Advertisement

ಖ್ಯಾತ ಕವಯತ್ರಿ ಡಾ.ವಿಜಯಾ ದಬ್ಬೆ ನಿಧನ

07:30 AM Feb 24, 2018 | |

ಮೈಸೂರು: ಖ್ಯಾತ ಕವಯತ್ರಿ, ಬರಹಗಾರ್ತಿ ಡಾ. ವಿಜಯಾ ದಬ್ಬೆ (66) ಶುಕ್ರವಾರ ನಿಧನರಾದರು. ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಸಹೋದರಿಯ ನಿವಾಸದಲ್ಲಿ ಸಂಜೆ 6 ಗಂಟೆ ವೇಳೆಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವಿಜಯನಗರದ ಸಹೋದರಿಯ ಮನೆಯಲ್ಲೇ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ, ಅತ್ತಿಮಬ್ಬೆ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು, ಕಾವ್ಯ, ಕಾದಂಬರಿ, ವಿಮರ್ಶೆ, ಅಧ್ಯಯನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುವುದರ ಜತೆಗೆ ಸಮಾಜಸೇವಾ ಕಾರ್ಯಗಳಲ್ಲೂ 
ತೊಡಗಿಸಿಕೊಂಡಿದ್ದರು.

Advertisement

ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ 1951ರ ಜೂನ್‌ 1 ರಂದು ಜನಿಸಿದ ವಿಜಯಾ ದಬ್ಬೆ, ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ಎಂಬ ಅಗ್ಗಳಿಕೆ ಪಡೆದಿದ್ದರು. 12ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 60ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿರುವ ವಿಜಯಾ ಅವರ ಮೊದಲ ಕೃತಿ “ಇರುತ್ತವೆ” ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ. ಮೈಸೂರು ವಿವಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದ್ದ ಇವರು, ಪುಸ್ತಕ ಪ್ರಕಟಣೆ ಜತೆಗೆ ಸಾಹಿತ್ಯ ಪತ್ರಿಕೆಯ ಸಂಪಾದಕಿ ಸಹ ಆಗಿದ್ದರು. ಕರ್ನಾಟಕ ಸರ್ಕಾರದ “ಅತ್ತಿಮಬ್ಬೆ ಪ್ರಶಸ್ತಿ”, ಕರ್ನಾಟಕ ಲೇಖಕಿಯರ ಸಂಘದ “ಅನುಪಮಾ ಪ್ರಶಸ್ತಿ”, ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ, ವರ್ಧಮಾನ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿಗಳ ಜತೆ ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ದತ್ತಿ ಪ್ರಶಸ್ತಿಗನ್ನು ಅವರು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next