ಮುಂಬಯಿ: ನಮ್ಮ ಆಚಾರ, ವಿಚಾರ, ಆರೋಗ್ಯದ ಬಗ್ಗೆ ಹಲವು ವರ್ಷಗಳ ಹಿಂದೆ ಋಷಿ-ಮುನಿಗಳು ಹಲವು ವಿಚಾರಗಳನ್ನು ಹೇಳಿದ್ದಾರೆ. ನಮ್ಮ ಆಹಾರ-ವಿಹಾರದ ಬಗ್ಗೆ ಜಾಗ್ರತೆ ವಹಿಸಬೇಕು. ಪುರಾತನ ಸಂಸ್ಕೃತಿ, ಸಂಸ್ಕಾರಗಳು ಮಾನವನ ಮನಸ್ಸನ್ನು ಸುಸಂಸ್ಕೃತವನ್ನಾಗಿಸಿ, ಆರೋಗ್ಯವಂತರಾಗಿ ಮಾಡಬಲ್ಲದು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ದುರ್ಗೆಯ ಮಡಿಲಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅಸ್ಪತ್ರೆ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಫೆ. 19ರಂದು ಸಂಜೀವಿನಿ ಟ್ರಸ್ಟ್ ಮುಂಬಯಿ ವತಿಯಿಂದ ಮಂಗಳೂರು ಕಟೀಲಿನ ಅಜಾರುವಿನಲ್ಲಿ ನಿರ್ಮಾಣಗೊಳ್ಳಲಿರುವ ದುರ್ಗಾ ಸಂಜೀವಿನಿ ಚಾರಿಟೆಬಲ್ ಹಾಸ್ಪಿಟಲ್ ಕಟೀಲು ಇದರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಆಶೀರ್ವಚನ ನೀಡಿದರು.
ಮಣಿಪಾಲ ವಿಶ್ವವಿದ್ಯಾಲಯದ ನಿರ್ವಹಣೆ ಹಾಗೂ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸಹಯೋಗದೊಂದಿಗೆ ನಿರ್ಮಾಣಗೊಳ್ಳಲಿರುವ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಚಿವ ಬಿ. ರಮಾನಾಥ ರೈ ಅವರು, ಯಕ್ಷಗಾನ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕಟೀಲು ಕ್ಷೇತ್ರವು ಇದೀಗ ಜನರ ಆರೋಗ್ಯ ಕಾಳಜಿಯಿಂದ ಸಂಜೀವಿನಿ ಟ್ರಸ್ಟ್ ಹಾಗೂ ಮಣಿಪಾಲ ಅಸ್ಪತ್ರೆಯ ಸಹಭಾಗಿತ್ವದಲ್ಲಿ ಅಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಡಾ| ಸುರೇಶ್ ರಾವ್ ಅವರಿಗೆ ಕಟೀಲಿನ ಜತೆ ಭಾವನಾತ್ಮಕ ಸಂಬಂಧವಿದೆ. ಈ ನಿಟ್ಟಿನಲ್ಲಿ ಕಟೀಲಿಗೆ ಆರೋಗ್ಯ ಭಾಗ್ಯ ಕೊಡುವ ಕೆಲಸ ಮಾಡಿದ್ದಾರೆ. ನಿಯಮಿತ ಪೌಷ್ಟಿಕತೆಯ ಆಹಾರ ಹಾಗೂ ಪರಿಸರ ಸ್ನೇಹಿ ವಾತಾವರಣ ಇರಬೇಕು. ಮಾಲಿನ್ಯಮುಕ್ತ ಸ್ವತ್ಛ ಸಮಾಜ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಡಬಿದ್ರಿ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲು ಇದರ ವಂಶಿಕ ವಿಶ್ವಸ್ತ, ಪ್ರಧಾನ ಆರ್ಚಕ ಕೆ. ವಾಸುದೇವ ಅಸ್ರಣ್ಣ, ಆರ್ಚಕರಾದ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ, ಕೆ. ಅನಂತಪದ್ಮನಾಭ ಅಸ್ರಣ್ಣ ಇವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ತಾಲೂಕು ಪಂಚಾಯತ್ ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರಿ¤, ಕಟೀಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮಣಿಪಾಲ ವಿವಿಯ ಪೂರ್ವ ಉಪಕುಲಪತಿ ಡಾ| ಎಚ್. ಎಸ್. ಬಲ್ಲಾಳ್, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ವಿ. ಸುರೇಂದ್ರ ಶೆಟ್ಟಿ, ಮಣಿಪಾಲ ವಿವಿ ಕುಲಸಚಿವ ಡಾ| ನಾರಾಯಣ ಸಭಾಹಿತ್, ಎಂಆರ್‌ಪಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕ ಹರಿ ಕುಮಾರ್, ಚಕ್ರವರ್ತಿ ಸೂಲಿಬೆಲೆ, ಸುಬ್ರಹ್ಮಣ್ಯ ಕುಸ್ನೂರು, ಟ್ರಸ್ಟ್‌ನ ವಿಶ್ವಸ್ತ ಸದಸ್ಯರಾದ ಲಕ್ಷ್ಮೀಶ ಜಿ. ಆಚಾರ್ಯ, ವಿಜಯಲಕ್ಷ್ಮೀ ಸುರೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೆಎಂಸಿ ಮಂಗಳೂರು ಡೀನ್ ಡಾ| ವೆಂಕಟ್ರಾಯ ಪ್ರಭು, ಟ್ರಸ್ಟ್‌ನ ವಿಶ್ವಸ್ತ ಸದಸ್ಯರಾದ ಡಾ| ಶ್ರುತಿ ಎಸ್. ರಾವ್, ಡಾ| ದೇವಿ ಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್, ಐಕಳ ಹರೀಶ್ ಶೆಟ್ಟಿ, ತೋನ್ಸೆ ಬಿ. ರಮಾನಂದ ರಾವ್, ಮುರಳೀಧರ ರಾವ್, ರಾಮಪ್ರಸಾದ್ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕೆ. ಹರಿನಾರಾಯಣ ಅಸ್ರಣ್ಣ ಸ್ವಾಗತಿಸಿದರು. ಅರುಣಾ ಪಿ. ರಾವ್ ಶ್ಲೋಕ ಪಠಣಗೈದರು. ಶ್ರೀಪತಿ ರಾವ್ ಆಸ್ಪತ್ರೆಯ ಯೋಜನೆ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಶ ಜಿ. ಆಚಾರ್ಯ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್