ಲಕ್ನೋ: ಖರೀದಿಸಿದ ಸ್ವೀಟ್ಸ್ ನ ಹಣ ಕೊಡುವಂತೆ ಕೇಳಿದ ಮಾಲೀಕನಿಗೆ ಪಾನಮತ್ತ ಸಬ್ ಇನ್ಸ್ ಪೆಕ್ಟರ್ ಏಯ್ ನೀನು ನನ್ನ ಬಳಿ ಹಣ ಕೇಳ್ತಿಯಾ ಎಂದು ಜಟಾಪಟಿಗೆ ಇಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Tamil Nadu; ಭೀಕರ ರಸ್ತೆ ಅಪಘಾತ; ಬಸ್ಸುಗಳ ಮುಖಾಮುಖಿ ಡಿಕ್ಕಿ; 4 ಮೃತ್ಯು, 70 ಜನರಿಗೆ ಗಾಯ
ಉತ್ತರಪ್ರದೇಶದ ಕಾನ್ಪುರ್ ನಗರದ ಸ್ವೀಟ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. “ ನೀವು ಆರ್ಡರ್ ಮಾಡಿದ ಸ್ವೀಟ್ಸ್ ಗೆ ಹಣ ಪಾವತಿಸಿ ಎಂದು ಅಂಗಡಿ ಮಾಲೀಕ ಸಬ್ ಇನ್ಸ್ ಪೆಕ್ಟರ್ ಗೆ ಹೇಳಿದ ಕೂಡಲೇ ತಾಳ್ಮೆ ಕಳೆದುಕೊಂಡ ಇನ್ಸ್ ಪೆಕ್ಟರ್ ಮಾಲೀಕತ್ತ ಮುನ್ನುಗ್ಗಿ ಬಂದು ಎದೆಗೆ ಎದೆ ಕೊಟ್ಟು ದೂಡಿದ್ದ. ಆಗ ಅಂಗಡಿ ಮಾಲೀಕ ಇನ್ಸ್ ಪೆಕ್ಟರ್ ನನ್ನು ಪಕ್ಕಕ್ಕೆ ತಳ್ಳಿ, ಹಣ ಕೊಟ್ಟು ಸ್ವೀಟ್ಸ್ ತೆಗೆದುಕೊಂಡು ಹೋಗಲು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಂತರ ಇನ್ಸ್ ಪೆಕ್ಟರ್ ತನ್ನ ಮೊಬೈಲ್ ತೆಗೆದುಕೊಂಡು, ಸರ್ ನಾನಿಲ್ಲಿ ಸ್ವೀಟ್ಸ್ ಶಾಪ್ ನಲ್ಲಿದ್ದೇನೆ, ನೀವು ಶಾಪ್ ಗೆ ಬನ್ನಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜಟಾಪಟಿಯ ನಂತರ ಇನ್ಸ್ ಪೆಕ್ಟರ್ ಅಂಗಡಿ ಮಾಲೀಕನ ಬಳಿ ಎಷ್ಟು ಹಣ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಮಾಲೀಕ 110 ರೂಪಾಯಿ ಎಂದು ಉತ್ತರಿಸಿದ್ದ. ಪಾನಮತ್ತ ಇನ್ಸ್ ಪೆಕ್ಟರ್ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ. ಆಗ ಅಂಗಡಿ ಮಾಲೀಕ ಕುಡಿದ ಮತ್ತಿನಲ್ಲಿ ಇನ್ಸ್ ಪೆಕ್ಟರ್ ಗೆ ಕ್ಯೂಆರ್ ಕೋಡ್ ಕೂಡಾ ಸ್ಕ್ಯಾನ್ ಮಾಡಲು ಆಗುತ್ತಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವೀಟರ್ ಬಳಕೆದಾರರು ವಿಡಿಯೋವನ್ನು ಉತ್ತರಪ್ರದೇಶದ ಕಾನ್ಪುರ್ ಪೊಲೀಸರ ಟ್ವೀಟರ್ ಹ್ಯಾಂಡಲ್ ಗೆ ಟ್ಯಾಗ್ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕಾನ್ಪುರ್ ಪೊಲೀಸರು ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.