರಾಜ ಡ್ಯಾನ್ಸ್‌ , ಮಿಡಿದ ಶುತ್ರಿ ಹೀಗೆ ಹಲವಾರು ಪ್ರಸಿದ್ಧ ಚಿತ್ರಗಳ ಮೂಲಕ ಹೊಸ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹೀಗೆ ತಮ್ಮ 81ನೇ ವಯಸ್ಸಿನಲ್ಲಿ ನಿಧನಹೊಂದಿದ ದ್ವಾರಕೀಶ್‌ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದರೆ ತಪ್ಪಾಗಲಾರದು, ದ್ವಾರಕೀಶ್‌ರ ಆತ್ಮಕ್ಕೆ ಶಾಂತಿ ಸಿಗಲೆಂದೂ ರಾಜ್ಯದ ಜನತೆಯ ಪರವಾಗಿ ದೇವರಲ್ಲಿ ಪ್ರಾರ್ಥಿಸೋಣ.

-ರಾಸುಮ ಭಟ್‌

ಕುವೆಂಪು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next