Advertisement
ಹೌದು, ಕಾನೂನು ತೊಡಕನ್ನೇ ಬಂಡವಾಳ ಮಾಡಿಕೊಂಡು ಕೆಲ ವಸ್ತುಗಳ ಉತ್ಪಾದಕರು, ವರ್ತಕರು ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ದೂರುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂತಹವರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಗೆ ನೀಡಿ ಅಧಿಸೂಚನೆ ಹೊರಡಿಸಿದೆ.
ಯಾವುದೇ ಒಂದು ಪ್ಯಾಕೇಜ್x ಕಮಾಡಿಟಿಗೆ ಉತ್ಪಾದಕರು ನ್ಯಾಯಯುತವಾಗಿ ನಿಗದಿಪಡಿಸುವ ಎಂಆರ್‌ಪಿ ದರದಂತೆ ಎಲ್ಲೆಡೆ ಮಾರಾಟ ಮಾಡಬೇಕು. ಎಲ್ಲ ತೆರಿಗೆ ಒಳಗೊಂಡ ಎಂಆರ್‌ಪಿ ದರಕ್ಕಿಂತ ಹೆಚ್ಚುವರಿಯಾಗಿ ಬಿಡಿಗಾಸು ಪಡೆಯುವುದು ಸಹ ನಿಯಮ ಉಲ್ಲಂಘನೆಯಾಗುತ್ತದೆ. ಇಷ್ಟಾದರೂ ಹಲವೆಡೆ ಹೆಚ್ಚುವರಿ ಹಣ ವಸೂಲಿ ಮಾಡಿ ಗ್ರಾಹಕರನ್ನು ಶೋಷಿಸುತ್ತಿರುವ ಬಗ್ಗೆ ದೂರುಗಳಿವೆ.
Related Articles
Advertisement
ಡುಯೆಲ್ ಎಂಆರ್‌ಪಿಗೆ ಬೀಳಲಿದೆ ಬ್ರೇಕ್!ಎಂಆರ್‌ಪಿ ದರಕ್ಕಿಂತ ಹೆಚ್ಚುವರಿ ಹಣ ಪಡೆದು ವಂಚಿಸುವುದು ಒಂದೆಡೆಯಾದರೆ, ವರ್ತಕರೇ ಅಕ್ರಮವಾಗಿ ಹೆಚ್ಚುವರಿ ಬೆಲೆ ಪಟ್ಟಿಯ ಸ್ಟಿಕ್ಕರ್ ಅಂಟಿಸಿ ವಂಚಿಸುತ್ತಾರೆ. ಪ್ರತಿಷ್ಠಿತ ಮಾಲ್, ಮಲ್ಪಿಪ್ಲೆಕ್ಸ್ ಇತರೆಡೆ ವರ್ತಕರು ಹಾಗೂ ಉತ್ಪಾದಕರು ಶಾಮೀಲಾಗಿ ಅಕ್ರಮವಾಗಿ ಹೆಚ್ಚುವರಿ ಮೊತ್ತಕ್ಕೆ ಎಂಆರ್‌ಪಿ ದರಪಟ್ಟಿಯನ್ನೇ ಮುದ್ರಿಸಿ ವಂಚಿಸುವುದು ನಡೆಯುತ್ತದೆ. ಗ್ರಾಹಕರು ಪ್ರಶ್ನಿಸಿದರೆ ಎಂಆರ್‌ಪಿ ದರವನ್ನಷ್ಟೇ ಪಡೆಯಲಾಗಿದೆ ಎಂಬ ಸಬೂಬು ಹೇಳುವುದನ್ನು ಕಾಣಬಹುದು. ಹೀಗೆ ತಯಾರಕರೇ ನಕಲಿ ಎಂಆರ್‌ಪಿ (ಡುಯೆಲ್ ಎಂಆರ್‌ಪಿ) ಮುದ್ರಿಸಿ ವಂಚಿಸಲಾಗುತ್ತಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದೆ. ಎಂಆರ್‌ಪಿ ದರಪಟ್ಟಿಯಲ್ಲಿ ಅಕ್ರಮ ನಡೆಸುವುದು, ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಬಗ್ಗೆ ದೂರು ಬಂದರೆ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಪರಿಶೀಲನೆ ನಡೆಸುತ್ತಿತ್ತು. ಆದರೆ ಅಕ್ರಮ ದೃಢಪಟ್ಟರೆ ಕ್ರಮ ಜರುಗಿಸಲು ಹೆಚ್ಚಿನ ಕಾನೂನು ಬಲವಿರಲಿಲ್ಲ. ಇದನ್ನು ಅರಿತಿದ್ದ ತಯಾರಕರು, ವರ್ತಕರು ಅವ್ಯಾಹತವಾಗಿ ಅಕ್ರಮದಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ತಿದ್ದುಪಡಿ ಮೂಲಕ ಅಧಿಕಾರ ನೀಡಿಕೆ
ಹೀಗಾಗಿ, ವಾಸ್ತವದ ಎಂಆರ್‌ಪಿಗಿಂತ ಹೆಚ್ಚು ಹಣ ಪಡೆದು ಗ್ರಾಹಕರನ್ನು ವಂಚಿಸುವುದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಸಚಿವಾಲಯವು ಪ್ಯಾಕೇಜ್x ಕಮಾಡಿಟಿ ಕಾಯ್ದೆ 2011ಕ್ಕೆ ತಿದ್ದುಪಡಿ ತಂದಿದೆ. ಡುಯೆಲ್ ಎಂಆರ್‌ಪಿ ಸೇರಿದಂತೆ ಗ್ರಾಹಕರನ್ನು ನಾನಾ ರೀತಿಯಲ್ಲಿ ವಂಚಿಸುವವನ್ನು ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳ ಕಾನೂನು ಮಾಪನಶಾಸ್ತ್ರ ಇಲಾಖೆಗೆ ನೀಡಿ ಜೂ.23ರಂದು ಅಧಿಸೂಚನೆ ಹೊರಡಿಸಿದ್ದು, ಜ.1ರಿಂದ ಜಾರಿಗೆ ಬರಲಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಸರಳಾ ನಾಯರ್ ತಿಳಿಸಿದರು. “ಇ-ಕಾಮರ್ಸ್’ ಮೇಲೂ ನಿಗಾ
ಈಚಿನ ವರ್ಷಗಳಲ್ಲಿ “ಇ-ಕಾಮರ್ಸ್’ ವ್ಯವಹಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ವಹಿವಾಟಿನ ವೇಳೆ ವಸ್ತುಗಳನ್ನು ಎಂಆರ್‌ಪಿ ದರದಂತೆ ಮಾರಾಟ ಮಾಡಲಾಗುತ್ತಿದೆಯೇ, ವಸ್ತುವಿನ ತೂಕ, ಅಳತೆ ನಿಗದಿತ ಪ್ರಮಾಣದಲ್ಲಿದೆಯೇ ಎಂಬ ಬಗ್ಗೆ ನಿಗಾ ವಹಿಸುವ ಅಧಿಕಾರವನ್ನೂ ಕೇಂದ್ರ ಸರ್ಕಾರ ಕಾನೂನು ಮಾಪನಶಾಸ್ತ್ರ ಇಲಾಖೆಗೆ ನೀಡಿದೆ. ಇದರಡಿ ಇ-ಕಾಮರ್ಸ್ ಸಂಸ್ಥೆಗಳ ಎಂಆರ್‌ಪಿ ಮೇಲೆ ನಿಖರತೆ ಬರಲಿದೆ. 20ಕ್ಕೂ ಹೆಚ್ಚು ವಂಚನೆ ಪ್ರಕರಣ
ಮಲ್ಟಿಪ್ಲೆಕ್ಸ್‌ಗಳಲ್ಲಿ ಕುಡಿಯುವ ನೀರು, ತಂಪು ಪಾನೀಯಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಸಚಿವ ಯು.ಟಿ.ಖಾದರ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಹೆಚ್ಚಿನ ಕಾನೂನು ಬಲವಿಲ್ಲದ ಕಾರಣ ಪರಿಣಾಮಕಾರಿಯಾಗಿ ಕ್ರಮ ಜರುಗಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ ಅಕ್ರಮವಾಗಿ ಹೆಚ್ಚಿನ ಹಣ ವಸೂಲಿ ಆರೋಪ ಸಂಬಂಧ ಸಲ್ಲಿಕೆಯಾದ 20ಕ್ಕೂ ಹೆಚ್ಚು ಪ್ರಕರಣಗಳನ್ನು ಕಾನೂನು ಮಾಪನಶಾಸ್ತ್ರ ಇಲಾಖೆಯು ಗ್ರಾಹಕರ ವೇದಿಕೆಗೆ ವರ್ಗಾಯಿಸಿದ್ದು, ವಿಚಾರಣೆ ಹಂತದಲ್ಲಿವೆ. ಸಿದ್ಧತೆ ಮಾಡಿಕೊಳ್ಳಬೇಕು”ಇ-ಕಾಮರ್ಸ್’ನಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ವಸ್ತುಗಳ ಎಂಆರ್‌ಪಿ ಹಾಗೂ ಪ್ರಮುಖ ಘೋಷಣೆಗಳನ್ನು ಕಡ್ಡಾಯವಾಗಿ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವುದನ್ನು ಜ.1ರಿಂದ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ “ಇ-ಕಾಮರ್ಸ್’ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.
-ಪಿ.ಆರ್.ಶಿವಪ್ರಸಾದ್, ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ – ಎಂ.ಕೀರ್ತಿಪ್ರಸಾದ್