Advertisement
ಬುಧವಾರ ಮಧ್ಯಾಹ್ನ 19 ಮೀ. ಇದ್ದ ನೀರಿನ ಮಟ್ಟ ಸಂಜೆಯಾಗುತ್ತಲೇ 18 ಮೀ.ಗೆ ಇಳಿದಿತ್ತು. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾತ್ರಿಯಾಗುತ್ತಲೇ ಉಭಯ ನದಿಗಳಲ್ಲಿ ನೀರಿನ ಹರಿವು ಹೆಚ್ಚತೊಡಗಿದ್ದು, ಮುಂಜಾನೆ 5:45ಕ್ಕೆ 21 ಮೀ. ತಲುಪಿತ್ತು. ಬೆಳಗ್ಗೆ ನದಿ ನೀರಿನ ಮಟ್ಟ 23 ಮೀ.ಗೆ ಏರಿಕೆಯಾಗಿದ್ದು, ನೀರು ಹೆಚ್ಚಳವಾಗುತ್ತ ನೆರೆ ಭೀತಿ ಕಾಣಿಸಿಕೊಂಡಿತ್ತು. ಪೂರ್ವಾಹ್ನ 11 ಗಂಟೆ ಬಳಿಕ ಮಳೆ ಕೊಂಚ ಬಿಡುವು ಪಡೆದುಕೊಂಡಿದ್ದು, ನೀರಿನ ಪ್ರಮಾಣವೂ ಇಳಿದಿದೆ. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಿಂದ ನದಿಗಿಳಿಯಲು ಮಾಡಿದ್ದ 40 ಮೆಟ್ಟಿಲುಗಳಲ್ಲಿ ಬೆಳಗ್ಗೆ 30 ಮುಳುಗಿದ್ದರೆ, ಮಧ್ಯಾಹ್ನದ ಬಳಿಕ 29 ಮೆಟ್ಟಿಲು ಮುಳುಗಿದ್ದವು.
ಗುರುವಾರ ಬೆಳಗ್ಗೆ ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳ ನೀರ ಹರಿವು ರಭಸದಿಂದ ಕೂಡಿದ್ದು, ಇದರಿಂದ ದೇವಾಲಯದ ಬಳಿಯ ಸಂಗಮ ತಾಣದಲ್ಲಿ ನೇರ ಹಾದಿಯಲ್ಲಿ ಹರಿದು ಬರುವ ನೇತ್ರಾವತಿ ನದಿ ನೀರಿನ ರಭಸದ ಹರಿಯುವಿಕೆಯಿಂದ ಇನ್ನೊಂದು ದಿಕ್ಕಿನಿಂದ ಹರಿದು ಬಂದು ನೇತ್ರಾವತಿಯೊಂದಿಗೆ ಸಂಗಮಗೊಳ್ಳುವ ಕುಮಾರಧಾರ ನೀರಿನ ಹರಿಯುವಿಕೆಗೆ ತಡೆಯಾಗಿತ್ತು. ಆದ್ದರಿಂದ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿತ್ತು. ದೇವಾಲಯದ ಬಳಿ ಗೃಹ ರಕ್ಷಕದಳದ ಘಟಕಾಧಿಕಾರಿ ದಿನೇಶ್ ಅವರ ನೇತೃತ್ವದ ವಿಪತ್ತು ನಿರ್ವಹಣ ಪಡೆಯವರು, ಗ್ರಾಮ ಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕ ಯತೀಶ್, ಉಪ್ಪಿನಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ನೇತೃತ್ವದ ಪೊಲೀಸರ ತಂಡ, ದೋಣಿ ಮುನ್ನಡೆಸುವ ಚೆನ್ನಪ್ಪ, ಈಜುಗಾರರಾದ ಮುಹಮ್ಮದ್ ಬಂದಾರು ಹಾಗೂ ಇಸ್ಮಾಯಿಲ್ ಹಾಜಿ ಮತ್ತು ಪೊಲೀಸ್ ಸಿಬಂದಿ ಬೀಡು ಬಿಟ್ಟಿದ್ದರು.