Advertisement

ಮಾದಕ ಜಾಲ:ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

12:16 PM Oct 22, 2017 | Team Udayavani |

ಮಹಾನಗರ: ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಲೇಜು ಕ್ಯಾಂಪಸ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್‌ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಝೇಶನ್‌ ಆಫ್‌ ಇಂಡಿಯಾ(ಎಸ್‌ಐಒ) ದ.ಕ. ಜಿಲ್ಲಾ ಘಟಕದ ನಿಯೋಗವು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರಿಗೆ ಶನಿವಾರ ಮನವಿ ಸಲ್ಲಿಸಿತು.

Advertisement

ಇತ್ತೀಚೆಗೆ ಉಳ್ಳಾಲ ಪ್ರದೇಶದಲ್ಲಿ ಡ್ರಗ್‌ ಮಾಫಿಯಾಕ್ಕೆ ಜುಬೈರ್‌ ಎಂಬ ವ್ಯಕ್ತಿಯನ್ನು ಕೊಲೆಗೈಯ್ಯಲಾಗಿದೆ. ಜತೆಗೆ ಉಳ್ಳಾಲ, ಬೆಂಗ್ರೆಯಂತಹ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್‌ ಜಾಲದ ಬಗ್ಗೆ ಕೆಲವು ಪತ್ರಿಕೆಗಳು ವರದಿ ಕೂಡ ಮಾಡಿದೆ. ಬೆದರಿಕೆ, ಹಲ್ಲೆಗಳು ನಡೆಯುತ್ತಿದ್ದು, ಡ್ರಗ್‌ ಮಾಫಿಯಾ ವಿರುದ್ಧ ಕೆಲಸ ಮಾಡುವ ಜನರಿಗೆ ಧೈರ್ಯ ತುಂಬುವಂತಹ ಕೆಲಸಗಳು ಆಗಬೇಕಾದ ಆವಶ್ಯಕತೆ ಇದೆ ಎಂದು ಎಸ್‌ಐಒ ಮನವಿಯಲ್ಲಿ ಒತ್ತಾಯಿಸಿದೆ.

ಕೇರಳ ಮಾದರಿ ಕಾರ್ಯಾಚರಣೆಗೆ ಒತ್ತಾಯ
ಮಾದಕ ಪದಾರ್ಥಗಳ ಮಾರಾಟ ಜಾಲದ ಮೂಲವನ್ನು ಪತ್ತೆ ಹಚ್ಚಿ, ಶೀಘ್ರವೇ ಅದರ ನಿರ್ಮೂಲನೆ ಮಾಡಬೇಕು. ಕೇರಳ ಮಾದರಿ ಆ್ಯಂಟಿ ಡ್ರಗ್‌ ಪೊಲೀಸ್‌ ಕಾರ್ಯಾಚರಣೆಯನ್ನು (ವಿದ್ಯಾರ್ಥಿಗಳ ಹೆಸರು ಬಯಲು ಮಾಡದೆ ಕ್ಯಾಂಪಸ್‌ ಮುಖ್ಯಸ್ಥರು ಮತ್ತು ವಿದ್ಯಾರ್ಥಿಯ ಪೋಷಕರ ಮಧ್ಯಸ್ಥಿಕೆಯಲ್ಲಿ ಅದನ್ನು ಪರಿಹರಿಸಬೇಕು.) ನಡೆಸಬೇಕು. ಮಾದಕ ವ್ಯಸನಿಗಳ ಪುನರ್ವಸತಿಯ ಕುರಿತು ಪೋಲಿಸ್‌ ಇಲಾಖೆಯು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿಗಾಗಿ ನಿರಂತರ ಶ್ರಮಿಸಬೇಕು ಸೇರಿದಂತೆ ಇನ್ನಿತರ ಮನವಿ ಸಲ್ಲಿಸಿದರು.

ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯಿಲ್‌ ನೇತೃತ್ವದ ನಿಯೋಗದಲ್ಲಿ ಎಸ್‌ಐಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್‌ ವೇಣೂರ್‌, ಜಿಲ್ಲಾ ಕ್ಯಾಂಪಸ್‌ ಕಾರ್ಯದರ್ಶಿ ಅಫ್ನಾನ್‌ ಹಸನ್‌, ನಗರ ಕಾರ್ಯದರ್ಶಿ ಮುಂಝಿರ್‌ ಅಹ್ಸನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next