Advertisement

ಬರದ ಛಾಯೆಗೆ ಅನ್ನದಾತರು ಹೈರಾಣ

10:48 AM May 27, 2019 | Team Udayavani |

ಚಿಕ್ಕನಾಯಕನಹಳ್ಳಿ: ತಾಲೂಕಿನ ಬರದ ಛಾಯೆಗೆ ರೈತರು ಹೈರಾಣಗಿದ್ದು, ಸಾವಿರಾರು ಆಡಿ ಕೊಳವೆ ಬಾವಿ ಕೊರೆಸಿದರು ನೀರು ಬರುವ ನಂಬಿಕೆ ಇಲ್ಲವಾಗಿದೆ. ಮಳೆ ಬೆಳೆ ಇಲ್ಲದೇ ರೈತರು ಜೀವನ ಸಾಗಿಸುವುದೇ ಕಷ್ಟವಾಗಿದೆ.

Advertisement

ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿನ ಸಮಸ್ಯೆ, ತೋಟಗಳಲ್ಲಿ ನೀರಿಲ್ಲದೇ ಬತ್ತಿ ಹೋಗಿರುವ ಬೋರ್‌ವೇಲ್ಗಳು, ಹೊಲಗಳಲ್ಲಿ ಮಳೆ ಇಲ್ಲದೇ ಒಣಗಿ ನಿಂತಿರುವ ಬೆಳೆಗಳನ್ನು ನೋಡಿ, ಅರಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ರೈತರಲ್ಲಿ ಕಾಡುತ್ತಿದೆ. ತಾಲೂಕಿನಲ್ಲಿ ಕೂಲಿಗಳು ಸಿಗದೇ ದಿನ ನಿತ್ಯದ ಖರ್ಚು ಪೂರೈಸಿಕೊಳ್ಳದ ಸ್ಥಿತಿ ಕೂಲಿಕಾರದ್ದಾಗಿದೆ. ಒಟ್ಟಿನಲ್ಲಿ ಮಳೆರಾಯನ ಮುನಿಸಿಗೆ ತಾಲೂಕು ತತ್ತರಿಸಿ ಹೋಗುತ್ತಿದೆ.

ಹನಿ ನೀರಿಗೂ ಪರದಾಟ: ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಕುಡಿಯುವ ಹಾಗೂ ದಿನ ಬಳಕೆಯ ನೀರನ್ನು ಪೂರೈಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹನಿ ನೀರಿಗಾಗಿ ನಲ್ಲಿಗಳ ಮುಂದೆ ಕೆಲಸ- ಕಾರ್ಯಗಳನ್ನು ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿಂಗಳು ಕಳೆದರು ಸರ್ಕಾರಿ ಕುಡಿಯುವ ನೀರಿನ ನಲ್ಲಿಗಳಲ್ಲಿ ನೀರಿನ ದರ್ಶನವೇ ಆಗದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.

ನಿಂತು ಹೋಗುತ್ತಿವೆ ಬೋರ್‌ಗಳು: ತಾಲೂಕಿನಲ್ಲಿ ಅಂತರ್ಜಲ ಮಟ್ಟ 1500 ಆಡಿ ತಲುಪಿದೆ. ಕೊಳವೆ ಬಾವಿ ಕೊರೆಸಿದರು ಎಷ್ಟು ದಿನಗಳು ನೀರು ಬರುತ್ತದೆ ಎಂಬ ನಂಬಿಕೆ ಇಲ್ಲವಾಗಿದೆ. ನೀರು ಬರುತ್ತಿರುವ ಕೊಳವೆ ಬಾವಿಗಳಲ್ಲಿ ಮುನ್ಸೂಚನೆ ಇಲ್ಲದೇ ನೀರು ನಿಂತು ಹೋಗುತ್ತಿವೆ. ಲಕ್ಷಾಂತರ ರೂ. ವಿನಿಯೋಗಿಸಿ, ಕೊರೆಸಿದ ಕೊಳವೆ ಬಾವಿಗೆ ಯಾವ ಗ್ಯಾರಂಟಿ, ವಾರಂಟಿಯೂ ಸಹ ಇಲ್ಲವಾಗಿದೆ. ರೈತರು ಸಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಸರ್ಕಾರದ ಸುಮಾರು 1475 ಬೋರ್‌ವೇಲ್ಗಳಿದ್ದು, ಇವುಗಳ ಪೈಕಿ 600 ಬೊರ್‌ವೇಲ್ಗಳಲ್ಲಿ ಮಾತ್ರ ಕುಡಿಯುವ ನೀರು ಬರುತ್ತಿದೆ. ದಿನನಿತ್ಯ ಒಂದಲ್ಲ ಒಂದು ಬೋರ್‌ವೇಲ್ ನೀರಿಲ್ಲದೇ ಬತ್ತಿ ಹೋಗುತ್ತಿದ್ದು, ರೈತರಲ್ಲಿ ಅತಂಕ ಹೆಚ್ಚಾಗುತ್ತಿದೆ.

ಟ್ಯಾಂಕರ್‌ನಲ್ಲಿ ನೀರು ಸರಬರಾಜು: ತಾಲೂಕಿನ ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿನ ಕೆಲ ಗ್ರಾಮಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. . ಪಟ್ಟಣದಲ್ಲಿ ನೀರಿನ ತೊಂದರೆ ಹೆಚ್ಚಾದ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಡರ್‌ ಕರೆದು ಸುಮಾರು ಒಂದು ವಾರ ಕಳೆದರೂ ಟ್ಯಾಂಕರ್‌ ನೀರನ್ನು ಸರಬರಾಜು ಮಾಡದೆ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.

Advertisement

ಬದುಕು ನಡೆಸುವುದೇ ಕಷ್ಟ: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕೃಷಿ ಮೂಲ ಕಸುಬಾಗಿದೆ. ಬಹುತೇಕ ಕುಟುಂಬಗಳು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ಮಳೆರಾಯನ ಆಟಕ್ಕೆ ರೈತರ ಜೀವನ ಡೊಲಾಯಮಾನವಾಗಿದ್ದು, ಹೊಲ- ತೋಟಗಳಲ್ಲಿ ಕೆಲಸವಿಲ್ಲ. ತೆಂಗಿನ ಮರಗಳಲ್ಲಿ ಕಾಯಿಗಳಿಲ್ಲ, ಆಡಿಕೆ ಹೊಂಬಾಳೆ ನೀರಿಲ್ಲದೇ ಒಣಗಿ ನಿಂತಿವೆ. ಮನೆ ಅಟ್ಟಗಳಲ್ಲಿ ಕೊಬ್ಬರಿ ಖಾಲಿ. ಕೃಷಿ ನಂಬಿಕೊಂಡಿರುವವರ ಪಾಡು ಹೇಳ ತೀರದಾಗಿದೆ.

ತಾಲೂಕಿನಲ್ಲಿ ಕೆಲಸ ನೀಡುವಂತ ಒಂದೇ ಒಂದು ಕಾರ್ಖಾನೆಗಳಿಲ್ಲ, ಕೆಲಸ ಹರಸಿ ಸುತ್ತಾಡಿದರು ಸಹ ಒಂದು ಕೆಲಸ ಸಿಗುತ್ತಿಲ್ಲ. ಕಟ್ಟಡ ಕಾಮಾಗಾರಿ ಕೆಲಸಗಳು ಹಾಗೂ ಕಟ್ಟಡ ಗುತ್ತಿಗೆದಾರರು ಸ್ವಲ್ಪ ಮಟ್ಟಿನ ಕೆಲಸ ನೀಡುತ್ತಿದ್ದು, ಇದನ್ನು ಹೊರತುಪಡಿಸಿದರೆ ತಾಲೂಕಿನಲ್ಲಿ ದಿನನಿತ್ಯ 10 ರೂ.ಗಳನ್ನು ಬಂಡವಾವಿಲ್ಲದೆ ದುಡಿಯುವುದು ಅಸಾಧ್ಯವಾಗಿದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಜೀವನ ನಡೆಸುವುದು ಮುಳ್ಳಿನ ಹಾದಿಯಾಗಿದೆ.

ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ: ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಜನರಿಗೆ ಭರವಸೆ ನೀಡುತ್ತವೆ. ಆದರೆ, ಚುನಾವಣೆ ಮುಗಿದ ನಂತರ ನೀರಾವರಿ ಯೋಜನೆಗಳ ಮಾತೇ ಇಲ್ಲವಾಗುತ್ತಿದೆ. ಮತ ಪಡೆಯಲು ನೀರು ನೀಡುವ ತಂತ್ರವಾಗಿದೆ. ಒಂದು ವೇಳೆ ತಾಲೂಕಿನ ಕೆರೆಗಳು ತುಂಬದಿದ್ದರೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಎರಡು ಸಾವಿರ ಆಡಿ ಬೋರ್‌ವೇಲ್ ಕೊರೆಸಿದರು ಸಹ, ನೀರು ಬಾರದಾಗುತ್ತದೆ. ಆರೆ ಮಲೆನಾಡು ಎನ್ನಿಸಿಕೊಂಡಿರುವ ತಾಲೂಕು ಮುಂದಿನ ದಿನಗಳಲ್ಲಿ ನೀರಿಲ್ಲದೇ ಮರುಭೂಮಿಯಾಗುವುದರಲ್ಲಿ ಅನುಮಾನವಿಲ್ಲ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಲೂಕಿನಲ್ಲಿನ ಅಗತ್ಯವಾಗಿ ಬೇಕಾಗಿರುವ ಮೂಲ ಸೌಲಭ್ಯಗಳನ್ನು ನೀಡಲು ವಿಫ‌ಲರಾಗಿದ್ದಾರೆ. ರೈತರಿಗೆ ನೀರಾವರಿ, ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸುಲಭವಾಗಿ ಸಿಕ್ಕಿದರೆ, ಬೇರೆ ಯಾವ ಕೆಲಸಗಳನ್ನು ಸಹ ಇವರು ನಿರೀಕ್ಷೆ ಮಾಡುವುದಿಲ್ಲ. ಅಧಿಕಾರವಿರುವ ಜನರು ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ತಾಲೂಕಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

● ಚೇತ‌ನ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next