Advertisement

ಡ್ರಗ್ಸ್‌ ಹಾವಳಿ: ವಿದೇಶಿ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ

03:46 AM Jul 13, 2021 | Team Udayavani |

ಮಂಗಳೂರು: ನಗರದ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ಪದಾರ್ಥಗಳ ವ್ಯವಹಾರ ನಡೆಯುತ್ತಿದೆ ಎಂಬ ಪೊಲೀಸರ ಮಾಹಿತಿಯ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಗಳು ಈಗಾಗಲೇ ಇರುವ ಡ್ರಗ್ಸ್‌ ತಡೆ ಸಮಿತಿ ಮತ್ತು ಆ್ಯಂಟಿ ಡ್ರಗ್ಸ್‌ ಸ್ಕ್ವಾಡ್‌ಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಮುಂದಾಗಿವೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ಕಾಲೇಜು ಕ್ಯಾಂಪಸ್‌, ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದರೂ ಕೆಲವು ವಿದ್ಯಾರ್ಥಿಗಳ ಕೈಗೆ ಡ್ರಗ್ಸ್‌ ತಲುಪಿಸುವಲ್ಲಿ ಡ್ರಗ್ಸ್‌ ಪೆಡ್ಲರ್‌ಗಳು ಯಶಸ್ವಿಯಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಜಾಲದ ಕೆಲವು ಕೊಂಡಿಗಳು ಕಡಿದುಕೊಂಡಿವೆ. ಮುಂದೆ ಕಾಲೇಜುಗಳು, ಹಾಸ್ಟೆಲ್‌ಗ‌ಳು ತೆರೆದುಕೊಂಡಾಗ ಡ್ರಗ್ಸ್‌ ಚಟುವಟಿಕೆ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ಇಡಲು ಯೋಜಿಸಲಾಗಿದೆ.

ವಿದೇಶೀಯರ ಸಂಪರ್ಕ
ಡ್ರಗ್ಸ್‌ ಮಾರಾಟ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರು ಪೊಲೀಸರು ಈಗಾಗಲೇ ಬೆಂಗಳೂರಿನಿಂದ ವಿದೇಶಿ ಪ್ರಜೆಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ವಿದ್ಯಾಭ್ಯಾಸಕ್ಕೆಂದು ಬಂದಿರುವ ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಡ್ರಗ್ಸ್‌ ಪೆಡ್ಲರ್‌ಗಳು ಬೆಂಗಳೂರಿನಲ್ಲಿದ್ದುಕೊಂಡೇ ಮಂಗಳೂರು, ಕಾಸರಗೋಡು ಭಾಗದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯೂ ಭಾಗಿ
ಪೊಲೀಸರ ವಶವಾದವರ ಪೈಕಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮತ್ತು ಓರ್ವ ವಿದ್ಯಾರ್ಥಿಯೂ ಸೇರಿದ್ದಾರೆ. ಕೆಲವರು ಸ್ವಯಂ ಡ್ರಗ್ಸ್‌ ವ್ಯಸನಿ ಗಳಾಗಿದ್ದು ದುಬಾರಿ ಡ್ರಗ್ಸ್‌ ಖರೀದಿಗೆ, ಇನ್ನು ಕೆಲವರು ಶೋಕಿ ಜೀವನಕ್ಕಾಗಿ ಹಣ ಹೊಂದಿಸಿ ಕೊಳ್ಳಲು ಮಾರಾಟ, ಸಾಗಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ.

Advertisement

ಕಮಿಟಿಗೆ ಜವಾಬ್ದಾರಿ
ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ಸ್‌ ಕಮಿಟಿ, ಆ್ಯಂಟಿ ಡ್ರಗ್ಸ್‌ ಸ್ಕ್ವಾಡ್‌, ಆ್ಯಂಟಿ ರ್ಯಾಗಿಂಗ್‌ ಕಮಿಟಿ ಗಳನ್ನು ರಚಿಸಬೇಕು. ಇದರಲ್ಲಿ ಪ್ರಾಂಶು ಪಾಲರು, ಆಪ್ತ ಸಮಾಲೋಚಕರು, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಗಳು, ಉಪನ್ಯಾಸಕರು ಮತ್ತು ಪೊಲೀಸರು ಇರಬೇಕು. ಈಗಾಗಲೇ ಕಮಿಟಿ ಇರುವ ಕಡೆಗಳಲ್ಲಿ ಹೆಚ್ಚು ಕ್ರಿಯಾಶೀಲವಾಗುವಂತೆ ನೋಡಿಕೊಳ್ಳಬೇಕು. ಹೆತ್ತವರು ಕೂಡ ಮಕ್ಕಳ ಚಟುವಟಿಕೆ, ವರ್ತನೆ ಬಗ್ಗೆ ಗಮನ ಹರಿಸುತ್ತಿರಬೇಕು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

ಎಲ್ಲ ಕಾಲೇಜುಗಳಿಗೂ ಸೂಚನೆ
ಡ್ರಗ್ಸ್‌ ವಿರುದ್ಧ ಈಗಾಗಲೇ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ವೈದ್ಯಕೀಯ ಕಾಲೇಜುಗಳು ನಮ್ಮ ವಿ.ವಿ.ಯ ನಿಯಂತ್ರಣದಲ್ಲಿಲ್ಲ. ಇತರ 207 ಕಾಲೇಜುಗಳಿಗೂ ಆ್ಯಂಟಿ ಡ್ರಗ್ಸ್‌ ಕಮಿಟಿ ರಚಿಸಲು ಯುಜಿಸಿ ಕೂಡ ಸೂಚಿಸಿದೆ. 38 ದೇಶಗಳ ವಿದ್ಯಾರ್ಥಿಗಳು ಕೂಡ ನಮ್ಮ ಕಾಲೇಜುಗಳಲ್ಲಿದ್ದು, ಅವರ ಮೇಲೆ ವಿಶೇಷ ನಿಗಾ ಇಡಲಾಗುವುದು. ಮಾದಕ ದ್ರವ್ಯ ಜಾಲಕ್ಕೆ ಬೀಳದಂತೆ ವಿದ್ಯಾರ್ಥಿಗಳು ಸ್ವಯಂ ಜಾಗೃತರಾಗಬೇಕು.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ

ಸಿಂಥೆಟಿಕ್‌ ಡ್ರಗ್ಸ್‌ ಅಧಿಕ
ಕಾಲೇಜು ವಿದ್ಯಾರ್ಥಿಗಳಿಗೆ ಸಿಂಥೆಟಿಕ್‌ ಡ್ರಗ್ಸ್‌, ಗಾಂಜಾಗಳನ್ನು ಪೂರೈಸುತ್ತಿದ್ದ ಜಾಲವನ್ನು ಪತ್ತೆಹಚ್ಚಿ ತನಿಖೆ ನಡೆಸಲಾಗುತ್ತಿದೆ. ಸಿಂಥೆಟಿಕ್‌ ಡ್ರಗ್ಸ್‌ ಭಾರೀ ಪ್ರಮಾಣದಲ್ಲಿ ದಾಸ್ತಾನು ಇರುವುದು ಗೊತ್ತಾಗಿದೆ. ವಿದ್ಯಾರ್ಥಿಗಳ ಕೈಗೆ ದೊರೆಯದಂತೆ ಮಾಡುವುದರ ಜತೆಗೆ ಡ್ರಗ್ಸ್‌ ಹಾವಳಿಯನ್ನು ಸಂಪೂರ್ಣ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
– ಹರಿರಾಂ ಶಂಕರ್‌, ಡಿಸಿಪಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next