Advertisement

ಯುಪಿ ರೈತರ ಸಾಲ ಮನ್ನಾಕ್ಕೆ ಕಾರಣ ಕೊಡಿ

01:00 PM May 07, 2017 | |

ದಾವಣಗೆರೆ: ಉತ್ತರ ಪ್ರದೇಶದ ರೈತರ ಸಾಲ ಮಾತ್ರ ಮನ್ನಾ ಮಾಡಿದ್ದು ಏಕೆ? ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

Advertisement

ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದರಂತೆ ಅಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಸಾಲ ಮನ್ನಾ ಮಾಡಲಾಗಿದೆ. ಅಲ್ಲಿ ಮಾತ್ರ ಯಾಕೆ ಸಾಲ ಮನ್ನಾ ಮಾಡಲಾಗಿದೆ. ನರೇಂದ್ರ ಮೋದಿ ಕೇವಲ ಉತ್ತರ ಪ್ರದೇಶಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಪ್ರಧಾನಿ.

ಉತ್ತರ ದೇಶದಂತೆ ಇತರೆ ಕಡೆ ಸಹ ರೈತರಿದ್ದಾರೆ ಎಂಬುದು ಅವರಿಗೆ ತಿಳಿಯಬೇಕಿದೆ ಎಂದರು. ಅಲ್ಲಿ ಬೆಳೆ ನಷ್ಟವಾಗಿದೆಯಾ? ಕೃಷಿ ಉತ್ಪನ್ನಕ್ಕೆ ಬೆಲೆ ಕಡಿಮೆಯಾಗಿದೆಯಾ? ಎಂಬುದು ನಮಗೆ ತಿಳಿದಿಲ್ಲ. ಅವರಂತೆ ನಮಗೂ ಸವಲತ್ತು ನೀಡದೇ ವಂಚಿಸುವ ಹಿಂದಿರುವ ಉದ್ದೇಶ ಏನು? ಸಾಲ ಮನ್ನಾ ಮಾಡಿದ್ದು ಯಾವ ಉದ್ದೇಶಕ್ಕಾಗಿ ಎಂಬುದನ್ನು ಪ್ರಧಾನಿ ದೇಶಕ್ಕೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು. 

ನಮ್ಮ ರಾಜ್ಯದ ಹಳ್ಳಿಗಾಡಿನ ಹುಡುಗಿಯೊಬ್ಬಳು ಶೌಚಾಲಯದ ಕುರಿತು ಮಾತನಾಡಿದ್ದು, ಮೋದಿಯವರನ್ನು ತಲುಪುತ್ತದೆ. ಮೋದಿಯವರು ತಮ್ಮ ಮನ್‌ ಕಿ ಬಾತ್‌ ಕಾರ್ಯಕ್ರಮದ ಮೂಲಕ ಇಡೀ ದೇಶಕ್ಕೆ ಈ ಕುರಿತು ಪ್ರಸ್ತಾಪ ಮಾಡುತ್ತಾರೆ. ಆದರೆ, ರೈತರ ಭೀಕರ ಸಮಸ್ಯೆ ಇವರಿಗೆ ಅರ್ಥ ಆಗುವುದಿಲ್ಲವೇ.

ದೇಶದಲ್ಲಿ ಇದುವರೆಗೆ 10 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಅವರಿಗೆ ಮಾಹಿತಿ ಸಿಕ್ಕಿಲ್ಲವೇ ಎಂದು ಅವರು ಪ್ರಶ್ನಿಸಿದರು. ಉತ್ತರ ಪ್ರದೇಶದ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹ ಪ್ರಧಾನಿ ಮೋದಿಯವರನ್ನು ಭೇಟಿಮಾಡಿ, ಅಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ್ದರು.

Advertisement

ಆದರೆ, ರಾಜ್ಯದ ರೈತರ ಸ್ಥಿತಿ ಕುರಿತು ಅವರಿಗೆ ಚಿಂತನೆ ಇಲ್ಲ. ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ಸಿಎಂ ಸಿದ್ದರಾಮಯ್ಯನವರಿಗೆ ಸಾಲ ಮನ್ನಾ ಮಾಡಲು ಸೂಚಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸತತ 4 ವರ್ಷದಿಂದ ಬರಗಾಲ ಇದೆ. ಇತ್ತ ಸಿಎಂ ಸಿದ್ದರಾಮಯ್ಯ ಕೇವಲ ಇನ್‌ಪುಟ್‌ ಸಬ್ಸಿಡಿಯ ಮಾತು ಆಡುತ್ತಿದ್ದಾರೆ. 

ಜಿಲ್ಲಾಧಿಕಾರಿಗಳು ಮೇವು-ನೀರು ಒದಗಿಸುತ್ತಾರೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ, ಬರಗಾಲದಿಂದ ರೈತನ ಬದುಕು ಹಸನು ಮಾಡುವುದು ಹೇಗೆ? ಎಂಬುದರ ಕುರಿತು ಮಾತನಾಡುತ್ತಿಲ್ಲ. ಈಗಲಾದರೂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಬೇಕು. ತಕ್ಷಣ ರೈತರ ಸ್ಥಿತಿ ಅರಿತು ಬರ ಪರಿಹಾರಕ್ಕೆ ಸೂಕ್ತ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಬಾರಿ ಸಹ ಕೇಂದ್ರ ಹವಾಮಾನ ಇಲಾಖೆಯ ಮಾಹಿತಿಯಂತೆ ಶೇ.34ರಷ್ಟು ಮುಂಗಾರು ಮಳೆ ಕಡಿಮೆಯಾಗಲಿದೆಯಂತೆ. ಹಾಗಿ ಮುಂದೆ ಎದುರಾಗಬಹುದಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದಿಷ್ಟ ಕಾರ್ಯಕ್ರಮ ರೂಪಿಸಬೇಕು. ಕೇಂದ್ರ ಸರ್ಕಾರ ಕಾರ್ಪೋರೇಟ್‌ ವಲಯಕ್ಕೆ 163 ಲಕ್ಷ ಕೋಟಿ ವಿನಾಯಿತಿ ನೀಡಿದ ಹಾಗೆ ರೈತರಿಗೂ ಏನಾದರೂ ಮಾಡಬೇಕು.

ಸಿಆರ್‌ಎಫ್‌ ಕಾಯ್ದೆ ತಿದ್ದುಪಡಿ ಮಾಡಿ, ಹೆಚ್ಚಿನ ಪರಿಹಾರ ಸಿಗುವಂತೆ ಮಾಡಲು ಕ್ರಮ ವಹಿಸಬೇಕು. ರಾಜ್ಯ ಸರ್ಕಾರ ಸಹ ತನ್ನ ಹಂತದಲ್ಲಿ ವಿಪತ್ತು ನಿರ್ವಹಣಾ ನಿಧಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌. ಆರ್‌. ಬಸವರಾಜಪ್ಪ ಮಾತನಾಡಿ,

ಸಹಕಾರಿ ಬ್ಯಾಂಕ್‌ಗಳಲ್ಲಿರುವ 13 ಸಾವಿರ ಕೋಟಿ ರೂ. ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ 36 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಕಡಿದಾಳ ಶಾಮಣ್ಣ, ನಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next