Advertisement

ಆನೆಗೊಂದಿ-ಹೇಮಗುಡ್ಡದಲ್ಲಿ ದಸರಾ ವೈಭವ

03:49 PM Oct 04, 2022 | Team Udayavani |

ಗಂಗಾವತಿ: ರಾಜ್ಯದಲ್ಲಿ ನಾಡಹಬ್ಬ ದಸರಾಕ್ಕೆ ತನ್ನದೇ ಆದ ಮಹತ್ವವಿದೆ. ಈ ಹಬ್ಬ ಆಚರಣೆಗೆ ತಂದವರು ಕುಮ್ಮಟ ದುರ್ಗ, ಆನೆಗೊಂದಿ, ವಿಜಯನಗರ ಅರಸರು ಎನ್ನುವ ಮಾಹಿತಿ ಇತಿಹಾಸದಲ್ಲಿ ಉಲ್ಲೇಖವಾಗಿದೆ.

Advertisement

ಪ್ರಸ್ತುತ ಮೈಸೂರು ದಸರಾ ಹಬ್ಬ ಈ ಮೊದಲು ಕುಮ್ಮಟದುರ್ಗದಿಂದ ಆರಂಭವಾಗಿ ವಿಜಯನಗರದಲ್ಲಿ ಇದೀಗ ಮೈಸೂರಿನಲ್ಲಿ ಸಡಗರದಿಂದ ಆಚರಿಸಲಾಗುತ್ತಿದೆ.

ಸಾಮ್ರಾಜ್ಯದ ರಕ್ಷಣೆಯ ಹೊಣೆ ಹೊತ್ತಿರುವ ಸೈನ್ಯದ ಬಲ ಪ್ರದರ್ಶನ ಮತ್ತು ಆಯುಧ ಪೂಜೆ ನೆಪದಲ್ಲಿ ಕುಮ್ಮಟದುರ್ಗ ಅರಸರು 9 ದಿನಗಳವರೆಗೆ ವಿಶೇಷವಾಗಿ ದೇವಿಯ ಆರಾಧನೆ ಆರಂಭಿಸಿದರು. ಕುಮ್ಮಟ ದುರ್ಗದ ನಂತರ ಆನೆಗೊಂದಿ ಮೂಲಕ ಹಂಪಿಯಲ್ಲಿ ಸ್ಥಾಪನೆಗೊಂಡ ವಿಜಯನಗರ ಸಾಮ್ರಾಜ್ಯದಲ್ಲಿ ಮಹಾನವಮಿ ದಿಬ್ಬದ ಬಳಿ ಸೇನೆಯ ಶಕ್ತಿ ಪ್ರದರ್ಶನ, 9 ದಿನಗಳ ಕಾಲ ಶ್ರೀದೇವಿಯ ಆರಾಧನೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದವು. ಇತಿಹಾಸಕಾರರ ಮಾಹಿತಿ ಪ್ರಕಾರ ಮೈಸೂರು ದಸರಾ ಆನೆಯ ಅಂಬಾರಿ ಮತ್ತು ಸಿಂಹಾಸನ ಮೂಲತಃ ಕುಮ್ಮಟದುರ್ಗದ ಅರಸರಿಗೆ ಸೇರಿದ್ದವು. ಶತ್ರುಗಳ ದಾಳಿ ಹಿನ್ನೆಲೆಯಲ್ಲಿ ಆನೆಗೊಂದಿ, ವಿಜಯನಗರ, ಚಂದ್ರಗಿರಿ, ಶ್ರೀರಂಗಪಟ್ಟಣ ನಂತರ ಮೈಸೂರು ಯದುವಂಶದ ಅರಸರ ಆಡಳಿತಕ್ಕೊಪ್ಪಿಸಲಾಗಿದೆ ಎಂಬ ಮಾಹಿತಿ ಇದೆ.

ಈಗಲೂ ಆನೆಗೊಂದಿ ವಾಲೀಕಿಲ್ಲಾ ಕೋಟೆಯಲ್ಲಿರುವ ಆದಿಶಕ್ತಿ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮತ್ತು ಕುಮ್ಮಟದುರ್ಗದ ಹತ್ತಿರ ಇರುವ ಹೇಮಗುಡ್ಡ ದುರ್ಗಾ ಪರಮೇಶ್ವರಿ ದೇಗುಲಗಳಲ್ಲಿ ದಸರಾ ಹಬ್ಬವನ್ನು 9 ದಿನಗಳ ಕಾಲ ವೈಭವಯುತವಾಗಿ ಆಚರಿಸಲಾಗುತ್ತದೆ. ಹಬ್ಬದ ಕೊನೆಯ ದಿನ ಆನೆ ಮೇಲೆ ಅಂಬಾರಿಯಲ್ಲಿ ದೇವತೆಯ ಮೂರ್ತಿ ಪ್ರತಿಷ್ಠಾಪಿಸಿ ಜನಪದ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ಆಕರ್ಷಿಣೀಯವಾಗಿರುತ್ತದೆ.

ಆನೆಗೊಂದಿಯಲ್ಲಿ ರಾಜವಂಶಸ್ಥರ ನೇತೃತ್ವದಲ್ಲಿ ದಸರಾ ಆಚರಿಸಲಾಗುತ್ತದೆ. 9 ದಿನಗಳ ಕಾಲ ಶ್ರೀದೇವಿಯ ಪುರಾಣ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತದೆ. ತಾಲೂಕಿನ ಹೇಮಗುಡ್ಡದಲ್ಲಿ ಮಾಜಿ ಸಂಸದ ಎಚ್‌.ಜಿ.ರಾಮುಲು ಕುಟುಂಬದವರು 28 ವರ್ಷಗಳಿಂದ ಅದ್ಧೂರಿಯ ನವರಾತ್ರಿ ಉತ್ಸವ ಆಯೋಜಿಸುತ್ತಿದ್ದಾರೆ. ಉತ್ತರ ಕರ್ನಾಟಕದ ನೂರಾರು ಕಲಾ ತಂಡಗಳು ಡೊಳ್ಳು, ಕೋಲು ಕುಣಿತದ ತಂಡಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಪ್ರತಿನಿತ್ಯ ಅನ್ನದಾನ ನಡೆಯುತ್ತದೆ.

Advertisement

ದಸರಾ ಹಬ್ಬದ ಮೂಲಕ ಪುರಾತನ ಧಾರ್ಮಿಕ ಸಾಂಸ್ಕೃತಿಕೋತ್ಸವವನ್ನು ಆನೆಗೊಂದಿ-ಹೇಮಗುಡ್ಡದಲ್ಲಿ ನಿರಂತರವಾಗಿ ಮುಂದುವರಿಸಲಾಗುತ್ತಿದೆ.

ಸರಕಾರ ಆನೆಗೊಂದಿ- ಹೇಮಗುಡ್ಡ ದಸರಾ ಹಬ್ಬ ಆಚರಣೆಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕು. ಕನ್ನಡ ಸಂಸ್ಕೃತಿ ಸಚಿವಾಲಯದಿಂದ 9 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಬೇಕು. ಪ್ರತಿವರ್ಷ ಆನೆಗೊಂದಿ ಉತ್ಸವ ಆಚರಣೆಗೂ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು. ಅಮರೇಶಪ್ಪ ಇಂಗಳಗಿ, ಕಲಾವಿದರು.

„ಕೆ.ನಿಂಗಜ್ಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next