Advertisement

ದ.ಕ.: ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌: 5 ಸಾವಿರ ಕಿಟ್‌ ವಿತರಿಸಲು ಕ್ರಮ

01:26 AM Jan 23, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೆಚ್ಚಿನ ಮಂದಿಯಲ್ಲಿ ಸೌಮ್ಯ ಗುಣಲಕ್ಷಣ ಕಂಡುಬರುತ್ತಿದೆ. ಕೋವಿಡ್‌ ದೃಢಪಟ್ಟು ಗೃಹ ನಿಗಾವಣೆಯಲ್ಲಿರುವವರಿಗೆ ಔಷಧಗಳ ಪ್ರತ್ಯೇಕ ಕಿಟ್‌ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ಪ್ರಸ್ತುತ ಮೂರನೇ ಅಲೆಯಲ್ಲಿ ಸೋಂಕುಪೀಡಿತರಲ್ಲಿ ಹೆಚ್ಚಿನವರಿಗೆ ಸೌಮ್ಯ ಲಕ್ಷಣಗಳಷ್ಟೇ ಕಂಡುಬರುತ್ತಿವೆ. ಹೆಚ್ಚಿನವರಿಗೆ ಆಸ್ಪತ್ರೆ ದಾಖಲಾತಿಯ ಅಗತ್ಯ ಬೀಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಥವರನ್ನು ಹೋಂ ಐಸೋಲೇಶನ್‌ನಲ್ಲಿ ಇರಿಸಲು ರಾಜ್ಯ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ. ಅವರಿಗೆ ಮನೆಯಲ್ಲಿಯೇ ಆರೈಕೆ ಪಡೆದುಕೊಳ್ಳಲು ಔಷಧಗಳುಳ್ಳ ಕಿಟ್‌ ವಿತರಿಸಲು ಸೂಚನೆ ನೀಡಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪತ್ತೆಯಾದ ಶೇ. 80ರಷ್ಟು ಸೋಂಕುಪೀಡಿತರು ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ. ಅವರಿಗೆ ಆರೋಗ್ಯ ಇಲಾಖೆಯಿಂದ ಸುಮಾರು 5 ಸಾವಿರ ಕಿಟ್‌ ನೀಡಲು ನಿರ್ಧರಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ ತಾಲೂಕು ಆರೋಗ್ಯ ಇಲಾಖೆಗೆ ಕಿಟ್‌ ರವಾನಿಸಲಾಗಿದ್ದು, ಅಲ್ಲಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸೋಂಕುಪೀಡಿತರ ಮನೆಗೆ ತಲುಪಿಸಲಾಗುತ್ತಿದೆ.

ಕಿಟ್‌ನಲ್ಲಿ ಏನೇನಿದೆ?
ಹೋಂ ಐಸೋಲೇಶನ್‌ನಲ್ಲಿ ಇದ್ದವರಿಗೆ ಈ ಹಿಂದೆ ಮಾತ್ರೆಗಳನ್ನು ಕೈಯಲ್ಲಿ ಕೊಡಲಾಗುತ್ತಿತ್ತು. ಆದರೆ ಈಗ ಕಿಟ್‌ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಮೂರು ಪದರಗಳುಳ್ಳ ಹತ್ತು ಮಾಸ್ಕ್ಗಳು, ಸ್ಯಾನಿಟೈಸರ್‌ ಬಾಟಲ್‌, ಕೆಮ್ಮಿನ ಸಿರಪ್‌ ಬಾಟಲ್‌, ಪ್ಯಾರಸಿಟಮಾಲ್‌ ಮಾತ್ರೆ, ಶೀತದ ಮಾತ್ರೆ, ವಿಟಮಿನ್‌-ಸಿ ಮಾತ್ರೆ ಮತ್ತು ಔಷಧ ಸೇವನೆ ಹೇಗೆ ಎಂಬ ವಿವರಗಳಿರುವ ಕೈಪಿಡಿ ಇರುತ್ತದೆ.

ಸೌಮ್ಯ ಲಕ್ಷಣಗಳಿದ್ದು, ಹೋಂ ಐಸೋಲೇಶನ್‌ಗೆ ಒಳಗಾಗುವ ಕೊರೊನಾ ಸೋಂಕುಪೀಡಿತರಿಗೆ ಆರೋಗ್ಯ ಇಲಾಖೆಯ ಮೂಲಕ ನೀಡುವ ಕಿಟ್‌ನಲ್ಲಿ ಒಟ್ಟು 5 ದಿನ ಉಪಯೋಗಿಸಬೇಕಾದ ಔಷಧ ಇರಲಿದೆ. ಜತೆಗೆ ಈ ಔಷಧಗಳನ್ನು ಹೇಗೆ ಉಪಯೋಗಿಸಬೇಕು ಎಂಬ ಸೂಚನೆಗಳು ಇರುವ ಕೈಪಿಡಿಯೂ ಇರುತ್ತದೆ.
ಡಾ| ಕಿಶೋರ್‌ ಕುಮಾರ್‌ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next