Advertisement

ಮಂಡ್ಯದಲ್ಲಿ ದೋಸ್ತಿ ಗುದ್ದಾಟ

09:45 AM Apr 05, 2019 | mahesh |

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಪರ ಕಾಂಗ್ರೆಸ್‌ ನಾಯಕರು ಕೆಲಸ ಮಾಡುತ್ತಿಲ್ಲ ಎಂಬ ಅಂಶವನ್ನು ಸ್ವತಃ ಸಚಿವ ಜಿ.ಟಿ.ದೇವೇಗೌಡ ಒಪ್ಪಿಕೊಂಡಿದ್ದಾರೆ. ಈ ಮೂಲಕ ಮಂಡ್ಯ ಕ್ಷೇತ್ರದಲ್ಲಿ ದೋಸ್ತಿಗಳ ನಡುವೆಯೇ ಮುಸುಕಿನ ಗುದ್ದಾಟವಿದೆ ಎಂಬುದು ಈಗ ಬಯಲಾಗಿದೆ.

Advertisement

ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡುವಿನಲ್ಲಿ ಮಾತನಾಡಿದ ಅವರು, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಬೆಂಬಲಿಸುವುದಕ್ಕೆ ಅಸಹಕಾರ ತೋರುತ್ತಿದ್ದಾರೆ.
ಜಿಲ್ಲೆಯ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ ಯಾರೊಬ್ಬರೂ ಬೆಂಬಲಕ್ಕೆ ಬರುತ್ತಿಲ್ಲ. ಎಲ್ಲವೂ ಕೈಮೀರಿ ಹೋಗಿದೆ, ನಿಖೀಲ್‌ ಪರ ನಾವು ಪ್ರಚಾರ ಮಾಡಲ್ಲ ಎಂದು ಚಲುವರಾಯಸ್ವಾಮಿ ಅವರೇ ನನ್ನ ಬಳಿ ಹೇಳಿದ್ದಾರೆ ಎಂದು ಜಿ.ಟಿ.ದೇವೇಗೌಡ ಬಹಿರಂಗಪಡಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರು ಸ್ಪರ್ಧೆ ಮಾಡಿರುವ ಕಡೆಗಳಲ್ಲಿ ಜೆಡಿಎಸ್‌ ಅವರಿಗೆ ಸಂಪೂರ್ಣ
ಬೆಂಬಲ ನೀಡುತ್ತಿದೆ. ಈ ವಿಚಾರವನ್ನು ಕಾಂಗ್ರೆಸ್‌ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸುವಂತೆ ಚಲುವರಾಯಸ್ವಾಮಿ ಅವರ ಬಳಿ ಮಾತನಾಡಿದ್ದೆ. ಆದರೆ, ಕುಮಾರಸ್ವಾಮಿ ನಮ್ಮ ವಿರುದ್ಧವೇ ಮಾತನಾಡುತ್ತಾರೆ, ಹೀಗಾಗಿ ನಿಮ್ಮ ಪರ ಕೆಲಸ ಮಾಡಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲೂ ಕೆಲವೊಂದು ಗೊಂದಲಗಳಿವೆ. ಕಾಂಗ್ರೆಸ್‌ ಮತ್ತು ನಾವು ಈವರೆಗೆ ಕುಳಿತು ಮಾತನಾಡಿಲ್ಲ. ಪ್ರಚಾರದ ಬ್ಯಾನರ್‌ ಗಳಲ್ಲಿ ನಮ್ಮ ಫೋಟೋ ಇಲ್ಲದ ಬಗ್ಗೆ ಜೆಡಿಎಸ್‌ ಕಾರ್ಯಕರ್ತರು ಗಲಾಟೆ ಮಾಡಿರುವುದನ್ನೂ ಅವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಸಾ.ರಾ.ಮಹೇಶ್‌ ವಿರುದ್ಧ ಆಕ್ರೋಶ:
ಮಂಡ್ಯ ಕ್ಷೇತ್ರದ ಕೆ.ಆರ್‌.ನಗರ ವಿಧಾನಸಭೆ ವ್ಯಾಪ್ತಿಯಲ್ಲೂ ಮೈತ್ರಿಧರ್ಮ ಪಾಲನೆಯಾ  ಗದೇ ಇರುವುದಕ್ಕೆ ಸ್ಥಳೀಯ ಶಾಸಕ ಹಾಗೂ ಸಚಿವ ಸಾ.ರಾ.ಮಹೇಶ್‌ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದುವರೆಗೆ ಸಾ.ರಾ. ಮಹೇಶ್‌ ಅವರು ಕಾಂಗ್ರೆಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾದರೆ ನಾವು ನಿಖೀಲ್‌ ಪರ ಹೇಗೆ ಮತಯಾಚನೆ ಮಾಡುವುದು ಎಂದು ಸ್ಥಳೀಯ ಘಟಕ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next