ಧಾರವಾಡ: ವನಮಹೋತ್ಸವ ಸೇರಿದಂತೆ ಪ್ರತಿವರ್ಷ ಮಳೆಗಾಲಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿ ನೆಟ್ಟರೂ, ಹಸಿರು ಹೊನ್ನು ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಇತ್ತ ಸರ್ಕಾರದಿಂದ ಸಸಿ ನೆಡಲು ಇಟ್ಟ ಖಜಾನೆಯೂ ಖಾಲಿಯಾಗುತ್ತಿದೆ. ಅತ್ತ ಸಸಿಗಳು ನೆಟ್ಟ ನಾಲ್ಕು ತಿಂಗಳಲ್ಲಿ ಸತ್ತು ಹೋಗುತ್ತಿವೆ. ಹಾಗಿದ್ದರೆ ನೆಟ್ಟ ಸಸಿಗಳು ಎಲ್ಲಿ? ಇದ್ದ ಸಸಿಗಳ ಕಾಳಜಿ ಯಾರಿದ್ದು? ಇಂತಹ ಹತ್ತಾರು ಪ್ರಶ್ನೆಯನ್ನು ವನಮಹೋತ್ಸವ ಮತ್ತು ಸರ್ಕಾರದ ಸಸಿ ನೆಡುವ ವಿವಿಧ ಯೋಜನೆಗಳು ಹುಟ್ಟುಹಾಕುತ್ತಿವೆ. ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷದಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಸಸಿ ನೆಟ್ಟಿರುವುದಕ್ಕೆ ಖಾತೆ ಪುಸ್ತಕದಲ್ಲಿ ಲೆಕ್ಕವಿದೆ. ಆದರೆ ರಸ್ತೆಬದಿ, ಸಾರ್ವಜನಿಕ ಸ್ಥಳಗಳು, ರೈತರ ಹೊಲಗಳು, ಉದ್ಯಾನವನಗಳು ಮತ್ತು ಶಾಲೆ ಆವರಣಗಳಲ್ಲಿ ಮಾತ್ರ ಇನ್ನೂ ಹಸಿರು ಸರಿಯಾಗಿ ಕಾಣಿಸುತ್ತಿಲ್ಲ. ಯಾಕೆ ಅಂತೀರಾ? ನೆಟ್ಟ ನೂರು ಸಸಿಗಳಲ್ಲಿ ಬದುಕುಳಿಯುತ್ತಿರುವುದು ಬರೀ ಆರು ಮಾತ್ರವಂತೆ. ಇದು ಪರಿಸರ ತಜ್ಞರು ಹೇಳುತ್ತಿರುವ ಲೆಕ್ಕ. ಆದರೆ ಅರಣ್ಯ ಇಲಾಖೆ ಮಾತ್ರ ನೆಟ್ಟ ನೂರು ಸಸಿಗಳಲ್ಲಿ ಶೇ.70 ಸಸಿಗಳು ಬದುಕುತ್ತಿವೆ ಎನ್ನುವ ಲೆಕ್ಕ ಕೊಡುತ್ತಿದೆ. ಹಾಗಿದ್ದರೆ ಧಾರವಾಡ ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಸೂರ್ಯನ ಕಿರಣಗಳೇ ನೆಲಕ್ಕೆ ಬೀಳದಷ್ಟು ದಟ್ಟಕಾಡು ಬೆಳೆದು ನಿಲ್ಲಬೇಕಿತ್ತು. ನೆಟ್ಟ ಕೋಟಿ ಗಿಡಗಳು ಎಲ್ಲಿ ಹೋದವು? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇದೇ ಕಟುಸತ್ಯ!:
1990ರಿಂದ 2010ರ ವರೆಗೆ ಅಂದರೆ 20 ವರ್ಷಗಳಲ್ಲಿ ಜಿಲ್ಲೇಯ ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾ ಪರಿಷತ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿಯೇ ನರ್ಸರಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿ ಬೆಳೆಸಿದ್ದಾಗಿ ಸರ್ಕಾರಕ್ಕೆ ಲೆಕ್ಕ ಕೊಟ್ಟಿವೆ. ಅಂದಿನಿಂದ ಈ ವರೆಗೂ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಬರೊಬ್ಬರಿ ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿರುವುದಾಗಿ ಹೇಳಲಾಗುತ್ತಿದ್ದು, ಆದರೆ ಅವುಗಳಲ್ಲಿ ಬದುಕಿ ಉಳಿದಿದ್ದು ಬರೀ ಎರಡುಮೂರು ಲಕ್ಷ ಸಸಿಗಳು ಮಾತ್ರ ಎಂಬುದು ಕಟುಸತ್ಯ.
‘ತೋಪೆ’ದ್ದು ಹೋದ ಮಣ್ಣಿನ ಸತ್ವ:
25 ವರ್ಷಗಳ ಹಿಂದೆ ಜಿಲ್ಲೆಯ 6 ಸಾವಿರ ಎಕರೆಗೂ ಅಧಿಕ ಪ್ರದೇಶದ ಅರಣ್ಯ, ಪಾಳುಭೂಮಿ ಎಲ್ಲೆಂದರಲ್ಲಿ ನೆಟ್ಟ ನೀಲಗಿರಿ ತೋಪುಗಳು ಇಂದು ಬಂಜರಾಗಿವೆ. ಅಲ್ಲಿ ಬರೀ ಕಾಂಗ್ರೆಸ್ ಕಸ ಮತ್ತು ಯುಪಟೋರಿಯಂ ನರ್ತಿಸುತ್ತಿದೆ. ಸಮೃದ್ಧ ಹುಲ್ಲುಗಾವಲುಗಳಾಗಿ, ದೇಶಿ ಗಿಡಗಳು ಮತ್ತು ಔಷಧಿ ಸಸ್ಯಗಳ ತಾಣಗಳಾಗಿದ್ದ ಕಂದಾಯ ಇಲಾಖೆ ಗೋಮಾಳಗಳು ಇದೀಗ ನೀಲಗಿರಿಯಿಂದ ಕೃಷವಾಗಿ ಹೋಗಿವೆ. ಇನ್ನೊಂದೆಡೆ ಇದ್ದ ಸಸಿಗಳನ್ನು ಸರಿಯಾಗಿ ಉಳಿಸಿಕೊಳ್ಳುವ ಕಾಳಜಿಯೂ ಇಲ್ಲದಂತಾಗಿದೆ. ಸರ್ಕಾರದ ಬಿಲ್ ಪಾವತಿಗೆ ನೆಟ್ಟ ಗಿಡಗಳ ಆಯಸ್ಸು ಬರೀ ಏಳೆಂಟು ವರ್ಷಗಳು. ಹೀಗಿದ್ದರೆ ಹಸಿರು ಹೆಚ್ಚುವುದು ಯಾವಾಗ? ಪರಿಸರ ಉಳಿಸುವುದು ಹೇಗೆ?
ಫಲ ನೀಡದ ಬೀಜದ ಉಂಡೆ:
ಬೀಜದ ಉಂಡೆಯ ರೂಪದಲ್ಲಿಯೇ ಲಕ್ಷಕ್ಕೂ ಅಧಿಕ ಸಸಿಗಳು ಹುಟ್ಟುವ ಲೆಕ್ಕಾಚಾರವಿತ್ತು. ಸತತ ಮೂರು ವರ್ಷಗಳ ವರೆಗೂ ಅಲ್ಲಲ್ಲಿ ಅರಣ್ಯ ಇಲಾಖೆ ಬೀಜದ ಉಂಡೆ ರೂಪದಲ್ಲಿ ಸಸಿಗಳನ್ನು ಹುಟ್ಟಿಸುವ ಪ್ರಯತ್ನ ಮಾಡಿದೆ. ಆದರೆ ಬೀಜದುಂಡೆಯಿಂದ ಮೊಳಕೆಯೊಡೆದು ಮೂರು ವರ್ಷದ ಸಸಿಯಾಗುವಷ್ಟು ಹೊತ್ತಿಗೆ ಶೇ.10 ರಷ್ಟು ಮಾತ್ರ ಬದುಕಿರುತ್ತವೆ ಎನ್ನುತ್ತಾರೆ ಪರಿಸರ ತಜ್ಞರು. ಈ ಕಾರ್ಯಕ್ಕೆ ಧಾರವಾಡದ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೂಡ ಕೈ ಜೋಡಿಸಿದ್ದು, ಚೆಳ್ಳೆಕಾಯಿ, ಹುಣಸೆ,ನೇರಳೆ ಗಿಡಗಳನ್ನು ಕೆಲಕೇರಿ ಕೆರೆ, ಬಣದೂರು, ಹಳ್ಳಿಗೇರಿ, ಗಬ್ಬೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿನ ಪಾಳು ಭೂಮಿಯಲ್ಲಿ ಹಾಕಲಾಗಿದೆ.
ಸಸಿ ಸಾಯಲು ಕಾರಣ?:
Advertisement
- ಸತತ ನಾಲ್ಕು ವರ್ಷಗಳಿಂದ ಬರಗಾಲ
- ಬೇಸಿಗೆಯಲ್ಲಿ ಗಿಡಕ್ಕೆ ನೀರಿನ ಪೂರೈಕೆ ಕೊರತೆ
- ಗಿಡ ನೆಡುವಾಗಿನ ಆಸಕ್ತಿ ಬೆಳೆಸಲು ಇಲ್ಲದಿರುವುದು
- ಸಸಿ ನೆಟ್ಟ ಶಾಲಾ ಆವರಣಗಳು ಪಾಳು ಬಿದ್ದಿರುವುದು
- ಸಸಿ ನೆಟ್ಟು ಬೆಳೆಸಬೇಕು ಎನ್ನುವ ಪರಿಸರ ಕಾಳಜಿ ಕೊರತೆ
- ನೆಟ್ಟ ಗಿಡಗಳ ನಿರ್ವಹಣೆಗೆ ಸಿಬ್ಬಂದಿ ಇಲ್ಲದಿರುವುದು
Related Articles
Advertisement