Advertisement
ಸಾಮಾನ್ಯವಾಗಿ ರಾಜ್ಯದಲ್ಲಿ ಒಟ್ಟಾರೆ ಮುಂಗಾರಿನ ಪೈಕಿ ಶೇ.30ರಷ್ಟು ಮಳೆ ಜುಲೈನಲ್ಲೇ ಬೀಳುತ್ತದೆ. ಜುಲೈ 15 ಮುಗಿದರೂ ಮಲೆನಾಡಿನಲ್ಲೇ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟಾರೆ ಸರಾಸರಿ ಶೇ.19ರಷ್ಟು ಮಳೆ ಖೋತಾ ಆಗಿದೆ. 1,323 ಗ್ರಾಮಗಳಿಗೆ ಈಗಲೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಆಗುತ್ತಿದ್ದು, 250 ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದೆ. ಬಿತ್ತನೆಯಲ್ಲಿ ಇನ್ನೂ ಚೇತರಿಕೆ ಕಂಡು ಬಂದಿಲ್ಲ. ಜಲಾಶಯಗಳಿಗೆ ಇನ್ನೂ ಸಮರ್ಪಕ ನೀರು ಹರಿಯುತ್ತಿಲ್ಲ. ಆದರೆ, ಈ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರ ಸುಳಿವು ಕೂಡ ಅಲ್ಲಿಲ್ಲ.
Related Articles
Advertisement
ಈ ಶಾಸಕರು ರೆಸಾರ್ಟ್ ಸೇರಿ ನಾಲ್ಕೈದು ದಿನಗಳಾಗಿದ್ದರೂ ಕ್ಷೇತ್ರದತ್ತ ಮುಖ ಮಾಡಿ ಬಹುತೇಕ ದಿನಗಳೇ ಕಳೆದಿವೆ. ಸರಿಸುಮಾರು ಲೋಕಸಭಾ ಚುನಾವಣೆ ನಂತರದಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಗಿನಿಂದಲೇ ಕೆಲವರು ದೂರ ಉಳಿದಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇನ್ನು ನಗರದ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಆಗೊಮ್ಮೆ-ಈಗೊಮ್ಮೆ ಕ್ಷೇತ್ರದ ಕಡೆಗೆ ಇಣುಕು ಹಾಕಿ ಬರುತ್ತಿದ್ದಾರೆ.
ಈ ಮಧ್ಯೆ ಮಲೆನಾಡಿನ ಕೊಡಗು (ಶೇ. 46), ಚಿಕ್ಕಮಗಳೂರು (ಶೇ. 31), ಕರಾವಳಿಯ ದಕ್ಷಿಣ ಕನ್ನಡ (ಶೇ. 46), ಉಡುಪಿ (ಶೇ. 32), ಹೈದರಾಬಾದ್ ಕರ್ನಾಟಕದ ಬೀದರ್ (ಶೇ. 42), ಕಲಬುರಗಿ (ಶೇ. 27), ರಾಯಚೂರು (ಶೇ. 28), ಯಾದಗಿರಿ (ಶೇ. 34)ಯಲ್ಲಿ ಜುಲೈ 1ರಿಂದ ಜುಲೈ 15ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಕೊರತೆ ಇರುವುದು ಕಂಡು ಬಂದಿದೆ. ಮಲೆನಾಡಿನಲ್ಲಿ ಮಳೆ ಕೊರತೆ ಇರುವುದರಿಂದ ಈ ಬಾರಿ ಸಮಸ್ಯೆ ಎಂದಿಗಿಂತ ಗಂಭೀರವಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಸಮಿತಿಗಳ ಕತೆ ಏನು?: ವಿಧಾನಸಭೆಯಲ್ಲಿ ಒಟ್ಟಾರೆ 16 ಸಮಿತಿಗಳಿವೆ. ಇವುಗಳಲ್ಲದೆ, ಸ್ಥಳೀಯ ಮಟ್ಟದಲ್ಲೂ ಶಾಸಕರನ್ನು ಒಳಗೊಂಡ ಹತ್ತು ಹಲವು ಸಮಿತಿಗಳು ಇರುತ್ತವೆ. ಹೀಗೆ ಶಾಸಕರು ಬಿಟ್ಟು ಹೋದರೆ, ಆ ಸಮಿತಿಗಳ ಕತೆ ಏನು ಎಂಬ ಪ್ರಶ್ನೆಯೂ ಈಗ ಉದ್ಭವಿಸಿದೆ.
* ವಿಜಯಕುಮಾರ ಚಂದರಗಿ