Advertisement

ಹೆದ್ದಾರಿ ಬದಿ ತ್ಯಾಜ್ಯ ಎಸೆತ, ಬೀಳಲಿ ಕಡಿವಾಣ

02:38 PM Jun 07, 2023 | Team Udayavani |

ಕಾರ್ಕಳ: ಹೆದ್ದಾರಿ ಬದಿ ತ್ಯಾಜ್ಯ ಎಸೆಯುವ ಕೃತ್ಯಗಳಿಗೆ ಸದ್ಯ ಕಡಿವಾಣ ಬೀಳುವಂತೆ ಕಾಣುತಿಲ್ಲ. ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹೇರಳ ಪ್ರಮಾಣದಲ್ಲಿ ತ್ಯಾಜ್ಯವನ್ನು ಬಿಸಾಕಿರುವುದು ಈ ಹದ್ದಾರಿಯಲ್ಲಿ ಸಾಗುವಾಗ ಕಣ್ಣಿಗೆ ಗೋಚರಿಸುತ್ತಿದೆ. ಇದು ನಿಯಂತ್ರಣಕ್ಕೆ ಬರುತಿಲ್ಲ. ಪರಿಣಾಮ ಸ್ಥಳೀಯ ಸಂಘ ಸಂಸ್ಥೆಗಳಿಗೆ, ಸ್ಥಳೀಯಾಡಳಿತಕ್ಕೆ ಪರಿಸರ ಸ್ವತ್ಛತೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Advertisement

ಹೆದ್ದಾರಿ ಹಾದು ಹೋಗುವ ವ್ಯಾಪ್ತಿಯ ಗ್ರಾ.ಪಂ.ಗಳು ತನ್ನ ಸ್ವತ್ಛತ ಸಿಬಂದಿಯಿಂದ ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವತ್ಛತ ಕಾರ್ಯವನ್ನು ಮಾಡಿದರೂ, ಮರು ದಿನವೇ ಅದೇ ಜಾಗದಲ್ಲಿ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದಾರೆ. ರಾಜ್ಯ ಹೆದ್ದಾರಿಯ ಬಹುತೇಕ ಭಾಗದಲ್ಲಿ ತ್ಯಾಜ್ಯದ ರಾಶಿಗಳು ನಿತ್ಯವೂ ಕಾಣಲು ಸಿಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳು ಅಲ್ಲಲ್ಲಿ ಗಾಳಿಗೆ ಹಾರಾಡುತ್ತಿದ್ದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಕ್ಕೆ ಬರುವ ವಾಹನದ ಸವಾರರು ಹಾಗೂ ಸರಕು ಸಾಗಾಟ ಮಾಡುವವರು, ಕೆಲವೊಂದು ಸ್ಥಳೀಯರು ಕೂಡ ತ್ಯಾಜ್ಯವನ್ನು ತಂದು ರಸ್ತೆಯ ಬದಿಯಲ್ಲಿ ಸುರಿದು ಹೋಗುತ್ತಾರೆ. ವಾಹನಗಳಲ್ಲಿ ಬಂದು ರಾತ್ರಿಯ ವೇಳೆಯಲ್ಲಿ ಜನ ವಸತಿ ಇಲ್ಲದ ಜಾಗದಲ್ಲಿ ತಂದು ಹೇರಳ ಪ್ರಮಾಣದಲ್ಲಿ ತ್ಯಾಜ್ಯವನ್ನು ಬೀಸಾಡುತ್ತಿದ್ದು ಪರಿಸರ ಹಾಳಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶ.

ಸಾಂತೂರು ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾಗೂ ನೀಚಾಲು ಭಾಗದಲ್ಲಿ ಬೆಳ್ಮಣ್‌ನ ಕೆಲವೊಂದು ಭಾಗದಲ್ಲಿ ನಿಟ್ಟೆ, ಪರಪ್ಪಾಡಿ, ದೂಪದಕಟ್ಟೆ ಪರಿಸರದ ರಸ್ತೆಯ ಬದಿಯಲ್ಲಿ ತ್ಯಾಜ್ಯದ ರಾಶಿಗಳಿವೆ. ತ್ಯಾಜ್ಯ ರಾಶಿಯನ್ನು ಸ್ಥಳೀಯ ಗ್ರಾ.ಪಂ. ಹಲವು ಬಾರಿ ತೆರವು ಮಾಡುವ ಕಾರ್ಯವನ್ನು ಮಾಡಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಸ ಎಸೆಯಬೇಡಿ ಎಂದು ನಾಮಫ‌ಲಕ ಹಾಕಿದರೂ ಅದರ ಬುಡದಲ್ಲೇ ತಂದು ಕಿಡಿಗೇಡಿಗಳು ಕಸದ ರಾಶಿಯನ್ನು ಹಾಕುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಪಕ್ಕದಲ್ಲಿ ಬಿಸಾಡುವ ಪ್ಲಾಸ್ಟಿಕ್‌ ತ್ಯಾಜ್ಯ ರಾಶಿ ವಾಹನಗಳು ಓಡಾಡುವ ಸಂದರ್ಭ ಗಾಳಿಯ ರಭಸಕ್ಕೆ ಪರಿಸರವಿಡೀ ಹಾರಾಡುತ್ತದೆ. ಬೈಕ್‌ ಸವಾರರು ಓಡಾಡುವಾಗ ಪ್ಲಾಸ್ಟಿಕ್‌ ತ್ಯಾಜ್ಯ ವಾಹನದ ಚಕ್ರಕ್ಕೆ ಸಿಲುಕಿಕೊಂಡು ಅಪಾಯಕ್ಕೆ ಸಿಲುಕುವುದು ನಡೆದಿದೆ. ಹಸಿ ಕಸ, ಕೋಳಿ ಮಾಂಸದ ತ್ಯಾಜ್ಯ ಎಲ್ಲವನ್ನೂ ರಸ್ತೆಯ ಪಕ್ಕದಲ್ಲೇ ಬೀಸಾಕುವುದರ ಪರಿಣಾಮ ಪರಿಸರ ಗಬ್ಬೆದ್ದು ನಾರುವಂತಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಕುವ ವಾಹನ ಸವಾರರಿಗೆ, ಕಿಡಿಗೇಡಿಗಳಿಗೆ ದಂಡವನ್ನು ಹಾಗೂ ಸೂಕ್ತ ಕ್ರಮವನ್ನು ಜರಗಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next