ಹುಮನಾಬಾದ: ಅದೆಷ್ಟೋ ಸಮಿತಿಗಳು ಆರಂಭಿಕ ಶೂರತನ ಎಂಬಂತೆ ಅಸ್ತಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕಾಣೆಯಾಗುತ್ತವೆ. ಆದರೆ ಹಳೆ ಅಡತ್ ಬಜಾರ ಗಣೇಶ ಸಮಿತಿಯ ಐದು ದಶಕಗಳ ಯಶಸ್ಸಿಗೆ ಸಮಿತಿ ಪದಾಧಿಕಾರಿಗಳ ಒಕ್ಕಟ್ಟು ಕಾರಣವಾಗಿದೆ ಎಂದು ಗಣಿ, ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಹೇಳಿದರು.
1969ರಲ್ಲಿ 12ರ ಬಾಲಕರಾಗಿದ್ದಾಗ ಆರಂಭಿಸಿ 2018ರ ವರೆಗೆ (50 ವರ್ಷ) ಮುನ್ನಡೆಸಿಕೊಂಡು ಬಂದಿರುವುದು ಅಸಾಮಾನ್ಯ ಸಾಧನೆ. ಯಾರೊಬ್ಬರಿಂದಲೂ ಬಿಡಿ ಕಾಸು ನಿರೀಕ್ಷಿಸದೇ ಸಮಿತಿ ಪದಾಧಿ ಕಾರಿಗಳೆ ಸ್ವಂತ ಬಲದ ಉತ್ಸವ ನಿರ್ವಹಿಸುತ್ತಿರುವ ಜಿಲ್ಲೆಯ ಏಕೈಕ ಗಣೇಶ ಸಮಿತಿ ಹಳೆ ಅಡತ್ ಬಜಾರ ಸಮಿತಿ ಎಂದರೆ ಅತಿಶಯೋಕ್ತಿಯಾಗದು ಎಂದರು.
ಉತ್ಸವದ ಬೆಳ್ಳಿಹಬ್ಬವನ್ನು ತಂದೆ ಮಾಜಿ ಸಚಿವ ಬಸವರಾಜ ಪಾಟೀಲ ಅವರು ಉದ್ಘಾಟಿಸಿದರೆ, ಸುವರ್ಣಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವ ಯೋಗ ನನಗೆ ಲಭಿಸಿದ್ದು ಪುಣ್ಯ. ಪಾಟೀಲ ಪರಿವಾರದ ಜನಸ್ನೇಹಿ ಕಾರ್ಯ ಮೆಚ್ಚಿ ಜನ ಕೈ ಹಿಡಿಯುತ್ತಿರುವ ಏಕೈಕ ಕಾರಣ ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯವಾಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಆರ್‌ಐಡಿಎಲ್ ಚೇರಮನ್ ಹುದ್ದೆ ಲಭಿಸಿತ್ತು. ಈ ಬಾರಿ ಗಣಿ, ಭೂವಿಜ್ಞಾನ ಜೊತೆಗೆ ಮುಜರಾಯಿ ಖಾತೆ ಲಭಿಸಿದೆ. ಅಭಿವೃದ್ಧಿ ಮೂಲಕ ಜನರ ಋಣ ತೀರಿಸುವ ಶಕ್ತಿ ದಯಪಾಲಿಸುವಂತೆ ಮೈಸೂರಿನ ತಾಯಿ ಚಾಮುಂಡಿ, ಇಲ್ಲಿನ ವೀರಭದ್ರೇಶ್ವರರಲ್ಲಿ ಪ್ರಾರ್ಥಿಸಿದ್ದಾಗಿ ಹೇಳಿದರು.
ರಾಜ್ಯಸಭೆ ಮಾಜಿ ಸದಸ್ಯ, ವಿಕಾಸ ಅಕಾಡೆಮಿ ಸಂಸ್ಥಾಪಕ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಒಬ್ಬರು ಇನ್ನೊಬ್ಬರಿಂದ ಹಣ ಸುಲಿಗೆ ಮಾಡುವುದು ವಿದೇಶಿ ಸಂಸ್ಕೃತಿಯಾದರೇ, ಎಲ್ಲರೂ ನನ್ನವರೆಂದು ನೆರವಾಗುವುದು ಭಾರತೀಯ ಸಂಸ್ಕೃತಿ. ಮಾನಸಿಕ ನೆಮ್ಮದಿ ಸಿಗುವುದು ಹಣ ಮತ್ತು ಅಧಿಕಾರದಿಂದಲ್ಲ, ಆಧ್ಯಾತ್ಮ ಮತ್ತು ಪರೋಪಕಾರ ಮನೋಭಾವನೆಯಿಂದ. ಕಾರಣ ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಬಾಳಿ ಬದುಕಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಮಾತನಾಡಿ, ಪಂಚಧಾತು ಗಣೇಶ ಪ್ರತಿಮೆ ಪ್ರತಿಷ್ಠಾಪಿಸಿದ್ದು ಪ್ರಶಂಸನೀಯ. ಸಮಿತಿ ಪದಾಧಿಕಾರಿಗಳ ಬೇಡಿಕೆ ಗಂಭೀರವಾಗಿ ಪರಿಗಣಿಸಿ, ಅಗತ್ಯ ನಿವೇಶನ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ ರಘೋಜಿ ಮಾತನಾಡಿ, ಹಿರಿಯರಾದ ಬಸವರಾಜ ಪಾಟೀಲ ಸೇಡಂ ಅವರ ಆಶಯದಂತೆ ಸಮಿತಿಯು ಜನೋಪಯೋಗಿ ಕೆಲಸಗಳನ್ನೇ ಮಾಡುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಜನಪರ ಕಾರ್ಯ ಕೈಗೊಳ್ಳಲು ಯತ್ನಿಸಲಾಗುವುದು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶ್ರೀ ರೇಣುಕ ಗಂಗಾಧರ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ವಜ್ರ ಮಹೋತ್ಸವ, ಶತಮಾನೋತ್ಸವ ಆಚರಿಸುವ ಯೋಗ ಕೂಡಿ ಬರಲಿ ಎಂದು ಹಾರೈಸಿದರು. ಕೆಎಂಎಫ್ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ, ಎಪಿಎಂಸಿ ಅಧ್ಯಕ್ಷ ಡಾ| ಭದ್ರೇಶ ಎಸ್.ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಾ| ಸಿದ್ದಲಿಂಗಪ್ಪ ಪಾಟೀಲ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಡಾ| ಶಶಿಕಾಂತ ಹಾರಕೂಡ್ ಇದ್ದರು.
ರಾಜೆಶ್ರೀ ಜಾಜಿ, ಮಹಾನಂದಾ ಮಾಡಗಿ ಪ್ರಾರ್ಥಿಸಿದರು. ಸುಭಾಷ ಭಗೋಜಿ ಸ್ವಾಗತಿಸಿದರು. ಕಾರ್ಯದರ್ಶಿ ಡಿ.ಆರ್. ಚಿದ್ರಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಪ್ರೇಮ ಜಾಜಿ 50 ವರ್ಷಗಳ ಸಾಧನೆ ಕುರಿತು ವರದಿ ವಾಚನ
ಮಾಡಿದರು. ಸಾರಿಕಾ ಗಂಗಾ ನಿರೂಪಿಸಿದರು. ಸಮಿತಿ ಉಪಾಧ್ಯಕ್ಷ ಚಂದ್ರಕಾಂತ ಶಂಕರಶಟ್ಟಿ ವಂದಿಸಿದರು.