ನವದೆಹಲಿ:”ತುರ್ತು ಪರಿಸ್ಥಿತಿ ಮೂಲಕ ದೇಶವನ್ನೇ ಜೈಲಾಗಿ ಮಾರ್ಪಾಡು ಮಾಡಿದವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ವಾಗ್ಧಾಳಿ ನಡೆಸಿದ್ದಾರೆ.
ಹರ್ಯಾಣದ ಪಾಣಿಪತ್‌ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಮಾರೋಪದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “1975ರಲ್ಲಿ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿ ವೇಳೆ ನನ್ನನ್ನು ಜೈಲಿಗಟ್ಟಲಾಗಿತ್ತು. ಪ್ರಜಾಪ್ರಭುತ್ವವನ್ನು ವಿನಾಶಗೊಳಿಸಲೆಂದೇ, ನನ್ನಂಥ ಸಾವಿರಾರು ಮಂದಿಯನ್ನು ಕಾಂಗ್ರೆಸ್ ಜೈಲಿನಲ್ಲಿರಿಸಿತ್ತು. ಈ ಮೂಲಕ ಇಡೀ ದೇಶವನ್ನೇ ಸೆರೆಮನೆಯಾಗಿಸಿತ್ತು. ಅಂಥ ಪಕ್ಷದ ರಾಹುಲ್ ಗಾಂಧಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಪ್ರಜಾಪ್ರಭುತ್ವ ಅಪಾಯದಲ್ಲಿದ್ದಿದ್ದರೆ ಇಷ್ಟೊಂದು ಮಂದಿ ಇಲ್ಲಿರುತ್ತಿದ್ದರೇ? ಕಾಂಗ್ರೆಸ್‌ನವರಿಗೆ ಅವರು ಗೆದ್ದಾಗ ಮಾತ್ರವೇ ಪ್ರಜಾಪ್ರಭುತ್ವ ಸುರಕ್ಷಿತ, ಸಂಸತ್ತು ಸುಭಿಕ್ಷ ಎನಿಸುತ್ತದೆ. ರಾಹುಲ್ ಸ್ವಲ್ಪವಾದರೂ ಗಂಭೀರವಾಗಿ, ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.
ರಾಜಕೀಯ ಷಡ್ಯಂತ್ರ ಹೊಸದಲ್ಲ:
ಆರ್‌ಎಸ್‌ಎಸ್ ಕುರಿತು ರಾಹುಲ್ ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಏಕೆಂದರೆ, ಇದು ಹೊಸದಲ್ಲ. ಹಿಂದಿನಿಂದಲೂ ಅವರ ಪೂರ್ವಜರೂ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಅವರದ್ದು ರಾಜಕೀಯ ತಂತ್ರ. ಆದರೆ, ದೇಶದ ಜನತೆಗೆ ಸತ್ಯ ಮತ್ತು ವಾಸ್ತವ ತಿಳಿದಿದೆ ಎಂದಿದ್ದಾರೆ.
Related Articles
ಭಾರತ ಈಗಾಗಲೇ ಹಿಂದೂರಾಷ್ಟ್ರ
ದೇಶ ಮತ್ತು ರಾಜ್ಯ ಎರಡು ವಿಭಿನ್ನ ವಿಚಾರಗಳು. ದೇಶ ಸಾಂಸ್ಕೃತಿಕ ಪರಿಕಲ್ಪನೆಯಾದರೆ, ರಾಜ್ಯ ಸಾಂವಿಧಾನಿಕ ಪರಿಕಲ್ಪನೆ. ಹಿಂದೂರಾಷ್ಟ್ರ ಎಂಬುದು ಸಾಂಸ್ಕೃತಿಕ ಪರಿಕಲ್ಪನೆ ಎಂದು ಕಳೆದ 100 ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಭಾರತ ಈಗಾಗಲೇ ಹಿಂದೂರಾಷ್ಟ್ರ. ಅದನ್ನು ಮತ್ತೆ ಹಿಂದೂರಾಷ್ಟ್ರವಾಗಿಸುವ ಅಗತ್ಯವಿಲ್ಲ ಎಂದು ಹೊಸಬಾಳೆ ತಿಳಿಸಿದ್ದಾರೆ. ಇದೇ ವೇಳೆ, ಸಲಿಂಗ ವಿವಾಹದ ಕುರಿತಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿಲುವಿಗೆ ನಮ್ಮ ಸಮ್ಮತಿ ಇದೆ ಎಂದೂ ಹೇಳಿದ್ದಾರೆ.