Advertisement

23ರಿಂದ ದಸರಾ ದೀಪಾಲಂಕಾರ: ಕೆಂಪುಕೋಟೆ ಪ್ರಮುಖ ಆಕರ್ಷಣೆ, ಬೆಳಕಲ್ಲಿ ಗಜಪಡೆ ತಾಲೀಮು

05:45 PM Sep 16, 2022 | Team Udayavani |

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ದೀಪಾಲಂಕಾರಕ್ಕೆ ಭರದ ಸಿದ್ಧತೆ ನಡೆದಿದ್ದು, ಈ ಬಾರಿ ಹೊಸದಿಲ್ಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್‌ ಭವನ, ಸುಭಾಷ್‌ಚಂದ್ರ ಬೊಸ್‌ ಅವರ ಪ್ರತಿಕೃತಿ ವಿಶೇಷವಾಗಿದೆ.

Advertisement

ನಗರದಲ್ಲಿ ದೀಪಾಲಂಕಾರ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ದೀಪಾಲಂಕಾರ ಸಮಿತಿ ಉಪ ವಿಶೇಷಾಧಿಕಾರಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾಹಿತಿ ನೀಡಿ, ಈ ಬಾರಿಯ ದಸರಾ ಉತ್ಸವದಲ್ಲಿ ನೂತನ ಸಂಸತ್‌ ಭವನ, ಬೋಸ್‌ ಪ್ರತಿಕೃತಿ ಜತೆಗೆ ಚಿತ್ರನಟ ಡಾ. ಪುನೀತ್‌ ರಾಜಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದ್ದು, ಪಿಒಪಿಯಲ್ಲಿ ನಿರ್ಮಿಸಿದ ಅವರ ಪ್ರತಿಮೆಗೆ ತ್ರಿಡಿ ವೀಡಿಯೋ ಸ್ಪರ್ಶ ನೀಡಲಾಗಿದೆ ಎಂದರು.

ನಗರದ ಎಲ್‌ಐಸಿ ವೃತ್ತದಲ್ಲಿ ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ಪ್ರಾಣಿ, ಪಕ್ಷಿಗಳ ಮಾದರಿ ಇರಲಿದ್ದು, ಜ್ಞಾನಪೀಠ ಪುರಸ್ಕೃತರಾದ ಕನ್ನಡಿಗರ ಪ್ರತಿಕೃತಿಗಳು, ಮೈಸೂರು ಮಹಾರಾಜರು, ಕೆಂಪುಕೋಟೆ ಮಾದರಿ ದೀಪಾಲಂಕಾರದಲ್ಲಿ ಕಂಗೊಳಿಸಲಿವೆ. ಕಳೆದ ವರ್ಷ 100 ಕಿ.ಮೀ. ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 124 ಕಿ.ಮೀ. ರಸ್ತೆ ದೀಪಾಲಂಕಾರ ಮಾಡಲಾಗುತ್ತಿದೆ. ಸೂರ್ಯಾಸ್ತದಿಂದ ರಾತ್ರಿ 10.30ರ ತನಕ ದೀಪಾಲಂಕಾರ ಇರಲಿದ್ದು,
ಈಗಾಗಲೇ ಸಿದ್ಧತೆ ಆರಂಭವಾಗಿದೆ ಎಂದು ವಿವರಿಸಿದರು.

ಸ್ವಾಗತ ಕಮಾನಿನೊಂದಿಗೆ ಆಕರ್ಷಕ ವಿದ್ಯುತ್‌ ದೀಪಾಲಂಕಾರ: ನಗರದ 96 ವೃತ್ತಗಳಲ್ಲಿ ದೀಪ ಅಲಂಕಾರ ಮಾಡಲಾಗುತ್ತಿದ್ದು, 35 ಪ್ರಾಯೋಜಕರು ಮುಂದೆ ಬಂದಿದ್ದಾರೆ. ಮೈಸೂರು ಹೆಬ್ಟಾಗಿಲುಗಳಾದ ನಂಜನಗೂಡು, ಹುಣಸೂರು, ಬೆಂಗಳೂರು ಮತ್ತು ತಿ.ನರಸೀಪುರದ ರಸ್ತೆಗಳಲ್ಲಿ ಸ್ವಾಗತ ಕಮಾನಿನೊಂದಿಗೆ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಇರಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ ಬನ್ನೂರು ಮತ್ತು ಎಚ್‌.ಡಿ.ಕೋಟೆ ಮೂಲಕ ಮೈಸೂರಿಗೆ ಬರುವ ರಸ್ತೆಯಲ್ಲೂ ದೀಪಾಲಂಕಾರ ಮಾಡುವಂತೆ ಸಲಹೆ ನೀಡಿದರು.

ಬೆಳಕಲ್ಲಿ ಗಜಪಡೆ ತಾಲೀಮು
ಈ ಬಾರಿಯ ಜಂಬೂ ಸವಾರಿ ಮೆರವಣಿಗೆ ಸಾಯಂಕಾಲ ಜರುಗುವುದರಿಂದ ಗಜಪಡೆ ದೀಪದ ಬೆಳಕಿನಲ್ಲಿ ಬನ್ನಿಮಂಟಪಕ್ಕೆ ತೆರಳಬೇಕಿದೆ. ಹಾಗಾಗಿ ಆನೆಗಳಿಗೆ ವಿದ್ಯುತ್‌ ದೀಪದ ಬೆಳಕಿನಲ್ಲಿ ಮೆರವಣಿಗೆ ಸಾಗಲು ಅಭ್ಯಾಸವಾಗಲು ಮೂರು ದಿನ ಮುಂಚಿತವಾಗಿಯೇ ಅಂದರೆ ಸೆ.23 ರಿಂದ ರಾಜಮಾರ್ಗದಲ್ಲಿ ದೀಪಾಲಂಕಾರ ಆಯೋಜಿಸಲಾಗುತ್ತದೆ. ಈ ವೇಳೆ ದಸರಾ ಗಜಪಡೆ 23ರಿಂದ 25ರವರೆಗೆ ಪ್ರತಿನಿತ್ಯ ಸಂಜೆ ದೀಪದ ಬೆಳಕಿನಲ್ಲಿ ತಾಲೀಮು ನಡೆಸಲಿವೆ ಎಂದರು. ಆನೆ ಮತ್ತು ಅಂಬಾರಿ ಸೇರಿ 16 ಅಡಿ ಎತ್ತರ ಇರುವುದರಿಂದ ನಾವು 22 ಅಡಿ ಎತ್ತರದಲ್ಲಿ ದೀಪಾಲಂಕಾರ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ ಎಂದರು.

Advertisement

ನಾಲ್ವಡಿ ಒಡೆಯರ್‌ ಪ್ರತಿಕೃತಿ
ಈ ಬಾರಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ವಿಮಾನ ನಿಲ್ದಾಣದ ದ್ವಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಾದರಿ ನಿರ್ಮಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ವಿಮಾನ ನಿಲ್ದಾಣ ಎಂದು ಹೆಸರು ಬರೆಯಬೇಕೆಂದು ಸಂಸದ ಪ್ರತಾಪಸಿಂಹ ಸಲಹೆ ನೀಡಿದರು. ಈಗಾಗಲೇ ರಾಜ್ಯ ಸರ್ಕಾರ ಮಂಡಕಳ್ಳಿ ವಿಮಾನ ನಿಲ್ದಾ ಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರು ನಾಮಕರಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರದಿಂದಲೂ ಒಪ್ಪಿಗೆ ದೊರೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಸೆಸ್ಕ್ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next