Advertisement

ಮಾದಕ ದ್ರವ್ಯಗಳ ಸೇವನೆ ಶಿಕ್ಷಾರ್ಹ ಅಪರಾಧ

07:03 AM Jun 30, 2019 | Lakshmi GovindaRaj |

ದೇವನಹಳ್ಳಿ: ಮಾದಕ ವಸ್ತುಗಳ ಸೇವನೆ ಆರೋಗ್ಯ ಹಾನಿಕಾರಕವಷ್ಟೇ ಅಲ್ಲ. ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ವಿಶ್ವನಾಥಪುರ ಪಿಎಸ್‌ಐ ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ ವಿಶ್ವನಾಥಪುರ ಪೋಲೀಸ್‌ ಠಾಣೆಯಿಂದ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಜಾ, ಡ್ರಗ್ಸ್‌ ಇತ್ಯಾದಿ ಮಾದಕ ದ್ರವ್ಯಗಳ ಸೇವನೆ ಮಾಡಬಾರದು. ಹವ್ಯಾಸಕ್ಕೆಂದು ಆರಂಭಿಸಿದ್ದು, ಮುಂದೆ ಚಟವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಜೀವನ ಹಾಳಾಗುತ್ತದೆ. ಪೋಷಕರು ತಮ್ಮ ಮಕ್ಕಳ ಮೇಲೆ ಸದಾ ನಿಗಾವಹಿಸಬೇಕು.

ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಣೆ ವಿರುದ್ಧ ಕಾಯ್ದೆ ಜಾರಿಯಾಗಿದೆ. ಕಾನೂನು ಉಲ್ಲಂ ಸಿ ಮಾಡುವ ಕೃತ್ಯಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ 17 ವರ್ಷದವರೇ ಮಾದಕ ವಸ್ತುಗಳ ಸೇವನೆಯಲ್ಲಿ ಹೆಚ್ಚಿದ್ದಾರೆ.

ಇದರಿಂದ ಶೇ.30ರಿಂದ 40% ಅಪಘಾತಗಳಿಗೆ ಕಾರಣವಾಗುತ್ತಿದೆ. ಮಾದಕ ವಸ್ತುಗಳ ಸೇವನೆಯಿಂದಾಗುವ ಪರಿಣಾಮ ಅರ್ಥೈಸಿಕೊಂಡು ತಮ್ಮ ಕುಟುಂಬಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

Advertisement

ಮಕ್ಕಳ ಚಟುವಟಿಕೆಗಳಲ್ಲಿ ಅನುಮಾನಸ್ಪದ ನಡವಳಿಕೆ ಕಂಡರೆ, ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕು. ದುಶ್ಚಟಗಳ ಹಾದಿ ಹಿಡಿದಿದ್ದಾರೆಯೇ ಎಂಬುವುದನ್ನು ಪತ್ತೆ ಹಚ್ಚಿ ಅವರ ಜೀವನ ಸರಿ ಮಾಡಬೇಕು.

ಉತ್ತಮ ನಡೆ ನುಡಿ ಅಭ್ಯಾಸಗಳನ್ನು ಮೈಗೂಡಿಕೊಂಡು ಸಮಾಜಕ್ಕೂ ಹೆತ್ತವರಿಗೂ ಕೀರ್ತಿ ತರುವಂತಹ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಬೇಕು. ಸ್ನೇಹಿತರ ಒತ್ತಾಯಕ್ಕಾಗಿ ಅಥವಾ ಒತ್ತಡಕ್ಕೆ ಮಣಿದು ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ, ಅದರಿಂದ ಮುಂದೆ ವ್ಯಸನವಾಗಿ ವಿವಿಧ ರೀತಿಯ ಮಾನಸಿಕ ಹಾಗೂ ದೈಹಿಕ ಕಾಯಿಲೆಗೆ ತುತ್ತಾಗಬೇಕಾಗುವುದು ಎಂದರು.

ಪ್ರಾಂಶುಪಾಲೆ ವಾಣಿಶ್ರೀ ಮಾತನಾಡಿ, ಬೀಡಿ, ಸಿಗರೇಟ್‌ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕು. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಯುವ ಸಮುದಾಯದಲ್ಲಿ ದುಶ್ಚಟಗಳ ಬೆಳವಣಿಗೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.

ಉತ್ತಮ ಸಮಾಜಕ್ಕೆ ಇದು ಮಾರಕವಾಗಿದ್ದು, ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ತಿಳಿಸಿದರು. ಕರ್ನಾಟಕ ಪಬ್ಲಿಕ್‌ ಶಾಲೆ ಉಪ ಪ್ರಾಂಶುಪಾಲ ರುದ್ರಪ್ಪ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬಸವರಾಜು, ಶಿಕ್ಷಕರು ಹಾಗೂ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next