Advertisement

ಡ್ರಗ್ಸ್‌  ಡೀಲಿಂಗ್‌: ಮರಣ ದಂಡನೆಗೂ ಅವಕಾಶ

02:10 PM Sep 07, 2020 | sudhir |

ಮಂಗಳೂರು: ನಾರ್ಕೊಟಿಕ್‌ ಡ್ರಗ್ಸ್‌ ಆ್ಯಂಡ್‌ ಸೈಕೊಟ್ರೊಪಿಕ್‌ ಸಬ್‌ಸ್ಟೆನ್ಸಸ್‌ (ಎನ್‌ಡಿಪಿಎಸ್‌) ಕಾಯ್ದೆ 1985 ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಟ, ಮಾರಾಟ, ಸೇವನೆ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ ಸಾಮಾನ್ಯ ಜೈಲು ಶಿಕ್ಷೆಯಿಂದ ಮೊದಲ್ಗೊಂಡು ಗೂಂಡಾ ಕಾಯ್ದೆ ಜಾರಿ, 10ರಿಂದ 20 ವರ್ಷ ತನಕ ಕಠಿನ ಶಿಕ್ಷೆ ಮತ್ತು 10 ಲಕ್ಷ ರೂ. ತನಕ ದಂಡ ಮಾತ್ರವಲ್ಲದೆ ವಿಶೇಷ ಸಂದರ್ಭದಲ್ಲಿ ಮರಣ ದಂಡನೆಗೂ ಅವಕಾಶವಿದೆ.

Advertisement

ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಅಕ್ರಮವಾಗಿ ಡ್ರಗ್ಸ್‌ ವ್ಯವಹಾರ ಅವ್ಯಾಹತವಾಗಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ಮಂಗಳೂರಿನಲ್ಲಿ ಈ ದಂಧೆಯಲ್ಲಿದ್ದ ಹಲವಾರು ಮಂದಿ ಜೈಲು ಸೇರಿದ್ದರು. ಹೊರಬಂದ ಬಳಿಕ ಪುನರಪಿ ತೊಡಗಿಸಿಕೊಂಡು ಗೂಂಡಾ ಕಾಯ್ದೆಯನ್ನೂ ಬಗಲಿಗೆ ಹಾಕಿಕೊಂಡವರೂ ಇದ್ದಾರೆ!

ಎನ್‌ಡಿಪಿಎಸ್‌ ಪ್ರಕರಣಗಳನ್ನು ವಿಶೇಷ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳುತ್ತದೆ. ಪತ್ತೆಯಾಗುವ ಮಾದಕ ದ್ರವ್ಯದ ಪ್ರಮಾಣಕ್ಕನುಗುಣವಾಗಿ ವಿಚಾರಣೆ ಮತ್ತು ಶಿಕ್ಷೆಯ ಪ್ರಮಾಣ ನಿಗದಿ ಆಗುತ್ತದೆ.

ಶಿಕ್ಷೆ ಪ್ರಮಾಣ
ಸಣ್ಣ ಪ್ರಮಾಣದ ಗಾಂಜಾ ಪ್ರಕರಣ ಆಗಿದ್ದಲ್ಲಿ ಗರಿಷ್ಠ 1 ವರ್ಷ ಶಿಕ್ಷೆ ಅಥವಾ 10,000 ರೂ. ವರೆಗೆ ದಂಡ ಅಥವಾ ಇವೆರಡನ್ನೂ ವಿಧಿಸಲು ಎನ್‌ಡಿಪಿಎಸ್‌ ಕಾಯ್ದೆಯ ಸೆಕ್ಷನ್‌ 20ರಡಿ ಅವಕಾಶವಿದೆ. ಮಧ್ಯಮ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಗರಿಷ್ಠ 10 ವರ್ಷ ತನಕ ಶಿಕ್ಷೆ ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ವಾಣಿಜ್ಯ ಉದ್ದೇಶದ್ದಾಗಿದ್ದರೆ 10ರಿಂದ ಗರಿಷ್ಠ 20 ವರ್ಷ ತನಕ ಕಠಿನ ಶಿಕ್ಷೆ ಹಾಗೂ 1 ಲಕ್ಷ ರೂ.ನಿಂದ ಗರಿಷ್ಠ 10 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ಇಲ್ಲಿ ಶಿಕ್ಷೆಯ ಜತೆಗೆ ದಂಡ ಶುಲ್ಕ ಕಡ್ಡಾಯ.

ಹೆರಾಯ್ನ, ಕೊಕೇನ್‌, ಮಾರ್ಫಿನ್‌ನಂತಹ ಮಾದಕ ದ್ರವ್ಯ ಸೇವನೆ ಪ್ರಕರಣದಲ್ಲಿ ಸೆಕ್ಷನ್‌ 21ರನ್ವಯ ಒಂದು ವರ್ಷ ಕಠಿನ ಸಜೆ ಅಥವಾ 20,000 ರೂ. ದಂಡ ವಿಧಿಸಲಾಗುತ್ತದೆ.

Advertisement

ಜಾಮೀನು ಕಷ್ಟ
ಮಾದಕ ವಸ್ತು ಪ್ರಕರಣದಲ್ಲಿ ಜಾಮೀನು ಕಷ್ಟ. ಆದರೆ ಸೆಕ್ಷನ್‌ 37ರಡಿ ಜಾಮೀನಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಅಂದರೆ ಜಾಮೀನು ಪಡೆಯಬೇಕಾದರೆ ಸ್ವತಃ ಆರೋಪಿಯೇ ನ್ಯಾಯಾಲಯಕ್ಕೆ ತೃಪ್ತಿಕರ ಉತ್ತರ ನೀಡಬೇಕಾಗುತ್ತದೆ. ಶಿಕ್ಷೆಗೆ ಒಳಗಾದವ ಈ ಹಿಂದೆಯೂ ಇಂಥದ್ದೇ ಅಪರಾಧಗಳನ್ನು ಎಸಗಿದ್ದವನಾಗಿದ್ದರೆ ಹೆಚ್ಚುವರಿ ಶಿಕ್ಷೆಗೂ ಅವಕಾಶವಿದೆ (ಸೆ. 31).

ಮರಣ ದಂಡನೆ
ವಾಣಿಜ್ಯ ಉದ್ದೇಶದ ಮಾದಕ ವಸ್ತು ಪ್ರಕರಣದಲ್ಲಿ ಆರೋಪಿ ಹಳೆ ಆರೋಪಿಯೂ ಆಗಿದ್ದು ಹಾಗೂ ವಿದೇಶಗಳಿಂದ ಮಾದಕ ವಸ್ತುಗಳ ಆಮದು ಅಥವಾ ವಿದೇಶಕ್ಕೆ ರಫ್ತು ಮಾಡುವ ವಹಿವಾಟಿನಲ್ಲಿ ತೊಡಗಿದ ಪ್ರಕರಣ ಆಗಿದ್ದರೆ ಮರಣ ದಂಡನೆಗೂ (ಸೆಕ್ಷನ್‌ 31ಎ) ಅವಕಾಶವಿದೆ ಎಂದು ಕಾನೂನು ತಜ್ಞರು ಮಾಹಿತಿ ನೀಡಿದ್ದಾರೆ.

ಜೈಲು ಶಿಕ್ಷೆ
ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2019ರಲ್ಲಿ ಗಾಂಜಾ ದಾಸ್ತಾನು ಪ್ರಕರಣವೊಂದರಲ್ಲಿ ತಮಿಳುನಾಡು ಮೂಲದ ಇಬ್ಬರಿಗೆ 10 ವರ್ಷಗಳ ಕಠಿನ ಸಜೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿತ್ತು. 2018ರಲ್ಲಿ ಬಿಹಾರ ಮತ್ತು ಆಂಧ್ರದ ಇಬ್ಬರಿಗೆ ತಲಾ ಒಂದೂವರೆ ವರ್ಷದ ಕಠಿನ ಶಿಕ್ಷೆ ಮತ್ತು ತಲಾ 20,000 ರೂ. ದಂಡ ವಿಧಿಸಿತ್ತು. 2018ರಲ್ಲಿ ವಿಮಾನದಲ್ಲಿ ಬಹ್ರೈನ್‌ಗೆ ಗಾಂಜಾ ಸಾಗಿಸಲು ಯತ್ನಿಸಿದ ಮಂಜೇಶ್ವರದ ವ್ಯಕ್ತಿಗೆ 5 ವರ್ಷ ಕಠಿನ ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದೆ. ಇಲ್ಲಿ ದಂಡದ ಮೊತ್ತವು ಆರೋಪಿ ಬಳಿ ಪತ್ತೆಯಾದ ಗಾಂಜಾದ ಮೌಲ್ಯಕ್ಕಿಂತಲೂ ಜಾಸ್ತಿ ಇತ್ತು ಎನ್ನುವುದು ವಿಶೇಷ. ಗಾಂಜಾ ಬೆಲೆ 80,000 ರೂ.; ದಂಡದ ಮೊತ್ತ 1 ಲಕ್ಷ ರೂ. ಆಗಿತ್ತು.

ಖುಲಾಸೆಯೇ ಹೆಚ್ಚು !
ಮಾದಕ ವಸ್ತು ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ದಾಖಲಾಗುತ್ತಿವೆ. ಆದರೆ ಆರೋಪಿಗಳಿಗೆ ಶಿಕ್ಷೆ ಪ್ರಕರಣಗಳು ಕಡಿಮೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಅಥವಾ ಪ್ರತಿಕೂಲ ಸಾಕ್ಷಿಯಿಂದಾಗಿ ಖುಲಾಸೆ ಹೊಂದುತ್ತಾರೆ.
– ಪುಷ್ಪರಾಜ್‌ ಅಡ್ಯಂತಾಯ, ವಿಶೇಷ ಪಬ್ಲಿಕ್‌ಪ್ರಾಸಿಕ್ಯೂಟರ್‌

Advertisement

Udayavani is now on Telegram. Click here to join our channel and stay updated with the latest news.

Next