ಹರ್ಯಾಣ: ಹರ್ಯಾಣದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಜೆಜೆಪಿ ಪಕ್ಷದ ಅಧ್ಯಕ್ಷ ದುಷ್ಯಂತ್ ಚೌತಾಲಾ ಅವರು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರವೊಂದನ್ನು ಬರೆದಿದ್ದು ವಿಶ್ವಾಸಮತ ಸಾಬೀತುಪಡಿಸಲು ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಬಿಜೆಪಿ ಸರ್ಕಾರಕ್ಕೆ ಮೂವರು ಸ್ವತಂತ್ರ ಶಾಸಕರು ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಹೊಸ ಚುನಾವಣೆ ನಡೆಸಿ ಸರ್ಕಾರ ರಚಿಸಬೇಕು ಇಲ್ಲವಾದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏತನ್ಮಧ್ಯೆ, ಹರಿಯಾಣ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಪಕ್ಷ ಹೇಳುತ್ತಿದೆ. ಶಾಸಕಾಂಗ ಪಕ್ಷವು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲು ಬಯಸಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಹಾಗೂ ಅವಧಿಪೂರ್ವ ಚುನಾವಣೆಗೆ ಒತ್ತಾಯಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ಬಿಜೆಪಿಯ ಮೂವರು ಸ್ವತಂತ್ರ ಶಾಸಕರು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದು ಇದರಿಂದ ಹರಿಯಾಣ ಸರ್ಕಾರದ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಇದೀಗ ಸ್ವತಂತ್ರ ಅಭ್ಯರ್ಥಿಗಳಾದ ಪುಂಡ್ರಿ ಶಾಸಕ ರಣಧೀರ್ ಗೋಲನ್, ನಿಲೋಖೇರಿ ಶಾಸಕ ಧರಂಪಾಲ್ ಗೊಂಡರ್ ಮತ್ತು ಚಾರ್ಖಿ ದಾದ್ರಿ ಶಾಸಕ ಸೋಮವೀರ್ ಸಾಂಗ್ವಾನ್ ಅವರು ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೂವರು ಶಾಸಕರು ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಘೋಷಿಸಿದರು. ಸರ್ಕಾರದಿಂದ ಬೆಂಬಲ ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಸ್ವತಂತ್ರ ಶಾಸಕ ಧರಂಪಾಲ್ ಗೊಂಡಾರ್ ಅವರು, ಬಿಜೆಪಿಯವರು ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕಾಂಗ್ರೆಸ್ ಪಕ್ಷ ಬಡವರು ಮತ್ತು ರೈತರ ಬಗ್ಗೆ ಯೋಚಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Delhi Police; ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಗೆ ಸೇರಿದ 9 ಜನರ ಬಂಧನ