ಬೆಂಗಳೂರು: ಮಾದಕವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಪೀಟರ್ ಒಬಿಡಿ (27) ಬಂಧಿತ.
ಆರೋಪಿಯಿಂದ 4.5 ಲಕ್ಷ ರೂ. ಮೌಲ್ಯದ ಎಂಡಿಎಂಎ ಹೆಸರಿನ ಮಾದಕ ವಸ್ತು, 20 ಸಾವಿರ ರೂ. ನಗದು ಹಾಗೂ ಮೊಬೈಲ್ ಜಪ್ತಿಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಣ್ಣೂರು ಸಮೀಪದ ಬಾಬುಸಾಬ್ ಪಾಳ್ಯದ ಮನೆಯೊಂದರ ಸಮೀಪ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿ ಪೀಟರ್‌ನನ್ನು ಬಂಧಿಸಲಾಯಿತು.
ಬಳಿಕ ಆತನ ಬಳಿಯಿದ್ದ ಮಾದಕವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಆರೋಪಿ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ.
ಮಧ್ಯವರ್ತಿಗಳಿಂದ ಮಾದಕವಸ್ತು ತರಿಸಿಕೊಂಡು, ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ.ಆರೋಪಿಗೆ ಮಾದಕವಸ್ತು ಸರಬರಾಜು ಮಾಡಿಸಿಕೊಳ್ಳುತ್ತಿದ್ದ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.