Advertisement

ನಕಲಿ ಡಿಡಿ ನೀಡಿ ಪೊಲೀಸ್‌ ಇಲಾಖೆಗೆ ವಂಚನೆ

12:44 AM May 06, 2019 | Team Udayavani |

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚಿಸುವ ಕಳ್ಳರನ್ನು ಹಿಡಿಯುವ ಪೊಲೀಸರಿಗೆ ಪಟಾಕಿ ವ್ಯಾಪಾರಿಗಳು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಪರ್ಯಾವೆಂದರೆ ವಂಚನೆ ನಡೆದ ಆರು ತಿಂಗಳ ಬಳಿಕ ಪೊಲೀಸ್‌ ಇಲಾಖೆಗೆ ಈ ಮಾಹಿತಿ ಗೊತ್ತಾಗಿದೆ.

Advertisement

ಕಳೆದ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಳಿಗೆ ತೆರೆಯಲು ಪೊಲೀಸ್‌ ಇಲಾಖೆಗೆ ಪಾವತಿಸಬೇಕಾಗಿದ್ದ 6000 ಸಾವಿರ ರೂ. ಮೊತ್ತದ ಪ್ರತ್ಯೇಕ ಡಿ.ಡಿಗಳನ್ನು 10 ಮಂದಿ ಪಟಾಕಿ ವ್ಯಾಪಾರಿಗಳು ಅಸ್ತಿತ್ವದಲ್ಲಿಯೇ ಇಲ್ಲದ ಬ್ಯಾಂಕ್‌ ಹೆಸರಿನಲ್ಲಿ ನಕಲಿ ಡಿಡಿಗಳನ್ನು ಇಲಾಖೆಗೆ ಕಳುಹಿಸಿಕೊಟ್ಟು ವಂಚಿಸಿದೆ.

ಈ ವಿಚಾರ ಗೊತ್ತಾದ ಕೂಡಲೇ ನಗರ ಪೊಲೀಸ್‌ ಆಯಕ್ತರ ಆಡಳಿತ ವಿಭಾಗ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್‌ ಇಲಾಖೆಗೆ ವಂಚಿಸಿದ 10 ಮಂದಿ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ವಿನೋದ್‌ ರಾಜ್‌, ಕಸ್ತೂರಿ, ಸುಧೀಂದ್ರನ್‌ ಪಿ ನಾಯರ್‌, ವಿನೋದ್‌ ಕುಮಾರ್‌, ಲಲಿತಾ, ಬಿ ಸಂತೋಷ್‌, ಪ್ರೇಮಲತಾ ದುಗಾರ್‌, ಟಿ.ವಿ ಶ್ರೀಧರ್‌, ರಮೇಶ್‌ ಎಚ್‌.ಬಿ ಎಂಬುವವರ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸರ್ಕಾರಕ್ಕೆ ವಂಚಿಸಿದ ಗಂಭೀರ ಆರೋಪ ಹಿನ್ನೆಲೆಯಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ) ವರ್ಗಾಯಿಸಿ ನಗರ ಪೊಲೀಸ್‌ ಆಯುಕ್ತರಾದ ಟಿ. ಸುನೀಲ್‌ ಕುಮಾರ್‌ ಆದೇಶಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಆರೋಪಿಗಳು ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಒಳಸಂಚು ರೂಪಿಸಿ ಹತ್ತು ಮಂದಿ ನಕಲಿ ಬ್ಯಾಂಕ್‌ ಹೆಸರಿನಲ್ಲಿ ನಕಲಿ ಡಿ.ಡಿಗಳನ್ನು ಸಲ್ಲಿಸಿದ್ದಾರೆ. ನಕಲಿ ಡಿಡಿ ಸಲ್ಲಿಸಿ ಇನ್ನಿತರೆ ವಂಚನೆ ಎಸಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.

ವಂಚನೆ ಬಯಲಾಗಿದ್ದು ಹೇಗೆ?: 2018ರ ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಪಟಾಕಿ ಮಳಿಗೆ ತೆರೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿದಾರರು ಅಗ್ನಿಶಾಮಕದಳದ ಡಿ.ಜಿ ಹೆಸರಿನಲ್ಲಿ 5000 ರೂ. ಮೊತ್ತ ಹಾಗೂ ನಗರ ಪೊಲೀಸ್‌ ಆಯುಕ್ತರ ಹೆಸರಿನಲ್ಲ 1000 ರೂ. ಮೊತ್ತದ ಡಿ.ಡಿಗಳನ್ನು ಸಲ್ಲಿಸಬೇಕಿತ್ತು.

ಈ ವೇಳೆ ಅರ್ಜಿಯ ಜತೆಗೆ ವಿನೋದ್‌ರಾಜ್‌ ಸೇರಿ 10 ಮಂದಿ ಆರೋಪಿಗಳು ಕೋರಮಂಗಲದಲ್ಲಿರುವ ಕಂಗರ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಹೆಸರಿನಲ್ಲಿ ಡಿ.ಡಿಗಳನ್ನು ಸಲ್ಲಿಸಿದ್ದರು.

ಡಿ.ಡಿಗಳನ್ನು ಸ್ವೀಕರಿಸಿದ್ದ ಆಡಳಿತ ವಿಭಾಗ ಐದು ಅರ್ಜಿದಾರ ಆರೋಪಿಗಳ ಐದು ಸಾವಿರ ರೂ.ಮೊತ್ತದ ಡಿ.ಡಿಗಳನ್ನು ಅಗ್ನಿಶಾಮಕ ದಳ ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಸಾವಿರ ರೂ. ಮೊತ್ತದ ಡಿ.ಡಿಗಳನ್ನು ಸರ್ಕಾರದ ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಸ್‌ಬಿಐಗೆ ಕಳುಹಿಸಿಕೊಟ್ಟಿತ್ತು.

ಈ ವೇಳೆ ಡಿ.ಡಿಗಳನ್ನು ಬ್ಯಾಂಕ್‌ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಂಗರ್‌ ಕೋ ಆಪರೇಟಿವ್‌ ಬ್ಯಾಂಕ್‌ ಇಲ್ಲದಿರುವುದು ಕಂಡು ಬಂದಿದ್ದು. ನಕಲಿ ಡಿ.ಡಿಗಳು ಎಂಬ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪುನ: ಅರ್ಜಿ ಸಲ್ಲಿಸಿದ್ದವರ ದಾಖಲೆಗಳನ್ನು ಪರಿಶೀಲಿಸಿದಾಗ 10 ಮಂದಿ ನಕಲಿ ಡಿಡಿಗಳನ್ನು ಸಲ್ಲಿಸಿರುವುದು ಪತ್ತೆಯಾಗಿದೆ. ಹೀಗಾಗಿ, ಆರೋಪಿತರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next