ಬೆಂಗಳೂರು: ಸಾರ್ವಜನಿಕವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನೈಜೀರಿಯಾ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಜೆರೀ ಅಗ(29) ಬಂಧಿತ. ಆರೋಪಿ ಭಾರತಿನಗರ ಠಾಣಾ ವ್ಯಾಪ್ತಿಯ ಫೊಮ್ ನೇಡ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ. ಈತನಿಂದ 75 ಸಾವಿರ ರೂ. ಮೌಲ್ಯದ 5 ಗ್ರಾಂ ಕೊಕೇನ್, 1 ಮೊಬೈಲ್, 1 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿರುವ ಆರೋಪಿ ಬಿಳಿಶಿವಾಲೆಯಲ್ಲಿ ವಾಸವಾಗಿದ್ದ. ಇದೀಗ ವೀಸಾ ಅವಧಿ ಮುಕ್ತಾಯವಾಗಿದ್ದು, ಅಕ್ರಮವಾಗಿ ನೆಲೆಸಿದ್ದಾನೆ.
ಹೀಗಾಗಿ ಜೀವನ ನಿರ್ವಹಣೆಗಾಗಿ ಆರೋಪಿ ತನ್ನ ಆಪ್ತರ ಮೂಲಕ ಮುಂಬೈ ಹಾಗೂ ದೆಹಲಿ ಮೂಲಕ ಕೊಕೇನ್ ಖರೀದಿಸಿ ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಹಿಂದೇ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರಬಂದಿರುವ ಜೆರೀ ಇದೀಗ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಎನ್‌ಸಿಬಿಯಿಂದ ಮಹಿಳೆ ಬಂಧನ: ನ್ಯೂಡಲ್ಸ್ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತು ಕೊಕೇನ್ ಹಾಗೂ ಕೆಟಾಮಿನ್‌ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆಯನ್ನು ಬಂಧಿಸಲಾಗಿದ್ದು, ತನಿಖಾ ಹಂತದಲ್ಲಿರುವುದರಿಂದ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದರು.
ಮುಂಬೈನಿಂದ ಕರ್ನಾಟಕಕ್ಕೆ ಬಸ್‌ನಲ್ಲಿ ಬರುತ್ತಿದ್ದ ಮಹಿಳೆ ತನ್ನ ಬ್ಯಾಗ್‌ನಲ್ಲಿದ್ದ ಮೂರು ಮ್ಯಾಗಿ ನ್ಯೂಡಲ್ಸ್ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ಆರೋಪಿತ ಮಹಿಳೆಯನ್ನು ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ಪರಿಶೀಲಿಸಲಾಯಿತು. ಈ ವೇಳೆ 200 ಗ್ರಾಂ ಕೊಕೇನ್, 100 ಗ್ರಾಂ ಕೆಟಾಮಿನ್ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.