ತಾಂಬಾ: ಜಿಲ್ಲೆಯ ಬಹುತೇಕ ಜಮೀನು ದ್ರಾಕ್ಷಿ ಪಡಗಳಿಂದ ತುಂಬಿಕೊಂಡಿದ್ದು ಸದ್ಯ ದ್ರಾಕ್ಷಿ ಕಟಾವು ಮಾಡಿ ಒಣ ದ್ರಾಕ್ಷಿ ಮಾಡಲು ಕೆಲವು ದಿನಗಳ ಕಾಲ ರ್ಯಾಕ್ ನಲ್ಲಿ ಒಣ ಹಾಕಲಾಗಿದೆ. ಅಕಾಲಿಕ ಮಳೆ ರೈತರಿಗೆ ಆತಂಕವನ್ನುಂಟು ಮಾಡಿದೆ.
ಮೋಡ ಮುಸುಕಿದ ವಾತವರಣ ಇದ್ದು ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುತ್ತಿರುವುದರಿಂದ ರ್ಯಾಕ್ ನಲ್ಲಿ ಒಣ ಹಾಕಿದ ದ್ರಾಕ್ಷಿಗೆ ಹಾನಿ ಉಂಟಾಗಲಿದೆ. ಮೋಡ ಮುಸುಕಿದ ವಾತವರಣ ಮಳೆಯಾದರೆ ಒಣ ದ್ರಾಕ್ಷಿ ಕಪ್ಪು ಬಣ್ಣಕ್ಕೆ ತಿರುಗಿ ದರ ಕಡಿಮೆಯಾಗಲಿದೆ.
ಪ್ರತಿ ವರ್ಷ ದ್ರಾಕ್ಷಿ ಬೆಳೆಗಾರರು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೆ ಇದ್ದಾರೆ. ಎರಡು ವರ್ಷಗಳ ಹಿಂದೆ ನೀರಿಲ್ಲದೆ ಕಾರಣ ಟ್ಯಾಂಕರ್ ಮೂಲಕ ನೀರು ಹಾಕಿಸಿ ಲಕ್ಷಗಟ್ಟಲೇ ಹಣ ವ್ಯಯ ಮಾಡಿ ದ್ರಾಕ್ಷಿ ಬೆಳೆದರು. ಆದರೆ ಕೊರೊನಾ ಕಾರಣದಿಂದ ಸೂಕ್ತ ಮಾರುಕಟ್ಟೆ ದರ ಸಿಗದೆ ನಷ್ಟ ಅನುಭವಿಸಿದರು. ಈ ವರ್ಷ ಮಳೆ ಆತಂಕ ತಂದಿದೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು ರ್ಯಾಕ್ ಭರ್ತಿಯಾಗಿತ್ತು. ಒಳ್ಳೆ ಗುಣಮಟ್ಟದ ಒಣ ದ್ರಾಕ್ಷಿ ತಯಾರಾಗುವ ನಿರೀಕ್ಷೆಯಿತ್ತು. ಆದರೆ ಈ ಮಳೆ ಭಯ ಹುಟ್ಟಿಸುತ್ತಿದೆ. ಇದರಿಂದ ರಕ್ಷಣೆ ಮಾಡಲು ತಾಡಪತ್ರಿ ಹೊದಿಸಿದ್ದೇವೆ ಎಂದು ತಾಂಬಾ ಗ್ರಾಮದ ರೈತ ಬೀರಪ್ಪ ವಗ್ಗಿ ಹೇಳಿದರು.
ವಿಮೆ ನೀಡಲು ಒತ್ತಾಯ: ಈ ವರ್ಷ ರೈತರು ಹವಾಮಾನ ಆಧಾರಿತ ವಿಮೆ ತುಂಬಿದ್ದಾರೆ. ಏ. 30ರ ವರೆಗೂ ಆ ವಿಮೆ ಅವಧಿ ಅನ್ವಯ ಇರುವುದರಿಂದ ಈಗಾಗಲೆ ವಿಮಾ ಕಂತನ್ನು ಪಾವತಿಸಿದ ರೈತರಿಗೆ ಶೀಘ್ರವೇ ಇಲಾಖೆ ರ್ಯಾಕ್ ನಲ್ಲಿರಯವ ಒಣ ದ್ರಾಕ್ಷಿ ಸರ್ವೇ ಮಾಡಿ ಮಳೆಯಿಂದ ತೊಯ್ದ ಹಾನಿ ಅನುಭವಿಸಿದ ರೈತರಿಗೆ ವಿಮೆ ಸಿಗುವಂತೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಆಗ್ರಹಿಸಿದರು.