Advertisement

ಡಂಪಿಂಗ್‌ ಯಾರ್ಡ್‌ ರಸ್ತೆಯಲ್ಲೂ ತ್ಯಾಜ್ಯ ರಾಶಿ

04:03 PM Jun 27, 2023 | Team Udayavani |

ಮಹಾನಗರ: ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಒಳಗೆ ಇರಬೇಕಾದ ತ್ಯಾಜ್ಯ ರಸ್ತೆ ಬದಿಯಲ್ಲಿ ಕಂಡು ಬರುತ್ತಿದ್ದು, ದೇವಿನಗರ ಬಳಿಯ ಆರ್‌ಟಿಒ ಕ್ರಾಸ್‌ ರಸ್ತೆಯಿಂದ ಎಸ್‌ಡಿಎಂ ಶಾಲೆಯ ವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯಲಾಗಿದೆ.

Advertisement

ಪಚ್ಚನಾಡಿ ರಸ್ತೆಯಲ್ಲಿ ಸಾಗುವವರಿಗೆ ತ್ಯಾಜ್ಯದಿಂದ ಬರುವ ವಾಸನೆ ಉಚಿತÊ ಾಗಿದ್ದು, ಈಗ ರಸ್ತೆ ಬದಿಯಲ್ಲೂ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಮಳೆಗೆ ಅವುಗಳು ಕೊಳೆತು ವಾಸನೆ ಇನ್ನಷ್ಟು ಹೆಚ್ಚಾಗಿದೆ. ಸುಮಾರು ನಾಲ್ಕೈದು ಲೋಡ್‌ ಗಳಷ್ಟು ತ್ಯಾಜ್ಯ ಈಗಾಗಲೇ ರಾಶಿ ಬಿದಿದ್ದು, ಸಂಬಂಧಪಟ್ಟುವರು ಇದನ್ನು ತೆರವು ಗೊಳಿಸದಿದ್ದಲ್ಲಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಯಿದೆ. ರಸ್ತೆಯಲ್ಲಿ ಸಾಗುವವರೂ ಮನೆಯ ತಾಜ್ಯವನ್ನು ಪ್ಲಾಸ್ಟಿಕ್‌ ಪೊಟ್ಟಣಗಳಲ್ಲಿ ಕಟ್ಟಿ ಎಸೆದು ಹೋಗಿರುವುದೂ ಕಂಡು ಬಂದಿದೆ.

ಮಂಗಳೂರು ಮಹಾನಗರ ಪಾಲಿಕೆ ಹಾಗೂ ಆಸುಪಾಸಿನ ಪಟ್ಟಣ ಪಂಚಾಯತ್‌, ಪುರಸಭೆಗಳ ತ್ಯಾಜ್ಯವನ್ನು ಪಚ್ಚನಾಡಿ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ನಿರ್ವಹಿಸಲಾಗುತ್ತಿದೆ. ಆದರೂ ತಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಂಪಿಂಗ್‌ ಯಾರ್ಡ್‌ ನಿಂದ ಈಗಾಗಲೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಚಾರಕ್ಕೆ ಸುಸಜ್ಜಿತ ರಸ್ತೆ ಇದ್ದರೂ ಎರಡೂ ಬದಿಯಲ್ಲಿ ತ್ಯಾಜ್ಯ ಎಸೆದಿರುವುದರಿಂದ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ ಎಂದು ರವಿ ವಾಮಂಜೂರು ಆರೋಪಿಸಿದ್ದಾರೆ.

ಕಟ್ಟಡ ನಿರ್ಮಾಣ ತ್ಯಾಜ್ಯವೂ ಇದೆ
ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ತಾಜ್ಯವನ್ನೂ ಇಲ್ಲಿ ರಸ್ತೆ ಬದಿಯಲ್ಲಿ ಸುರಿಯಲಾಗಿದೆ. ಸಿಮೆಂಟ್‌ ಚೀಲಗಳು, ಮಣ್ಣು-ಕಾಂಕ್ರೀಟ್‌ ಮಿಶ್ರಣ, ಕ್ಯೂರಿಂಗ್‌ ಬಳಸಲಾಗುವ ಬೈ ಹುಲ್ಲು, ಮೊದಲಾದವರುಗಳ ರಾಶಿಯೇ ಇದೆ. ಈ ತ್ಯಾಜ್ಯವನ್ನು ಲಾರಿಗಳಲ್ಲಿ ರಾತ್ರಿ ವೇಳೆ ತಾಜ್ಯ ತಂದು ಸುರಿದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ
ಜಾಗದಲ್ಲೂ ತ್ಯಾಜ್ಯ
ಪಚ್ಚನಾಡಿಯಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ನೆಡುತೋಪಿನಲ್ಲೂ ತಾಜ್ಯ ಸರಿಯಲಾಗಿದೆ. ನೆಡುತೋಪಿನ ಬದಿಯಲ್ಲಿ ಕಚ್ಚಾ ರಸ್ತೆಯಿದ್ದು, ಅದರ ಎರಡೂ ಬದಿಯಲ್ಲಿ ತಾಜ್ಯದ ರಾಶಿ ಬಿದ್ದಿದೆ. ಕಳೆದ ಬೇಸಗೆಯಲ್ಲಷ್ಟೇ ಅರಣ್ಯ ಇಲಾಖೆಯವರು ಕಳೆಗಿಡಗಳು, ತ್ಯಾಜ್ಯವನ್ನು ಹೆಕ್ಕಿ ಸ್ವತ್ಛಗೊಳಿಸಿದ್ದರು.

Advertisement

ಬೀದಿ ನಾಯಿಗಳ ಹಾವಳಿ
ಪಚ್ಚನಾಡಿ ಪ್ರದೇಶದಲ್ಲಿ ಮೊದಲೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈಗ ರಸ್ತೆಯಲ್ಲಿ ತ್ಯಾಜ್ಯವನ್ನು ಎಸೆದು ಹೋಗಿರುವುದರಿಂದ ನಾಯಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು. ಪರಸ್ಪರ ಜಗಳ ಮಾಡಿಕೊಂಡು ತ್ಯಾಜ್ಯವನ್ನು ಎಳೆದಾಡಿಕೊಂಡು ರಸ್ತೆಗೆ ತಂದು ಹಾಕುವುದರಿಂದ ಸ್ಥಳದಲ್ಲಿ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ. ಕಾಗೆಗಳ ಜತೆಗೆ ಪಚ್ಚನಾಡಿ ಪ್ರದೇಶದಲ್ಲಿ ಹೆಚ್ಚಾಗಿರುವ ಹದ್ದುಗಳೂ ತ್ಯಾಜ್ಯ ರಾಶಿ ಬಿದ್ದರುವ ಪ್ರದೇಶದಲ್ಲಿ ಕಂಡು ಬರುತ್ತಿವೆ.

ತಡೆಯುವ ನಿಟ್ಟಿನಲ್ಲಿ ಕ್ರಮ
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು ದಂಡನಾರ್ಹ ಅಪರಾಧ. ಪಚ್ಚನಾಡಿಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಿಸಿ ಕೆಮರಾ ಅಳವಡಿಸಿ ಅಥವಾ ಕಾವಲು ನಿಂತು ಎಸೆಯುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
– ಜಯಾನಂದ ಅಂಚನ್‌, ಮೇಯರ್‌

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next