ಬೆಂಗಳೂರು: ಬೇಸಿಗೆ ಬಿಸಿ ನಗರಕ್ಕೆ ಮುಂಚಿತವಾಗಿಯೇ ತಟ್ಟಲು ಶುರುವಾಗಿದ್ದು, ಈಗಾಗಲೇ ಒಂದೊಂದಾಗಿ ಕೊಳವೆಬಾವಿಗಳು ಬತ್ತಲು ಆರಂಭಿಸಿವೆ. ಜಲ ಮಂಡಳಿ ವ್ಯಾಪ್ತಿ ಸೇರಿ ನಗರದ ಶೇ.5ರಿಂದ 10ರಷ್ಟು ಕೊಳವೆಬಾವಿಗಳ ಈಗಾಗಲೇ ಬತ್ತಿದ್ದು, ಉಳಿದವುಗಳಲ್ಲಿ ನೀರಿನ ಪ್ರಮಾಣವೂ ಕುಸಿಯುತ್ತಿದೆ.
ಪರಿಣಾಮ ಟ್ಯಾಂಕರ್ ನೀರಿನ ಪೂರೈಕೆಯಲ್ಲೂ ಕುಸಿತ ಕಂಡುಬಂದಿದ್ದು, ಕಾವೇರಿ ಸಂಪರ್ಕ ಇರುವ ಪ್ರದೇಶಗಳೂ ಸೇರಿ ಹಲವೆಡೆ ನೀರಿನ ಹಾಹಾಕಾರ ಕೇಳಿಬರುತ್ತಿದೆ. ಈಚೆಗೆ ಮಹದೇವಪುರ ವಲಯದಲ್ಲಿ ನಡೆದ ವಾರ್ಡ್ ಕಮಿಟಿಯಲ್ಲಿ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಬಹಿರಂಗವಾಗೇ ಅಳಲು ತೋಡಿಕೊಂಡರು. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅತ್ತ ಕಾವೇರಿ ನೀರಿನ ಪೂರೈಕೆಯೂ ಕಡಿಮೆ ಆಗಿದೆ.
ಇತ್ತ ಹಣ ಕೊಟ್ಟರೂ ಸಮರ್ಪಕವಾಗಿ ಟ್ಯಾಂಕರ್ ನೀರು ಸಿಗುತ್ತಿಲ್ಲ. ಬೇಸಿಗೆಗೂ ಮೊದಲೇ ಹೀಗಾದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. “ವೈಟ್‌ಫೀಲ್ಡ್ ರೈಸಿಂಗ್’ ಈಚೆಗೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ನಿವಾಸಿಗಳಿಂದ ನೀರಿನ ಲಭ್ಯತೆ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದು, ಅದರಲ್ಲಿ “ಅಗತ್ಯಕ್ಕಿಂತ ಅರ್ಧದಷ್ಟು ನೀರು ಮಾತ್ರ ಪೂರೈಕೆ ಆಗುತ್ತಿದೆ’ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಹೂಳೆತ್ತಲು ಒತ್ತಾಯ: ಈ ಮಧ್ಯೆ ವರ್ತೂರು ಕೆರೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕೆರೆ ನೀರು ಬಹುತೇಕ ದಕ್ಷಿಣ ಭಾಗದಲ್ಲೇ ಹರಿಯುತ್ತಿದೆ. ಇದರಿಂದ ಉತ್ತರದಲ್ಲಿನ ಕೊಳವೆಬಾವಿಗಳು ಬರಿದಾಗುತ್ತಿವೆ. ಆದ್ದರಿಂದ ತ್ವರಿತವಾಗಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ ಎಂದು ವೈಟ್‌ಫೀಲ್ಡ್ ರೈಸಿಂಗ್‌ನ ಇಳಂಗೋವನ್ ತಿಳಿಸಿದರು.
ಟ್ಯಾಂಕರ್ ಮಾಲಿಕರು ನೆಲಮಂಗಲ, ಕೆಂಗೇರಿ, ಹೊಸಕೋಟೆ ಹಾಗೂ ಹೊರವಲಯದ ನಿವಾಸಿಗಳು ಬೋರ್‌ವೆಲ್‌ಗಳನ್ನೇ ಅವಲಂಬಿಸಿದ್ದಾರೆ. ಪಾಲಿಕೆಗೆ ಈಚೆಗೆ ಸೇರ್ಪಡೆಗೊಂಡ 110 ಹಳ್ಳಿಗಳು ಸೇರಿದಂತೆ ಕಾವೇರಿ ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಕೊಳವೆಬಾವಿಗಳ ಮೇಲೆ ಬೇಸಿಗೆಯಲ್ಲಿ ಒತ್ತಡ ಬೀಳುತ್ತದೆ.
ಇದರಿಂದ ಅಂತರ್ಜಲ ಕಡಿಮೆಯಾಗಿ ಬೋರ್‌ಗಳು ಬತ್ತುತ್ತಿವೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ನಗರದಲ್ಲಿ ಅಂದಾಜು ಎರಡೂವರೆ ಲಕ್ಷ ಕೊಳವೆಬಾವಿಗಳಿದ್ದು, ನೀರು 500ರಿಂದ 1,000 ಅಡಿ ಆಳದಲ್ಲಿದೆ ಎನ್ನಲಾಗಿದೆ. ಕೆರೆ-ಕುಂಟೆಗಳಿರುವ ಭಾಗಗಳಲ್ಲಿ ಅಂತರ್ಜಲ ಮಟ್ಟ ತುಸು ಮೇಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.