ಬೆಂಗಳೂರು: ನಗರದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರ ಸಂಚಾರ ಪೊಲೀಸರು ಒಂದೇ ದಿನ ಮದ್ಯ ಸೇವಿಸಿ ಶಾಲಾ ವಾಹನ ಓಡಿಸಿದ 21 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆ.30ರಂದು ಬೆಳಗ್ಗೆ 7.30ರಿಂದ ಅಪರಾಹ್ನ 12 ಗಂಟೆವರೆಗೆ ನಗರದ ಎಲ್ಲಾ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ 3,924 ಶಾಲಾ ವಾಹನಗಳ ತಪಾಸಣೆ ಮಾಡಲಾಗಿದೆ. ಈ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 21 ಮಂದಿ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ ಹೆಚ್ಚುವರಿ ಶಾಲಾ ಮಕ್ಕಳನ್ನು ಕರದೊಯ್ಯುತ್ತಿದ್ದ 445 ಶಾಲಾ ವಾಹನಗಳ ಚಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.
ಮದ್ಯಸೇವಿಸಿ ವಾಹನ ಚಾಲನೆ ಮಾಡಿದ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ. ಜತೆಗೆ ವಾಹನಗಳ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಈ ನಡುವೆ, ಕಳೆದ 7 ದಿನಗಳಲ್ಲಿ 835 ಪಾನಮತ್ತ ಚಾಲಕರು/ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆ.23ರಿಂದ 29ರ ವರೆಗೆ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ವಿವಿಧ ಮಾದರಿಯ 60,047 ವಾಹನಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದ 835 ಚಾಲಕರು/ಸವಾರರ ವಿರುದ್ಧ ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧದ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.