Advertisement

ಶಿವಮೊಗ್ಗ ಕಾಲೇಜು ಮುಂದೆಯೇ ವಿದ್ಯಾರ್ಥಿಗಳ ತೂರಾಟ: ವೈರಲ್ ಆಯ್ತು ವಿಡಿಯೋ

11:48 AM Jul 25, 2022 | Team Udayavani |

ಶಿವಮೊಗ್ಗ: ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡುತ್ತ ರಸ್ತೆ ಮೇಲೆ ಬಿದ್ದು ಹೊರಳಾಡುವ ವಿಡಿಯೋ ವೈರಲ್ ಆಗಿದೆ. ಕಾಲೇಜು ಗೇಟ್ ಮುಂದೆಯೇ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಗಳ ಮೊಬೈಲ್ ನಲ್ಲೇ ವಿಡಿಯೋ ರೆಕಾರ್ಡ್ ಆಗಿದೆ ಎಂದು ತಿಳಿದು ಬಂದಿದೆ.

Advertisement

ನಗರದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಮಲಿನಲ್ಲಿ ತೇಲಾಡುತ್ತ ಕಾಲೇಜು ಮುಂಭಾಗದ ಫುಟ್ ಪಾತ್ ಮೇಲೆ ಬಿದ್ದು ಹೊರಳಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಅಮಲಿನಲ್ಲಿರುವ ಇಬ್ಬರು ವಿದ್ಯಾರ್ಥಿಗಳನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. 57 ಸೆಕೆಂಡ್ ನ ವಿಡಿಯೋವನ್ನು ಬಸ್ ಒಂದರಲ್ಲಿ ಕುಳಿತವರು ಚಿತ್ರೀಕರಣ ಮಾಡಿದ್ದಾರೆ. ವಿದ್ಯಾರ್ಥಿಯೊಬ್ಬ ಮುಖ ಕೆಳಗೆ ಮಾಡಿ ಫುಟ್ ಪಾತ್ ಮೇಲೆ ಬಿದ್ದಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ತಲೆ ಬಗ್ಗಿಸಿ ಕುಳಿತಿರುತ್ತಾನೆ. ಅವರ ಸ್ನೇಹಿತರು ಇಬ್ಬರನ್ನು ಸಂತೈಸುತ್ತಾರೆ. ಈ ವೇಳೆ ತಲೆ ಕೆಳಗೆ ಹಾಕಿಕೊಂಡು ಕುಳಿತಿದ್ದ ವಿದ್ಯಾರ್ಥಿ ದಿಢೀರ್ ಎದ್ದು ಮುಂದಕ್ಕೆ ನಡೆಯುತ್ತಾನೆ. ಕೆಲವು ಹೆಜ್ಜೆ ಹಾಕುವಷ್ಟರಲ್ಲಿ ತೂರಾಡಿ ಕೆಳಗೆ ಬೀಳುತ್ತಾನೆ.

ಇದನ್ನೂ ಓದಿ:ಉ.ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಶೀಘ್ರ ನಿರ್ಧಾರ: ಕೆ.ಸುಧಾಕರ್

ಇದೆ ವೇಳೆ ಅಲ್ಲಿಗೆ ಬಂದ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಲು ಯತ್ನಿಸುತ್ತಾರೆ. ಅದರೆ ಅವರ ಮಾತು ಕೇಳದೆ ತೂರಾಡುತ್ತಲೆ ವಿದ್ಯಾರ್ಥಿ ಓಡಲು ಯತ್ನಿಸುತ್ತಾನೆ.

Advertisement

ವೈರಲ್: ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಅಮಲಿನಲ್ಲಿ ತೂರಾಡುತ್ತಾ ಓಡಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಪ್ ಗ್ರೂಪ್ ಗಳಲ್ಲಿಯು ವಿಡಿಯೋ ಶೇರ್ ಆಗುತ್ತಿದೆ.

ನೋಡುತ್ತ ನಿಂತ ಜನ: ಬ್ಯಾಗು, ಯುನಿಫಾರಂ ಧರಿಸಿಕೊಂಡು ಎಲ್ಲೆಂದರಲ್ಲಿ ಬೀಳುತ್ತಿದ್ದ ವಿದ್ಯಾರ್ಥಿಗಳನ್ನು ಜನರು ಗಾಬರಿಯಿಂದ ನೋಡುತ್ತಿದ್ದರು. ಕಾಲೇಜು ಸಮೀಪ ನಿಂತಿದ್ದ ಸಾರ್ವಜನಿಕರು ವಿದ್ಯಾರ್ಥಿಗಳು ಅಮಲಿನಲ್ಲಿ ತೇಲಾಡುತ್ತಿರುವುದನ್ನು ಗಮನಿಸಿ ಚಕಿತಗೊಂಡಿದ್ದರು.

ಮಾದಕ ವಸ್ತು?: ವಿಡಿಯೋ ಚಿತ್ರೀಕರಣಗೊಂಡ ದಿನ ಮತ್ತು ಸಮಯದ ಕುರಿತು ಸ್ಪಷ್ಟತೆ ಇಲ್ಲ. ಆದರೆ ವಿದ್ಯಾರ್ಥಿಗಳು ಆಗಷ್ಟೆ ಕಾಲೇಜಿನಿಂದ ಹೊರ ಬಂದಂತೆ ತೋರುತ್ತದೆ. ಈ ವಿದ್ಯಾರ್ಥಿಗಳು ಅಮಲಿಗೆ ಮದ್ಯ ಕಾರಣವೊ ಅಥವಾ ಮಾದಕ ವಸ್ತುಗಳು ಕಾರಣವೊ ಎಂಬುದು ತಿಳಿದು ಬಂದಿಲ್ಲ.

ಕಾಲೇಜು ಕ್ಯಾಂಪಸ್ ಗಳಲ್ಲಿ ಗಾಂಜಾ, ಡ್ರಗ್ಸ್ ಪೂರೈಕೆಯಾಗುತ್ತಿರುವ ಕುರಿತು ಜಿಲ್ಲೆಯಲ್ಲಿ ಆತಂಕವಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತಷ್ಟು ಮಾದಕ ವಸ್ತುಗಳು ವಿದ್ಯಾರ್ಥಿಗಳ ಕೈ ಸೇರುತ್ತಿರುವ ಕುರಿತು ಗಂಭೀರ ಚರ್ಚೆ ಆರಂಭವಾಗಿದೆ. ಕಾಲೇಜು ಅಡಳಿತ ಮಂಡಳಿ ಮತ್ತು ಪೋಷಕರು ಜಾಗೃತಿ ಮೂಡಿಸುವತ್ತ ಹೆಜ್ಜೆ ಇರಿಸಬೇಕಿದೆ. ಪೊಲೀಸ್ ಇಲಾಖೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಘಟನೆಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದು, ತನಿಖೆಯಲ್ಲಿ ವಿದ್ಯಾರ್ಥಿಗಳು ಸಾಗರ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿಕೊಂಡು ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಕಾಲೇಜಿನ ಗೇಟ್ ನಲ್ಲಿ ತಡೆಯಲಾಗಿತ್ತು. ಬಳಿಕ ಅವರ ಪೋಷಕರಿಗೆ ಈ  ವಿಚಾರವನ್ನು ತಿಳಿಸಿ, ಕಾಲೇಜು ಆಡಳಿತ ಮಂಡಳಿಯು ಪೋಷಕರೊಂದಿಗೆ ವಿದ್ಯಾರ್ಥಿಗಳಿಗೆ ಈ ವಿಷಯವಾಗಿ ಸಮಾಲೋಚನೆ ನಡೆಸಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next